ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲ ಕಾಮಗಾರಿಗಳ ಕೈಬಿಡಲಿದೆ ಬಿಡಿಎ

ಬೆಳ್ಳಂದೂರು, ವರ್ತೂರು ಕೆರೆ ಅಭಿವೃದ್ಧಿ– ವೆಚ್ಚ ಕಡಿತಗೊಳಿಸಲು ತೀರ್ಮಾನ
Last Updated 19 ಜೂನ್ 2020, 23:03 IST
ಅಕ್ಷರ ಗಾತ್ರ

ಬೆಂಗಳೂರು: ಹಸಿರು ನ್ಯಾಯಮಂಡಳಿಯಿಂದ ಅನೇಕ ಬಾರಿ ಛೀಮಾರಿಗೆ ಒಳಗಾದ ಬಳಿಕ ಬೆಳ್ಳಂದೂರು ಕೆರೆ ಹಾಗೂ ವರ್ತೂರು ಕೆರೆಗಳ ಸಮಗ್ರ ಅಭಿವೃದ್ಧಿ ಕೈಗೆತ್ತಿಕೊಂಡಿರುವ ಬಿಡಿಎ, ವಿಸ್ತೃತ ಯೋಜನಾ ವರದಿಯಲ್ಲಿರುವ (ಡಿಪಿಆರ್‌) ಕೆಲವು ಕಾಮಗಾರಿಗಳನ್ನು ಕೈಬಿಡಲು ಮುಂದಾಗಿದೆ.

ಡಿಪಿಆರ್‌ನಲ್ಲಿ ಹಸಿರು ನ್ಯಾಯ ಮಂಡಳಿ ಸೂಚಿಸದಿರುವ ಕೆಲವು ಕಾಮಗಾರಿಗಳನ್ನೂ ಸೇರ್ಪಡೆಗೊಳಿಸಲಾಗಿದ್ದು, ಇದರಿಂದ ಪ್ರಾಧಿಕಾರಕ್ಕೆ ಆರ್ಥಿಕ ಹೊರೆ ಹೆಚ್ಚಿದೆ. ಹಾಗಾಗಿ ಕೆಲವು ಕಾಮಗಾರಿಗಳನ್ನು ಕೈಬಿಡುವುದು ಅನಿವಾರ್ಯ ಎಂಬ ಅಭಿಪ್ರಾಯ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ವ್ಯಕ್ತವಾಗಿದೆ. ಯಾವೆಲ್ಲ ಕಾಮಗಾರಿಗಳನ್ನು ಸದ್ಯಕ್ಕೆ ಕೈಬಿಡಬಹುದು ಎಂಬುದನ್ನು ಪಟ್ಟಿ ಮಾಡುವಂತೆ ಬಿಡಿಎ ಎಂಜಿನಿಯರಿಂಗ್‌ ವಿಭಾಗಕ್ಕೆ ಆಡಳಿತ ಮಂಡಳಿ ಸೂಚಿಸಿದೆ.

‘ಯಾವೆಲ್ಲ ಕಾಮಗಾರಿಗಳನ್ನು ಕೈಬಿಡಬೇಕು ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ’ ಎಂದು ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹೂಳೆತ್ತುವುದು, ಜವುಗು ಪ್ರದೇಶ (ವೆಟ್‌ಲ್ಯಾಂಡ್‌) ಅಭಿವೃದ್ಧಿ, ಆಲ್ಗೇ ಕೊಳಗಳ ನಿರ್ಮಾಣ, ನೀರು ಸಂಸ್ಕರಣಾ ಘಟಕ ನಿರ್ಮಾಣ, ದಂಡೆಗಳನ್ನು ಬಲಪಡಿಸುವಂತಹ ಪ್ರಮುಖ ಅಂಶಗಳು ಈ ಯೋಜನೆಯಲ್ಲಿವೆ. ಅದರ ಜೊತೆಗೆ ನಡಿಗೆ ಪಥ, ಸೈಕಲ್‌ ಪಥ, ಬಯಲು ರಂಗಮಂದಿರಗಳನ್ನು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತುಡಿಪಿಆರ್‌ ಸಿದ್ಧಪಡಿಸಿತ್ತು. ₹ 245.89 ಕೋಟಿ ವೆಚ್ಚದಲ್ಲಿ ಬೆಳ್ಳಂದೂರು ಕೆರೆ ಹಾಗೂ ₹ 116.95 ಕೋಟಿ ವೆಚ್ಚದಲ್ಲಿವರ್ತೂರು ಕೆರೆ ಅಭಿವೃದ್ಧಿ ಮಾಡಲು ಪ್ರಾಧಿಕಾರ 2020ರ ಜನವರಿಯಲ್ಲಿ ಟೆಂಡರ್‌ ಆಹ್ವಾನಿಸಿತ್ತು. ‘ಬೆಳ್ಳಂದೂರು ಕೆರೆಯ ಟೆಂಡರ್‌ನಲ್ಲಿ ಮೂರು ಕಂಪನಿಗಳು ಭಾಗವಹಿಸಿದ್ದು, ಆರ್‌ಎಂಎನ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆ ಕಡಿಮೆ ಮೊತ್ತ ನಮೂದಿಸಿದೆ. ಈ ಸಂಸ್ಥೆ ಅಂದಾಜು ವೆಚ್ಚಕ್ಕಿಂತ ಶೇ 24.99ರಷ್ಟು ಹೆಚ್ಚು ಮೊತ್ತಕ್ಕೆ ಕಾಮಗಾರಿ ನಿರ್ವಹಿಸಲು ಒಪ್ಪಿದೆ. ವರ್ತೂರು ಕೆರೆಯ ಟೆಂಡರ್‌ನಲ್ಲಿ ನಾಲ್ಕು ಕಂಪನಿಗಳು ಭಾಗವಹಿಸಿದ್ದು ಸ್ಟಾರ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆ ಕಡಿಮೆ ಮೊತ್ತ ನಮೂದಿಸಿದೆ. ಈ ಸಂಸ್ಥೆ ನಮೂದಿಸಿದ ಮೊತ್ತವು ಅಂದಾಜು ವೆಚ್ಚಕ್ಕಿಂತ ಶೇ 40.7ರಷ್ಟು ಹೆಚ್ಚು ಇದೆ. ದರ ಸಂಧಾನದ ಬಳಿಕ ಈ ಸಂಸ್ಥೆಯೂ ಶೇ 24.99ರಷ್ಟು ಹೆಚ್ಚು ಮೊತ್ತಕ್ಕೆ ಕಾಮಗಾರಿ ನಿರ್ವಹಿಸಲು ಒಪ್ಪಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

‘ಈ ಟೆಂಡರ್‌ಗಳಿಗೆ (ವೆಚ್ಚ ಕಡಿತಕ್ಕೆ ಸೂಚಿಸಿ) ಆಡಳಿತ ಮಂಡಳಿ ಅನುಮೋದನೆ ನೀಡಿದೆ. ಇನ್ನೂ ಈ ಕಂಪನಿಗಳಿಗೆ ಕಾಮಗಾರಿಯ ಕಾರ್ಯಾದೇಶ ನೀಡಿಲ್ಲ. ಆದರೂ, ಎನ್‌ಜಿಟಿಗೆ ಅನುಪಾಲನಾ ವರದಿ ಸಲ್ಲಿಸಬೇಕಾಗಿರುವುದರಿಂದ ಕೆಟಿಪಿಪಿ ಕಾಯ್ದೆಯಡಿ 4ಜಿ ವಿನಾಯಿತಿ ಪಡೆದುಕೆಲವು ಕಾಮಗಾರಿಗಳನ್ನು ಆರಂಭಿಸಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT