ಮಂಗಳವಾರ, ಸೆಪ್ಟೆಂಬರ್ 29, 2020
22 °C
ವೇಳಾಪಟ್ಟಿ ಪ್ರಕಟಿಸಿದ ರಾಜ್ಯ ಚುನಾವಣಾ ಆಯೋಗ

ಬಿಬಿಎಂಪಿ ಮತದಾರರ ಪಟ್ಟಿ: ನವೆಂಬರ್‌ ಅಂತ್ಯಕ್ಕೆ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿಗೆ ಚುನಾವಣೆ ನಡೆಸುವ ಸಂಬಂಧ ಮತದಾರರ ಪಟ್ಟಿ ಸಿದ್ಧಪಡಿಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ಅದರ ಪ್ರಕಾರ ನವೆಂಬರ್ 30ರಂದು ಮತದಾರರ ಅಂತಿಮ ಪಟ್ಟಿ ಸಿದ್ಧವಾಗಲಿದೆ.

ಬಿಬಿಎಂಪಿ ಚುನಾಯಿತ ಕೌನ್ಸಿಲ್ ಅವಧಿ ಸೆ.10ಕ್ಕೆ ಮುಗಿಯಲಿದೆ. ಮತದಾರರ ಪಟ್ಟಿಯೇ ಸಿದ್ಧವಿಲ್ಲದ ಕಾರಣ ಚುನಾವಣೆ ಕನಿಷ್ಠ ಆರು ತಿಂಗಳು ಮುಂದೂಡಿಕೆಯಾಗುವುದು ಖಚಿತ ಎಂದು ಮೂಲಗಳು ಹೇಳಿವೆ. 

ವಾರ್ಡ್‌ಗಳನ್ನು 2011ರ ಜನಗಣತಿ ಆಧಾರದಲ್ಲಿ ಮರುವಿಂಗಡಣೆ ಮಾಡಿರುವುದರಿಂದ ಬಹುತೇಕ ವಾರ್ಡ್‌ಗಳ ಗಡಿಗಳು ಬದಲಾಗಿವೆ. ಹಲವೆಡೆ ಮತಗಟ್ಟೆಗಳೂ ಬದಲಾಗಿವೆ. ಕೆಲವು ವಾರ್ಡ್‌ಗಳಿಗೆ ಹೊಸ ಪ್ರದೇಶಗಳು ಸೇರ್ಪಡೆಯಾಗಿರುವುದರಿಂದ ಹಾಗೂ ಮತ್ತೆ ಕೆಲವು ವಾರ್ಡ್‌ಗಳ ವ್ಯಾಪ್ತಿ ಕಡಿಮೆಯಾಗಿರುವುದರಿಂದ ಮತಗಟ್ಟೆಗಳ ವ್ಯಾಪ್ತಿಗೆ ಬರುವ ಒಟ್ಟು ಮತದಾರರ ಸಂಖ್ಯೆಗಳೂ ಬದಲಾಗಿವೆ. ಹಾಗಾಗಿ, ಇಡೀ ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕಾಗಿದೆ.

‘ಮತದಾರರ ಪಟ್ಟಿ ಸಿದ್ಧಪಡಿಸುವ ಕಾರ್ಯವನ್ನು ಇದೇ 20ರಿಂದ ಆರಂಭಿಸಬೇಕು. ಅಕ್ಟೋಬರ್ 19ರಂದು ಕರಡು ಪಟ್ಟಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಬೇಕು. ಆಕ್ಷೇಪಣೆ ಆಧರಿಸಿ ಅಂತಿಮ ಪಟ್ಟಿ ಸಿದ್ಧಪಡಿಸಿ ನವೆಂಬರ್ 30ರಂದು ಪ್ರಕಟಿಸಬೇಕು‘ ಎಂದು ಆಯೋಗ ಸುತ್ತೋಲೆ ಹೊರಡಿಸಿದೆ.

‘ಮತದಾರರ ಪಟ್ಟಿ ಸಿದ್ಧಪಡಿಸುವಾಗ ಕರಾರುವಕ್ಕಾಗಿ ವಿಭಜನೆ ಮಾಡಬೇಕು. ಒಂದು ಮತಗಟ್ಟೆಗೆ 400ಕ್ಕಿಂತ ಕಡಿಮೆ ಮತ್ತು 1400ಕ್ಕಿಂತ ಹೆಚ್ಚು ಮತದಾರರು ಪಟ್ಟಿಯಲ್ಲಿ ಸೇರದಂತೆ ನೋಡಿಕೊಳ್ಳಬೇಕು. ಗಡಿಗಳನ್ನು ಸರಿಯಾಗಿ ಗುರುತಿಸಬೇಕು’ ಎಂದು ಬಿಬಿಎಂಪಿಗೆ ಆಯೋಗ ಸೂಚಿಸಿದೆ.

‘ಬಿಬಿಎಂಪಿ ವ್ಯಾಪ್ತಿಯ ಮತದಾರರು ಕೈಬಿಟ್ಟು ಹೋಗದಂತೆ, ವ್ಯಾಪ್ತಿಗೆ ಒಳಪಡದ ಮತದಾರರು ಪಟ್ಟಿಯಲ್ಲಿ ಸೇರ್ಪಡೆಯಾಗದಂತೆ ಎಚ್ಚರ ವಹಿಸಬೇಕು. ಮತದಾರರ ಹೆಸರುಗಳು ಎರಡು ಪಟ್ಟಿಯಲ್ಲಿ ಸೇರ್ಪಡೆಯಾಗದಂತೆ ನೋಡಿಕೊಳ್ಳಬೇಕು. ವಾರ್ಡ್‌ವಾರು ಮತದಾರರ ಪಟ್ಟಿಯನ್ನು ಆಯಾ ವಿಧಾನಸಭಾ ಕ್ಷೇತ್ರವಾರು ಒಟ್ಟುಗೂಡಿಸಿದಾಗ ಹಾಲಿ ಇರುವ ವಿಧಾನಸಭಾ ಮತದಾರರ ಪಟ್ಟಿಯಲ್ಲಿನ ಸಂಖ್ಯೆ ಮೀರದಂತೆ ಮತ್ತು ಕಡಿಮೆಯಾಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದೆ.

‘ವಲಯ ಜಿಲ್ಲಾ ಚುನಾವಣಾಧಿಕಾರಿಯು ಶೇ 50ರಷ್ಟು ಭೌತಿಕ ಪರಿಶೀಲನೆ ನಡೆಸಬೇಕು. ಮತದಾರರ ನೋಂದಣಾಧಿಕಾರಿ ಮತ್ತು ಸಹಾಯಕ ನೋಂದಣಾಧಿಕಾರಿಯು ಶೇ 100ರಷ್ಟು ಭೌತಿಕ ಪರಿಶೀಲನೆ ನಡೆಸಬೇಕು. ಪಟ್ಟಿಯಲ್ಲಿ ದೋಷಗಳು ಉಂಟಾಗದಂತೆ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಎಚ್ಚರ ವಹಿಸಬೇಕು. ದೋಷಗಳು ಕಂಡುಬಂದರೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯನ್ನೇ ಹೊಣೆ ಮಾಡಲಾಗುವುದು’ ಎಂದು ಆಯೋಗ ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು