ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರದಲ್ಲಿ ಸಂಚಾರ ದಟ್ಟಣೆ, ನೀರಿನ ಬವಣೆ

Last Updated 13 ಮಾರ್ಚ್ 2020, 22:24 IST
ಅಕ್ಷರ ಗಾತ್ರ
ADVERTISEMENT
""

ಬೆಳ್ಳಂದೂರು:ಸಿಲಿಕಾನ್ ಸಿಟಿಯ ಐ.ಟಿ ಕಂಪನಿಗಳ ತವರು ಎಂದು ಕರೆಸಿಕೊಳ್ಳುವ ಬೆಳ್ಳಂದೂರು ವಾರ್ಡ್‌ 24.57 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿದೆ. ಬೆಳ್ಳಂದೂರು, ಅಂಬಲಿಪುರ, ಹರಳೂರು, ಕಸವನಹಳ್ಳಿ, ಕೈಕೊಂಡ್ರಹಳ್ಳಿ, ದೊಡ್ಡಕನ್ನಲ್ಲಿ, ಕಾಡುಬೀಸನಹಳ್ಳಿ, ಮುನ್ನೇನಕೊಳಾಲು, ಕರಿಯಮ್ಮನ ಅಗ್ರಹಾರ, ಕೆಂಪಾಪುರ, ಚಲ್ಲಘಟ್ಟ, ಬೇಗೂರು ನಾಗಸಂದ್ರ, ದೇವರ ಬೀಸನಹಳ್ಳಿ ಈ ವಾರ್ಡ್‌ ವ್ಯಾಪ್ತಿಯಲ್ಲಿವೆ.

ವಿಸ್ತಾರದಲ್ಲಿ ಅತ್ಯಂತ ದೊಡ್ಡ ವಾರ್ಡ್‌ ಇದಾಗಿದೆ. 16 ಹಳ್ಳಿಗಳಲ್ಲಿ ಎರಡು ಹಳ್ಳಿಗಳನ್ನು ಹೊರತುಪಡಿಸಿದರೆ ಉಳಿದವು ಪಾಲಿಕೆಗೆ ಹೊಸತಾಗಿ ಸೇರ್ಪಡೆಯಾದ ಹಳ್ಳಿಗಳು. ಈ ಹಳ್ಳಿಗಳಲ್ಲಿ ಕಾವೇರಿ ನೀರಿನ ಸಂಪರ್ಕ ಮತ್ತು ಒಳಚರಂಡಿ ನಿರ್ಮಾಣ ಮಾಡುವ 110 ಹಳ್ಳಿ ಯೋಜನೆ ಕಾಮಗಾರಿ ನಡೆಯುತ್ತಿದೆ. ಬೆಳ್ಳಂದೂರು ಮುಖ್ಯರಸ್ತೆ ಸೇರಿ ಉಳಿದ ಹಳ್ಳಿಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.‌ ಅಗೆದ ರಸ್ತೆಯಲ್ಲಿನ ದೂಳಿನ ನಡುವೆ ಜನ ಉಸಿರು ಬಿಗಿ ಹಿಡಿದು ಬದುಕು ಮುಂದುವರಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ. ಹರಳೂರು ಮತ್ತು ಕಸವನಹಳ್ಳಿಯಲ್ಲಿ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಮುಗಿದಿದ್ದು, ನೀರು ಪೂರೈಕೆ ಕೂಡ ಆಗುತ್ತಿದೆ. ಉಳಿದ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. 1,500 ಅಡಿ ಆಳವನ್ನು ದಾಟಿದರೂ, ಕೊಳವೆ ಬಾವಿಗಳಲ್ಲಿ ನೀರಿಲ್ಲ. ಟ್ಯಾಂಕರ್‌ಗಳಲ್ಲಿ ಬರುವ ನೀರೇ ಜೀವ ಉಳಿಸುವ ಜಲವಾಗಿದೆ ಎನ್ನುತ್ತಾರೆ ಸ್ಥಳೀಯರು.

ಗರುಡಾಚಾರ್ ಪಾಳ್ಯ
ವೈಟ್‌ಫೀಲ್ಡ್ ಪಕ್ಕದಲ್ಲೇ ಇರುವ ಗರಡಾಚಾರ್ ಪಾಳ್ಯ ವಾರ್ಡ್‌, ಅಕ್ಕಪಕ್ಕದ ವಾರ್ಡ್‌ಗಳಿಗೆ ಹೋಲಿಸಿದರೆ ವಿಸ್ತೀರ್ಣದಲ್ಲಿ ಚಿಕ್ಕದು. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲೇ ಹೊಸದಾಗಿ ಪಾಲಿಕೆಗೆ ಸೇರ್ಪಡೆಯಾದ ಒಂದೇ ಒಂದು ಹಳ್ಳಿಯೂ ಇಲ್ಲದ ವಾರ್ಡ್‌ ಇದು. ಹೀಗಾಗಿ 110 ಹಳ್ಳಿ ಯೋಜನೆಯ ಕಾಮಗಾರಿಯ ಕಿರಿಕಿರಿ ಇಲ್ಲ. ಕಾವೇರಿ ನಗರ, ಆರ್‌ಎಚ್‌ಬಿ ಕಾಲೊನಿ, ಲಕ್ಷ್ಮೀಸಾಗರ ಲೇಔಟ್, ಗರುಡಾಚಾರ್ ಪಾಳ್ಯ, ಮಹೇಶ್ವರಿನಗರ, ಪಟ್ಟಂದೂರು ಅಗ್ರಹಾರ ಬಡಾವಣೆಗಳು ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಎಲ್ಲಾ ವಾರ್ಡ್‌ಗಳಿಗೂ ಕಾವೇರಿ ನೀರಿನ ಸಂಪರ್ಕ ಇದೆ. ಪಟ್ಟಂದೂರು ಅಗ್ರಹಾರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕಾವೇರಿ ನೀರು ಈ ಪ್ರದೇಶಕ್ಕೆ ಸಾಕಾಗುತ್ತಿಲ್ಲ. ಕೊಳವೆಬಾವಿಗಳು ಬತ್ತಿ ಹೋಗಿರುವ ಕಾರಣ ನೀರಿನ ಸಮಸ್ಯೆ ಈ ಭಾಗದಲ್ಲಿ ಉಲ್ಬಣಿಸಿದೆ. ಅಂತರ್ಜಲ ಕುಸಿತದಿಂದ ಬೇಸಿಗೆ ಆರಂಭದಲ್ಲೇ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಖಾಲಿ ನಿವೇಶನಗಳಲ್ಲಿ ಕಸ ಬೀಳುವುದು ತಪ್ಪಿಲ್ಲ. ಮಹೇಶ್ವರಿನಗರ ಮುಖ್ಯರಸ್ತೆಯಲ್ಲಿನ ಕೆರೆ ಪುನರುಜ್ಜೀವನಗೊಂಡಿದೆ. ಉಳಿದ ಕೆರೆಗಳು ಅಭಿವೃದ್ಧಿಯಾಗಬೇಕಿದೆ ಎನ್ನುತ್ತಾರೆ ನಿವಾಸಿಗಳು.

ದೊಡ್ಡನೆಕ್ಕುಂದಿ
ಕುಂದಲಹಳ್ಳಿ, ಕುಂದಲಹಳ್ಳಿ ಕಾಲೊನಿ, ಎಇಸಿಎಸ್‌ ಲೇಔಟ್‌, ಚಿನ್ನಪ್ಪನಹಳ್ಳಿ, ತೂಬರಹಳ್ಳಿ ಸೇರಿ ಹತ್ತಾರು ಬಡಾವಣೆಗಳನ್ನು ಈ ವಾರ್ಡ್‌ ಒಳಗೊಂಡಿದೆ. ಈ ವಾರ್ಡ್‌ನಲ್ಲಿ ಹೊರವರ್ತುಲ ರಸ್ತೆ ಹಾದು ಹೋಗಿದೆ. ಸಂಚಾರದ ದಟ್ಟಣೆಯಲ್ಲೇ ಅರ್ಧದಷ್ಟು ಜೀವನವನ್ನು ಈ ವಾರ್ಡ್‌ನ ಜನರು ಸವೆಸುತ್ತಿದ್ದಾರೆ. ಕುಂದಲಹಳ್ಳಿ ಗೇಟ್‌ ಬಳಿ ನಡೆಯುತ್ತಿರುವ ಕೆಳಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಗರ ಪ್ರದಕ್ಷಿಣೆ ವೇಳೆ ಕಾಮಗಾರಿ ವಿಳಂಬದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೂ, ಕಾಮಗಾರಿ ವೇಗ ಪಡೆದುಕೊಂಡಿಲ್ಲ. ಗುಂಡಿ ಬಿದ್ದಿರುವ ರಸ್ತೆಗಳು ವಾಹನ ಸಂಚಾರಕ್ಕೆ ಮತ್ತಷ್ಟು ಅಡ್ಡಿಯಾಗಿವೆ. ಮಳೆ ಬಂದರೆ ಕೆಸರು, ಬಿಸಿಲಿನಲ್ಲಿ ದೂಳು ಮತ್ತು ಹೊಗೆಯ ನಡುವೆ ನಿವಾಸಿಗಳು ಉಸಿರುಗಟ್ಟಿಕೊಂಡೇ ಜೀವನ ನಡೆಸುತ್ತಿದ್ದಾರೆ. ಕಸ ನಿರ್ವಹಣೆ ಮತ್ತು ಒಳಚರಂಡಿ ಸಮಸ್ಯೆಯೂ ಜನರನ್ನು ಕಾಡುತ್ತಿದೆ. ಹೊಸದಾಗಿ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳಲ್ಲಿ ಈ ವಾರ್ಡ್‌ನಲ್ಲಿರುವ ತೂಬರಹಳ್ಳಿಯೂ ಒಂದು. ಈ ವಾರ್ಡ್‌ನಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಇತರೆ ಬಡಾವಣೆಗಳಲ್ಲೂ ನೀರಿನ ಸಮಸ್ಯೆ ಇದೆ ಎನ್ನುತ್ತಾರೆ ನಿವಾಸಿಗಳು.

ಮಾರತ್ತಹಳ್ಳಿ

ಈ ವಾರ್ಡ್‌ ಕೂಡ ಹೊರ ವರ್ತುಲ ರಸ್ತೆಯ ಆಸುಪಾಸಿನಲ್ಲಿದೆ. ಇಲ್ಲಿಯೂ ಐ.ಟಿ ಕಂಪನಿ ಉದ್ಯೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಯಮಲೂರು, ಅಶೋಕನಗರ, ಅಗ್ರಹಾರ ಈ ವಾರ್ಡ್‌ ವ್ಯಾಪ್ತಿಯಲ್ಲಿವೆ. ಕಸ ನಿರ್ವಹಣೆ ಮತ್ತು ಕುಡಿಯುವ ನೀರಿನ ಸಮಸ್ಯೆ ಈ ವಾರ್ಡ್ ಜನರನ್ನು ಕಾಡುತ್ತಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಸಂಚಾರ ದಟ್ಟಣೆ ಸಮಸ್ಯೆಯೇ ಜನರಿಗೆ ಇರುವ ದೊಡ್ಡ ತಲೆನೋವು. ಮಾರತಹಳ್ಳಿಯಿಂದ ಎಚ್‌ಎಎಲ್‌, ಕುಂದಲಹಳ್ಳಿ, ಬೆಳ್ಳಂದೂರು ಮತ್ತು ಕೆ.ಆರ್.ಪುರ ಸೇರಿ ನಾಲ್ಕು ದಿಕ್ಕಿಗೂ ವಾಹನ ಸಂಚಾರ ಮಾಡುವುದೇ ದೊಡ್ಡ ಸವಾಲು. ಈ ಸವಾಲು ಹಿಮ್ಮೆಟ್ಟಲು ಮಾಡಿರುವ ಕಸರತ್ತುಗಳು ವಿಫಲವಾಗಿವೆ. ಹೊರ ವರ್ತುಲ ರಸ್ತೆಯಲ್ಲಿ ಬಸ್‌ಗಳ ಸಂಚಾರಕ್ಕೆ ಆದ್ಯತಾ ಪಥ ನಿರ್ಮಿಸಲಾಗಿದೆ. ಆದರೆ, ಆ ಪಥದಲ್ಲಿ ಬೇರೆ ವಾಹನಗಳ ಸಂಚಾರ ತಡೆಯಲು ಆಗಿಲ್ಲ. ಬಸ್ ಪಥದಲ್ಲಿ ಬೇರೆ ವಾಹನಗಳು ಬರದಂತೆ ತಡೆಯಲು ಎಫ್‌ಆರ್‌ಪಿ (ಫೈಬರ್ ರಿಇನ್‌ಫೋರ್ಸಡ್ ಪ್ಲಾಸ್ಟಿಕ್) ಬೊಲ್ಲಾರ್ಡ್‌ಗಳನ್ನು ಅಳವಡಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ಆದರೆ, ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.

**
ಪಾಲಿಕೆ ಸದಸ್ಯರು ಹೇಳುವುದೇನು

110 ಹಳ್ಳಿ ಯೋಜನೆಯಲ್ಲಿ ಕಾವೇರಿ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಬಹುತೇಕ ಮುಗಿದಿದೆ. ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ. ಕಾವೇರಿ ಸಂಪರ್ಕ ಪೂರ್ಣಗೊಂಡರೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರಕಲಿದೆ. ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗುತ್ತಿದೆ.
-–ಆಶಾ ಸುರೇಶ್, ಬೆಳ್ಳಂದೂರು ವಾರ್ಡ್ ಸದಸ್ಯೆ

**
ಎಲ್ಲಾ ಬಡಾವಣೆಗಳಿಗೂ ಕಾವೇರಿ ನೀರಿನ ಸಂಪರ್ಕ ಇದೆ. ಕೊಳವೆ ಬಾವಿಗಳಿಂದಲೂ ನೀರು ಪೂರೈಸಲಾಗುತ್ತಿದೆ. ಅಂತರ್ಜಲ ಕಡಿಮೆಯಾಗಿರುವ ಕಾರಣ ಸಮಸ್ಯೆ ಇರುವುದು ನಿಜ, ಸರಿಪಡಿಸುವ ಪ್ರಯತ್ನ ನಡೆದಿದೆ. ಈವರೆಗೆ ವಾರ್ಡ್‌ಗೆ ₹25 ಕೋಟಿ ಅನುದಾನ ತರಲಾಗಿದೆ. ಕಸ ಸುರಿಯುವ ಬ್ಲಾಕ್‌ ಸ್ಪಾಟ್‌ಗಳನ್ನು ಆಗಾಗ ತೆರವುಗೊಳಿಸುತ್ತಲೇ ಇದ್ದೇವೆ.
–ಬಿ.ಎನ್. ನಿತಿನ್ ಪುರುಷೋತ್ತಮ, ಗರುಡಾಚಾರ್ ಪಾಳ್ಯ ವಾರ್ಡ್‌ ಸದಸ್ಯ


ದೊಡ್ಡನೆಕ್ಕುಂದಿ ಮತ್ತು ಮಾರತಹಳ್ಳಿ ವಾರ್ಡ್‌ ಪಾಲಿಕೆ ಸದಸ್ಯರು ಪ್ರತಿಕ್ರಿಯೆಗೆ ಸಿಗಲಿಲ್ಲ

**

ಜನ ಏನಂತಾರೆ?

ಐ.ಟಿ ಕಂಪನಿಗಳೇ ಇರುವ ಬೆಳ್ಳಂದೂರು ವಾರ್ಡ್‌ನಿಂದ ಸರ್ಕಾರಕ್ಕೆ ಅತೀ ಹೆಚ್ಚು ವರಮಾನ ದೊರಕಲಿದೆ. ಈ ವಾರ್ಡ್‌ನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಮೂಲಸೌಕರ್ಯ ಒದಗಿಸಲು ಸರ್ಕಾರ ವಿಫಲವಾಗಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಯಾವ ಬಡಾವಣೆಗೆ ಕಾಲಿಟ್ಟರೂ ದೂಳಿನಿಂದ ತುಂಬಿ ಹೋಗಿದೆ.
-ಮಕ್ಕಾಂ ಸಾಬ್‌

ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ. ಸಂಚಾರ ದಟ್ಟಣೆಯೇ ದೊಡ್ಡ ಸಮಸ್ಯೆ. ಕಸದ ಸಮಸ್ಯೆ ಕೂಡ ‍ಪರಿಹಾರವಾಗಿಲ್ಲ. ರಾತ್ರಿ ವೇಳೆ ರಸ್ತೆ ಬದಿ ಕಸ ತಂದು ಸುರಿಯುವ ಜನರಿಗೆ ಕಡಿವಾಣ ಹಾಕಬೇಕು. ಅವರನ್ನು ಹಿಡಿದು ದಂಡ ಹಾಕದಿದ್ದರೆ ಸ್ವಚ್ಛತೆ ಕಾಪಾಡುವುದು ಕಷ್ಟ. ಈ ಕೆಲಸವನ್ನು ಬಿಬಿಎಂಪಿ ಅಧಿಕಾರಿಗಳು ಮಾಡಬೇಕು.
-ಸುಧಾ

ಕುಂದಲಹಳ್ಳಿ ಗೇಟ್‌ನಲ್ಲಿ ಕೆಳಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸಂಚಾರ ಮಾಡುವುದೇ ದುಸ್ತರವಾಗಿದೆ. ಕಾಮಗಾರಿಯನ್ನು ಕೂಡಲೇ ಮುಗಿಸಲು ಬಿಬಿಎಂಪಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು. ಕಸದ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಬೇಕು.
-ಹರೀಶ್

ಮಾರತಹಳ್ಳಿ ಮತ್ತು ಸುತ್ತಮುತ್ತಲ ವಾರ್ಡ್‌ಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆಯೇ ದೊಡ್ಡ ಸವಾಲು. ಬಸ್ ಆದ್ಯತಾ ಪಥದಲ್ಲಿ ಬಸ್‌ಗಳಷ್ಟೇ ಸಂಚಾರ ಮಾಡುವಂತೆ ನೋಡಿಕೊಳ್ಳಬೇಕು. ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‌.ಪುರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೊ ರೈಲು ಮಾರ್ಗ ನಿರ್ಮಾಣ ಮಾಡುವ ಯೋಜನೆಯನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಬೇಕು
-ಸಂತೋಷ್‌

**

ಪ್ರಮುಖ ಮೂರು ಸಮಸ್ಯೆಗಳು

ಬೆಳ್ಳಂದೂರು

* ದೂಳಿನ ನಡುವೆ ಜನಜೀವನ
* ಕುಡಿಯುವ ನೀರಿಗೂ ಭವಣೆ
* ಬತ್ತಿ ಹೋಗಿರುವ ಅಂತರ್ಜಲ

ಗರುಡಾಚಾರ್ ಪಾಳ್ಯ

* ಕೊಳವೆ ಬಾವಿಗಳಲ್ಲಿ ನೀರಿಲ್ಲ
* ರಸ್ತೆ ಬದಿ ಬೀಳುವ ಕಸ
* ರಾತ್ರಿ ಕಸ ಸುರಿಯುವ ಜನ

ದೊಡ್ಡನೆಕ್ಕುಂದಿ

* ಸಂಚಾರ ದಟ್ಟಣೆಯೇ ಸವಾಲು
* ಮುಗಿಯದ ಕೆಳಸೇತುವೆ ಕಾಮಗಾರಿ
* ಎಲ್ಲೆಂದರಲ್ಲಿ ಬೀಳುವ ಕಸ

ಮಾರತಹಳ್ಳಿ

* ಯಶಸ್ವಿಯಾಗದ ಬಸ್ ಆದ್ಯತಾ ಪಥ
* ಸಂಚಾರ ದಟ್ಟಣೆ ಸೀಳುವುದೇ ಸವಾಲು
* ಬೇಕಿದೆ ಮೆಟ್ರೊ ರೈಲು ಮಾರ್ಗ

ಜನಸಂಖ್ಯೆ 2011ರ ಜನಗಣತಿ ಪ್ರಕಾರ

ಬೆಳ್ಳಂದೂರು; 80,180

ಗರುಡಾಚಾರ್ ಪಾಳ್ಯ; 49,631

ದೊಡ್ಡನೆಕ್ಕುಂದಿ; 63,083

ಮಾರತಹಳ್ಳಿ; 39,768

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT