ಬುಧವಾರ, ಆಗಸ್ಟ್ 4, 2021
21 °C
₹ 3 ಲಕ್ಷದವರೆಗೆ ಹಣ ಪಡೆದಿದ್ದ ಆರೋಪಿ * 50 ಮಂದಿಗೆ ವಂಚನೆ * 3ಸಾವಿರ ಮಂದಿಗೆ ವಂಚಿಸಲು ತಯಾರಿ ನಡೆಸಿದ್ದ ಜಾಲ

ಬಿಡಿಎ ನಿವೇಶನದ ನಕಲಿ ಹಂಚಿಕೆ ಪತ್ರ ಮಾರಾಟ ಜಾಲ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆ‌ಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೆಸರನ್ನು ದುರುಪಯೋಗಪಡಿಸಿಕೊಂಡು ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನಗಳ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ ಜಾಲವನ್ನು ಪ್ರಾಧಿಕಾರವು ಪತ್ತೆ ಹಚ್ಚಿದೆ. ಪ್ರಕರಣದ ಪ್ರಮುಖ ಆರೋಪಿ, ಚಾಮರಾಜಪೇಟೆ ವಿಜಯಾನಂದಸ್ವಾಮಿ ಎಂಬಾತನನ್ನು ಬಂಧಿಸಿ ಕಾಗದ ಪತ್ರಗಳನ್ನು ಸ್ವಾಧೀನಪಡಿಸಿಕೊಂಡಿದೆ.

‘ವಿಜಯಾನಂದಸ್ವಾಮಿ ಬಿಡಿಎ ಹೆಸರಿನಲ್ಲಿ ನಿವೇಶನದ ನಕಲಿ ಹಂಚಿಕೆ ಪತ್ರ ತಯಾರಿಸಿದ್ದ. ಬಿಡಿಎ ಹೆಸರಿನ ನಕಲಿ ರಬ್ಬರ್ ಸ್ಟಾಂಪ್ ಹಾಗೂ ಪ್ರಾಧಿಕಾರದ ಆಯುಕ್ತರ ನಕಲಿ ಸಹಿಯನ್ನು ಬಳಸಿದ್ದ. ಈ ರೀತಿ ಈಗಾಗಲೇ 50ಕ್ಕೂ ಹೆಚ್ಚು ಜನರಿಗೆ ನಿವೇಶನದ ನಕಲಿ ಹಕ್ಕುಪತ್ರಗಳನ್ನು ನೀಡಿ ₹ 50 ಸಾವಿರದಿಂದ ₹ 3 ಲಕ್ಷಗಳವರೆಗೆ ಹಣವನ್ನು ವಸೂಲಿ ಮಾಡಿ ವಂಚಿಸಿದ್ದಾನೆ’ ಎಂದು ಬಿಡಿಎ ತಿಳಿಸಿದೆ.

ವಿಜಯಾನಂದಸ್ವಾಮಿ ‘ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ’ದ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡಿದ್ದ. ಈ ಹೆಸರಿನ ಸಂಘವನ್ನು ನೋಂದಣಿಯೂ ಮಾಡಿಸಿಕೊಂಡಿದ್ದ. ಈ ಸಂಘದ ಮೂಲಕ ಬಿಡಿಎಯ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಚಿಸಿರುವ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಿಸಿಕೊಡುತ್ತೇನೆ ಎಂದು ರಮೇಶ್ ಎಂಬಾತನ ಜೊತೆ ಸೇರಿಕೊಂಡು ಜನರನ್ನು ನಂಬಿಸುತ್ತಿದ್ದ. ಸಂಘದ ಸದಸ್ಯರನ್ನಾಗಿ ನೊಂದಾಯಿಸಿಕೊಳ್ಳುವುದಾಗಿ ಪ್ರತಿಯೊಬ್ಬರಿಂದ ₹ 15ಸಾವಿರ ಪಡೆದುಕೊಂಡು ಇದುವರೆಗೆ ಸುಮಾರು 1000 ಜನರನ್ನು ಸದಸ್ಯರನ್ನಾಗಿ ನೊಂದಾಯಿಸಿಕೊಂಡಿದ್ದಾನೆ’ ಎಂದು ಬಿಡಿಎ ತಿಳಿಸಿದೆ. 

‘ಸುಮಾರು 3000 ಜನರನ್ನು ಸಂಘದ ಸದಸ್ಯರನ್ನಾಗಿ ಮಾಡಿಕೊಂಡು ನಿವೇಶನದ ನಕಲಿ ಹಕ್ಕು ಪತ್ರಗಳನ್ನು ವಿತರಿಸುವ ಯೋಜನೆ ಹೊಂದಲಾಗಿತ್ತು’ ಎಂದು ಆರೋಪಿಯನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಬಿಡಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ

₹ 3 ಲಕ್ಷ ಪಾವತಿಸಿ, ಒಟ್ಟು ಆರು ನಿವೇಶನಗಳ ನಕಲಿ ಹಕ್ಕುಪತ್ರಗಳನ್ನು ಪಡೆದಿದ್ದ ವ್ಯಕ್ತಿಯೊಬ್ಬರು ಅದರ ಅಸಲಿಯತ್ತು ಪರಿಶೀಲಿಸಲು ಬಿಡಿಎ ಉಪ ಕಾರ್ಯದರ್ಶಿ-1 ಅವರ ಕಚೇರಿಯನ್ನು ಸಂಪರ್ಕಿಸಿದ್ದರು. ತಕ್ಷಣವೇ ಜಾಗೃತಗೊಂಡ ಉಪ ಕಾರ್ಯದರ್ಶಿ, ಈ ವಿಚಾರವನ್ನು ಬಿಡಿಎ ಆಯುಕ್ತ ಡಾ.ಎಚ್.ಆರ್. ಮಹದೇವ್ ಅವರ ಗಮನ ತಂದಿದ್ದರು. ಆಯುಕ್ತರು ತಕ್ಷಣವೇ ಪ್ರಾಧಿಕಾರದ ಜಾಗೃತ ದಳದ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ ಶಿವಕುಮಾರ್ ಗುನಾರೆ ಅವರಿಗೆ ಈ ವಿಚಾರ ತಿಳಿಸಿ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಜಾಗೃತ ದಳ ಆರೋಪಿಯಾದ ವಿಜಯಾನಂದಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿತ್ತು. ಆತನ ಕಚೇರಿಯ ಮೇಲೆ ದಾಳಿ ನಡೆಸಿ, ಬಿಡಿಎ ಹೆಸರಿನ ನಿವೇಶನದ ನಕಲಿ ಹಂಚಿಕೆ ಪತ್ರಗಳು, ರಬ್ಬರ್ ಸ್ಟಾಂಪ್‍ಗಳು ಹಾಗೂ ಸಂಘದ ಹೆಸರಿನ ಮೊಹರುಗಳನ್ನು ವಶಪಡಿಸಿಕೊಂಡಿತ್ತು. 

‘ಈ ಜಾಲದಿಂದ ವಂಚನೆಗೆ ಒಳಗಾದವರು ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಬಹುದು. ಇಂತಹ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರಬೇಕು’ ಎಂದು ಆಯುಕ್ತ ಡಾ.ಎಚ್.ಆರ್. ಮಹದೇವ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಆರೋಪಿ ವಿಜಯಾನಂದ ಸ್ವಾಮಿ ಬಂಧನವಾಗುತ್ತಿದ್ದಂತೆಯೇ ಇನ್ನೊಬ್ಬ ಆರೋಪಿ ರಮೇಶ್‌ ತಲೆ ಮರೆಸಿಕೊಂಡಿದ್ದಾನೆ.


ವಿಜಯಾನಂದಸ್ವಾಮಿ ಬಳಸುತ್ತಿದ್ದ ಕಾರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು