ಶುಕ್ರವಾರ, ಜುಲೈ 30, 2021
25 °C
ಬಿಡಿಎಗೆ ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌

44 ವರ್ಷ ಹಿಂದಿನ ಭೂಸ್ವಾಧೀನ ಪ್ರಕ್ರಿಯೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತರ ತಾಲ್ಲೂಕಿನ ಕಸಬಾ ಹೋಬಳಿ ಭಿನ್ನಮಂಗಲ ಗ್ರಾಮದ 1 ಎಕರೆ 12 ಗುಂಟೆ ಜಮೀನು ಸ್ವಾಧೀನಕ್ಕೆ 1977ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ದಾಖಲೆಗಳನ್ನು ನಿರ್ವಹಿಸದ ಕಾರಣಕ್ಕೆ ಬಿಡಿಎಗೆ ₹1 ಲಕ್ಷ ದಂಡ ವಿಧಿಸಿದೆ.

ವಯ್ಯಾಲಿಕಾವಲ್‌ ಹೌಸ್‌ ಬಿಲ್ಡಿಂಗ್ ಕೋ–ಆಪರೆಟಿವ್ ಸೊಸೈಟಿ (ವಿಎಚ್‌ಬಿಸಿಎಸ್) ಪರವಾಗಿ ಮಾಡಿದ್ದ ಕ್ರಯಪತ್ರ ಮತ್ತು ಆ ನಂತರ 1997ರಲ್ಲಿ ವಿಎಚ್‌ಬಿಸಿಎಸ್‌ ಏಳು ಜನರಿಗೆ ಮಾಡಿಕೊಟ್ಟಿರುವ ಕ್ರಯಪತ್ರಗಳನ್ನೂ ರದ್ದುಪಡಿಸಿದೆ.

‘ಭೂಸ್ವಾಧೀನಕ್ಕೆ ಬಿಡಿಎ ಮಾಡಿದ ಮಹಜರ್ ದಾಖಲೆಗಳು ದೋಷಯುಕ್ತವಾಗಿವೆ. ವಿಎಚ್‌ಬಿಸಿಎಸ್‌ಗೆ ಭೂಮಿ ಹಸ್ತಾಂತರ ಮಾಡಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಮಹಜರು ಮಾಡಿರುವುದಕ್ಕೆ ಹಸ್ತಪ್ರತಿ ಅಥವಾ ಮುದ್ರಿತ ಪ್ರತಿ ಲಭ್ಯವಿಲ್ಲ’ ಎಂದು ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ಒಎಂಬಿಆರ್ ಲೇಔಟ್‌ ನಿರ್ಮಾಣದ ಉದ್ದೇಶಕ್ಕಾಗಿ 1977ರ ನವೆಂಬರ್‌ನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಬಳಿಕ ಆ ಜಾಗವನ್ನು ಕೋರಿಕೆ ಮೇರೆಗೆ ವಿಎಚ್‌ಬಿಸಿಎಸ್‌ಗೆ ವರ್ಗಾಯಿಸಲಾಗಿತ್ತು. ಈ ಸಂದರ್ಭದಲ್ಲಿ ಭೂಮಿಯ ಹಕ್ಕಿಗಾಗಿ ದೊಡ್ಡಮಾರಪ್ಪ ಮತ್ತು ಎ. ಶುಕ್ಲ ನಡುವೆ ವಿವಾದವೂ ಉಂಟಾಗಿತ್ತು.

‘ಇದ್ಯಾವುದನ್ನೂ ಲೆಕ್ಕಿಸದೆ ಬಿಡಿಎ ದಾಖಲೆಗಳನ್ನು ಸೃಷ್ಟಿಸಿಕೊಂಡು ಭೂಮಿಯನ್ನು ಕಸಿದುಕೊಳ್ಳಲು ಆದೇಶ ಹೊರಡಿಸಿತ್ತು’ ಎಂದು ದೊಡ್ಡಮಾರಪ್ಪ ಪರ ವಕೀಲರು ವಾದಿಸಿದರು.

ಈ ಹಿಂದಿನ ವಿಚಾರಣೆ ವೇಳೆ ಪೀಠ ನೀಡಿದ ನಿರ್ದೇಶನದಂತೆ ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತರು ವಿಚಾರಣೆ ನಡೆಸಿ 2020ರ ಜೂನ್ 22ರಂದು ವರದಿ ಸಲ್ಲಿಸಿದ್ದರು. ಕಂದಾಯ ಇಲಾಖೆ ದಾಖಲೆಗಳನ್ನು ಬಿಡಿಎ ಅಧಿಕಾರಿಗಳು ಗಮನಿಸದೆ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದರು.

‘ಎಲ್ಲಾ ದಾಖಲೆಗಳನ್ನು ಸರಿಪಡಿಸಿ ನಾಲ್ಕು ತಿಂಗಳಲ್ಲಿ ಮೃತ ದೊಡ್ಡಮಾರಪ್ಪ ಅವರ ಕುಟುಂಬಕ್ಕೆ ಭೂಮಿ ಹಸ್ತಾಂತರಿಸಬೇಕು. ದಾಖಲೆಗಳನ್ನು ನಿರ್ವಹಿಸದ ಕಾರಣಕ್ಕೆ ಬಿಡಿಎ ದಂಡವನ್ನು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು’ ಎಂದು ಪೀಠ ನಿರ್ದೇಶನ ನೀಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು