ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸಕ್ತ ವರ್ಷ ಬಿಬಿಎಂಪಿಯ ಆರ್ಥಿಕ ಹೊಣೆ ₹ 23 ಸಾವಿರ ಕೋಟಿ!

ಹೆಚ್ಚುತ್ತಲೇ ಇದೆ ಬಾಕಿ ಬಿಲ್‌ ಮೊತ್ತ * ಕಾಮಗಾರಿಗಳ ಅನುಷ್ಠಾನಕ್ಕೆ ಬೇಕು ₹ 18,667.23 ಕೋಟಿ
Last Updated 18 ಜೂನ್ 2021, 5:09 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 2021-22ನೇ ಸಾಲಿನ ₹ 9,951 ಕೋಟಿ ಗಾತ್ರದ ಬಜೆಟ್‌ಗೆ ನಗರಾಭಿವೃದ್ಧಿ ಇಲಾಖೆ ಜೂನ್‌ 15ರಂದು ಅನುಮೋದನೆ ನೀಡಿದೆ. ಆದರೆ, ಪಾಲಿಕೆಯು ಹಳೆ ಬಿಲ್‌ಗಳ ಪಾವತಿ ಬಾಕಿ ಸೇರಿ ಪ್ರಸಕ್ತ ಸಾಲಿನಲ್ಲಿ ₹23,272 ಕೋಟಿಗಳಷ್ಟು ಆರ್ಥಿಕ ಹೊಣೆಗಾರಿಕೆ ಹೊಂದಿದೆ.

ಬಿಬಿಎಂಪಿಯು ಬಜೆಟ್‌ನಲ್ಲಿ ಗೊತ್ತುಪಡಿಸಿದಷ್ಟು ಸಂಪನ್ಮೂಲ ಸಂಗ್ರಹಿಸಲು ಸಾಧ್ಯವಾಗದೇ ಇರುವುದರಿಂದ ಆರ್ಥಿಕ ಹೊರೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇವುಗಳಲ್ಲಿ ಬಾಕಿ ಬಿಲ್‌ಗಳು, ಪ್ರಗತಿಯಲ್ಲಿರುವ ಕಾಮಗಾರಿಗಳು, ಕಾರ್ಯಾದೇಶ ಹೊರಡಿಸಿ ಇನ್ನಷ್ಟೇ ಕಾಮಗಾರಿ ಆರಂಭವಾಗಬೇಕಿರುವಂತಹವು ಹಾಗೂ ಇನ್ನಷ್ಟೇ ಟೆಂಡರ್‌ ಕರೆಯಬೇಕಾದ ಕಾಮಗಾರಿಗಳ ಹೊಣೆಗಾರಿಕೆಯ ಮೊತ್ತವೇ ₹18,667 ಕೋಟಿಗಳಷ್ಟಾಗುತ್ತದೆ.

ಇನ್ನುಳಿದಂತೆ ಆಡಳಿತಾತ್ಮಕ ವೆಚ್ಚ, ಸಾಲ ಮರುಪಾವತಿ, ತೋಟಗಾರಿಕಾ ವಿಭಾಗದ ನಿರ್ವಹಣೆ ವೆಚ್ಚ, ಅರಣ್ಯ, ಸಾರ್ವಜನಿಕ ಮತ್ತು ವೈದ್ಯಕೀಯ ಆರೋಗ್ಯ ವಿಭಾಗಗಳ ನಿರ್ವಹಣೆ ವೆಚ್ಚ, ಕಸ ನಿರ್ವಹಣೆ, ಶಿಕ್ಷಣ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಸಂಗ್ರಹಿಸಿದ ಸೆಸ್‌ಗಳ ಮರುಪಾವತಿ ಸೇರಿ ಒಟ್ಟು ₹ 3,605 ಕೋಟಿಯನ್ನು ಈ ಆರ್ಥಿಕ ವರ್ಷದಲ್ಲಿ ವೆಚ್ಚ ಮಾಡಬೇಕಾಗುತ್ತದೆ. 110 ಹಳ್ಳಿಗಳ ಅಭಿವೃದ್ಧಿಗೆ ₹ 1 ಸಾವಿರ ಕೋಟಿ ವೆಚ್ಚ ಮಾಡಬೇಕಿದೆ.

ಕಾಮಗಾರಿಗಳಿಗೆ ಸಂಬಂಧಿಸಿದ ₹ 18,667.23 ಕೋಟಿ ಹೊಣೆಗಾರಿಕೆಯಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಅನುದಾನದಲ್ಲಿ ಕೈಗೊಳ್ಳುತ್ತಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಪಾವತಿಸಬೇಕಾದ ಮೊತ್ತ ₹8740.43 ಕೋಟಿ ಮಾತ್ರ. ಇನ್ನುಳಿದಂತೆ ₹ 9,926.80 ಕೋಟಿ ಹೊರೆ ಬಿಬಿಎಂಪಿ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳದ್ದೇ ಆಗಿದೆ.

‘ಆರ್ಥಿಕ ಹೊಣೆಗಾರಿಕೆಯ ಹೊರೆ ಹೆಚ್ಚುತ್ತಲೇ ಇರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಪಾಲಿಕೆಯು ತನ್ನ ಆಸ್ತಿಗಳನ್ನು ಅಡ ಇಟ್ಟು ಸಾಲ ಪಡೆಯುವಷ್ಟು ಆರ್ಥಿಕ ಸಂಕಷ್ಟಕ್ಕೆ ಈ ಹಿಂದೆ ಸಿಲುಕಿತ್ತು. ವಾಸ್ತವಕ್ಕಿಂತ ಹೆಚ್ಚು ಆದಾಯ ನಿರೀಕ್ಷಿಸಿ ಬಜೆಟ್‌ ಮಂಡಿಸುತ್ತಾ ಬಂದಿರುವುದೇ ಈ ಸ್ಥಿತಿಗೆ ಕಾರಣ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘2020–21ನೇ ಸಾಲಿನಲ್ಲಿ ಬಿಬಿಎಂಪಿ ₹11,972.89 ಕೋಟಿ ವರಮಾನ ನಿರೀಕ್ಷಿಸಿ ಬಜೆಟ್‌ ಮಂಡಿಸಿತ್ತು. ಆದರೆ, ಅಂತಿಮವಾಗಿ ಬಜೆಟ್ ಗಾತ್ರ ₹ 6799.04 ಕೋಟಿಗಷ್ಟೇ ಸೀಮಿತವಾಯಿತು. ಆಸ್ತಿ ತೆರಿಗೆ ಮತ್ತಿತರ ಮೂಲಗಳಿಂದ ಸಂಪನ್ಮೂಲ ಸಂಗ್ರಹಿಸಲು ನಿಗದಿಪಡಿಸುವ ಗುರಿ ತಲುಪಲು ಸಾಧ್ಯವಾಗುತ್ತಲೇ ಇಲ್ಲ. ಆಸ್ತಿ ತೆರಿಗೆ ಹಳೆ ಬಾಕಿ ವಸೂಲಿಯೂ ಕನ್ನಡಿಯೊಳಗಿನ ಗಂಟಿನಂತಾಗಿದೆ’ ಎಂದು ಅವರು ಪರಿಸ್ಥಿತಿ ವಿರಿಸಿದರು.

‘ಪ್ರಸಕ್ತ ಪರಿಸ್ಥಿತಿಯಲ್ಲಿ ಬಿಬಿಎಂಪಿ ₹ 23 ಸಾವಿರ ಕೋಟಿಯನ್ನು ಹೊಂದಿಸುವುದು ಕನಸಿನ ಮಾತು. ಈಗಿನ ಪರಿಸ್ಥಿತಿಯಲ್ಲಿ ಬಜೆಟ್‌ ಗಾತ್ರವನ್ನು ಏಕಾಏಕಿ ಕಡಿತಗೊಳಿಸುವುದಕ್ಕೂ ಆಗದು. ಏಕೆಂದರೆ, ಪ್ರಗತಿಯಲ್ಲಿರುವ ಹಾಗೂ ಪಾವತಿಗೆ ಬಾಕಿ ಇರುವ ಹಳೆ ಬಿಲ್‌ಗಳ ಮೊತ್ತಗಳನ್ನೆಲ್ಲ ಪರಿಗಣಿಸಿಯೇ ಬಜೆಟ್‌ ರೂಪಿಸಬೇಕು. ಬಿಬಿಎಂಪಿ ಮುಂದಿರುವುದು ಎರಡೇ ದಾರಿ. ಒಂದೋ ಸಂಪನ್ಮೂಲ ಹೆಚ್ಚಿಸಲು ಕ್ರಮ ಕೈಗೊಳ್ಳುವುದು ಅಥವಾ ಅನಿವಾರ್ಯವಲ್ಲದ ಕಾಮಗಾರಿಗಳನ್ನು, ತುಷ್ಟೀಕರಣದ ಕಾರ್ಯಕ್ರಮಗಳನ್ನು ಕೈಬಿಡುವ ಮೂಲಕ ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವುದು’ ಎಂದು ಅವರು ಸಲಹೆ ನೀಡಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿಗಳನ್ನು ಬಿಬಿಎಂಪಿ ಕೈಬಿಡಲು ಆಗದು. ಅವುಗಳಿಗೆ ನಿಗದಿ ಪಡಿಸಿದ ಅನುದಾನ ಬಿಡುಗಡೆ ಆಗುತ್ತದೆ. ಈ ಹಂತದಲ್ಲಿ ಬಿಬಿಎಂಪಿ ತನ್ನ ಅನುದಾನದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಹಾಗೂ ಇನ್ನೂ ಟೆಂಡರ್‌ ಆಗದ ಕಾಮಗಾರಿಗಳನ್ನು ಕೈಬಿಡುವ ಬಗ್ಗೆ ಚಿಂತಿಸಬಹುದು. ಇವುಗಳಲ್ಲಿ 2–3 ವರ್ಷಗಳ ಹಿಂದಿನ ಬಜೆಟ್‌ನಲ್ಲಿ ಘೋಷಣೆ ಆಗಿ ಇನ್ನೂ ಟೆಂಡರ್‌ ಆಗದ ಕಾಮಗಾರಿಗಳೂ ಸೇರಿವೆ. ಅವುಗಳ ಅನುಷ್ಠಾನದಲ್ಲಿ ಇಷ್ಟೊಂದು ವಿಳಂಬವಾಗಿದೆ ಎಂದರೆ ಅವುಗಳ ಅಗತ್ಯತೆಯೇ ಪ್ರಶ್ನಾರ್ಹವಾದುದು’ ಎಂದು ಅವರು ಅಭಿಪ್ರಾಯಪಟ್ಟರು.

‘ಕಸ ನಿರ್ವಹಣೆಗೆ ಪ್ರಸಕ್ತ ವರ್ಷ ₹ 664 ಕೋಟಿಯನ್ನು ವೆಚ್ಚ ಮಾಡಬೇಕಾದ ಹೊಣೆಗಾರಿಕೆಯನ್ನು ಬಿಬಿಎಂಪಿ ಹೊಂದಿದೆ. ಜುಲೈ 1ರಿಂದ ಬೆಂಗಳೂರು ಕಸ ನಿರ್ವಹಣೆ ನಿಯಮಿತ ಕಂಪನಿ ಕಾರ್ಯಾರಂಭ ಮಾಡಲಿರುವುದರಿಂದ ಈ ಉದ್ದೇಶಕ್ಕೆ ವೆಚ್ಚ ಮಾಡುವ ಹೊಣೆ ಬಿಬಿಎಂಪಿಗೆ ಇರದು’ ಎಂದು ಅವರು ತಿಳಿಸಿದರು.

***

ವಿವಿಧ ಯೋಜನೆಗಳ ಪಾವತಿ ಹೊಣೆಗಾರಿಕೆ (₹ ಕೋಟಿಗಳಲ್ಲಿ)

ವಿವರ; ರಾಜ್ಯ ಸರ್ಕಾರದ ಯೋಜನೆ; ಕೇಂದ್ರದ ಯೋಜನೆ; ಬಿಬಿಎಂಪಿ ಕಾರ್ಯಕ್ರಮ; ಒಟ್ಟು

ಬಾಕಿ ಬಿಲ್‌ ಪಾವತಿಗೆ; 102.88; 1,658.19; 3,108.88; 4,869.95

ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ;151.45; 2,479.40; 1,740.00; 4,370.85

ಕಾರ್ಯಾದೇಶವಾಗಿ ಇನ್ನೂ ಶುರುವಾಗದ ಕಾಮಗಾರಿಗಳಿಗೆ; 192.99; 1,621.82; 1,699.15; 3,513.96

ಇನ್ನಷ್ಟೇ ಟೆಂಡರ್‌ ಆಗಬೇಕಾದ ಕಾಮಗಾರಿಗಳಿಗೆ; 183.05; 2,350.65; 3,378.77; 5,912.47

****
ಇತರ ಹೊಣೆಗಾರಿಕೆಗಳು (₹ ಕೋಟಿಗಳಲ್ಲಿ)

ಆಡಳಿತಾತ್ಮಕ ವೆಚ್ಚ; 1,518

ಸಾಲ ಮರುಪಾವತಿ; 297

ತೋಟಗಾರಿಕೆ; 197

ಅರಣ್ಯ; 37

ಆರೋಗ್ಯ (ಸಾರ್ವಜನಿಕ); 183

ಆರೋಗ್ಯ (ವೈದ್ಯಕೀಯ); 68

ಕಸ ನಿರ್ವಹಣೆ; 664

ಶಿಕ್ಷಣ; 304

ಸೆಸ್‌ ಮರುಪಾವತಿ; 302

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT