ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳ ಮೇಲಿನ ತೆರಿಗೆಯನ್ನು ಪರಿಷ್ಕರಿಸಿದ್ದು, ಶೇಕಡ 20ರಿಂದ 45ರಷ್ಟು ಹೆಚ್ಚಿಸಿದೆ. ವಿವಿಧ ಬಡಾವಣೆಗಳ ನಿವಾಸಿಗಳ ಸಂಘಗಳು ತೆರಿಗೆ ಹೆಚ್ಚಳದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿವೆ.

ಪ್ರಾಧಿಕಾರವು ಅಭಿವೃದ್ಧಿ ಪಡಿಸಿರುವ ಅರ್ಕಾವತಿ, ಬನಶಂಕರಿ, ನಾಡಪ್ರಭು ಕೆಂಪೇಗೌಡ ಸೇರಿ 9 ಬಡಾವಣೆಗಳು, ಬಿಡಿಎ ಅನುಮೋದಿತ ಬಡಾವಣೆ, ಹಂಚಿಕೆ ಮಾಡಿರುವ ವಸತಿ ಸಮುಚ್ಚಯ ಸೇರಿದಂತೆ ಸುಮಾರು 1.22 ಲಕ್ಷಕ್ಕೂ ಹೆಚ್ಚು ಜನರಿಗೆ ತೆರಿಗೆ ಏರಿಕೆಯ ಬಿಸಿ ತಟ್ಟಲಿದೆ.

ಪ್ರತಿ ವರ್ಷ ತನ್ನ ವ್ಯಾಪ್ತಿಯ ಸ್ವತ್ತುಗಳಿಂದ ಸುಮಾರು ₹55 ರಿಂದ ₹60 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಬಿಡಿಎಗೆ, ಹಲವು ವರ್ಷಗಳಿಂದ ಸುಮಾರು ₹40 ಕೋಟಿ ಪಾವತಿಯಾಗದೆ ಬಾಕಿಯಿದೆ.

ಪರಿಷ್ಕೃತ ತೆರಿಗೆಯ ದರಗಳನ್ನು ಏಪ್ರಿಲ್ 28ರಂದು ವೆಬ್ಸೈಟ್ನಲ್ಲಿ ಪ್ರಕಟಿಸಿದೆ. 2025–26ನೇ ಸಾಲಿನಲ್ಲಿ ಸ್ವತ್ತಿನ ಮಾರ್ಗಸೂಚಿ ದರದ ಆಧಾರದ ಮೇಲೆ ಆಸ್ತಿ ತೆರಿಗೆ ನಿರ್ಧಾರವಾಗುತ್ತದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

‘ಆಸ್ತಿ ತೆರಿಗೆಯನ್ನು ಸ್ವತ್ತಿನ ವಾರ್ಷಿಕ ಮೌಲ್ಯದ ಮೇಲೆ ಲೆಕ್ಕಾಚಾರ ಮಾಡಿ ನಿಗದಿ ಮಾಡಲಾಗುತ್ತದೆ. ಆಸ್ತಿ ಇರುವ ಸ್ಥಳ, ವಿಸ್ತೀರ್ಣ, ಆಸ್ತಿಯಿರುವ ಪ್ರದೇಶದಲ್ಲಿ ಮಾಡಿರಬಹುದಾದ ಯಾವುದೇ ಸುಧಾರಣೆ, ಮಾರ್ಪಾಡುಗಳ ಆಧಾರದ ಮೇಲೆ ತೆರಿಗೆ ನಿಗದಿ ಪಡಿಸಲಾಗುತ್ತದೆ. ಆದರೆ, ಬಿಡಿಎ ಅಭಿವೃದ್ಧಿ
ಪಡಿಸಿರುವ ಹಲವು ಬಡಾವಣೆಗಳಲ್ಲಿ ಮೂಲಸೌಕರ್ಯವಿಲ್ಲ. ಅವೈಜ್ಞಾನಿಕವಾಗಿ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿದೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಚ್ಛತೆ ಕಾಪಾಡಲು ಖಾಲಿ ನಿವೇಶನಗಳಿಗೆ ನಿರ್ವಹಣಾ ಶುಲ್ಕವೆಂದು ಚದರ ಅಡಿಗೆ ₹1,500 ಶುಲ್ಕ ವಿಧಿಸುತ್ತಾರೆ. ಯಾವ ಮಾನ ದಂಡದಲ್ಲಿ ತೆರಿಗೆ ಹೆಚ್ಚಿಸಿದ್ದಾರೆ ಗೊತ್ತಿಲ್ಲ.
ಟಿ.ಎಸ್.ಮಹೇಶ್, ಅಧ್ಯಕ್ಷ, ಬನಶಂಕರಿ 6ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ

‘ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬ ಮಾಡುತ್ತಿದೆ. ಇದರಿಂದಾಗಿ ಮನೆ ನಿರ್ಮಾಣ ಕಷ್ಟವಾಗಿದೆ. ಸಾಲ ಮಾಡಿ ನಿವೇಶನ ಖರೀದಿ ಮಾಡಲಾಗಿದೆ. ಇದರ ನಡುವೆ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿದೆ’ ಎಂದು ವಿವಿಧ ಬಡಾವಣೆಗಳ ಆಸ್ತಿ ಮಾಲೀಕರು ಬೇಸರ ವ್ಯಕ್ತಪಡಿಸಿದರು.

‘ತೆರಿಗೆ ಪಡೆದ ಮೇಲೆ ರಸ್ತೆ, ಒಳಚರಂಡಿ, ನೀರು, ಉದ್ಯಾನ, ವಿದ್ಯುತ್, ಬೀದಿ ದೀಪ ಹಾಗೂ ಇತರೆ ಸೌಕರ್ಯ ಒದಗಿಸಬೇಕು. ಆದರೆ, ನಾಡಪ್ರಭು ಕೆಂಪೇಗೌಡ ಬಡಾವಣೆ (ಎನ್ಕೆಪಿಎಲ್)ಯಲ್ಲಿ ಇನ್ನೂ ಕಾಮಗಾರಿಗಳು ನಡೆಯುತ್ತಿವೆ. ಬಡಾವಣೆಯ ವ್ಯಾಪ್ತಿಯ ಆಸ್ತಿಗೆ ಶೇಕಡ 9 ರಿಂದ 50ರಷ್ಟು ತೆರಿಗೆ ಹೆಚ್ಚಳ ಮಾಡಿರುವುದು ಸರಿಯಲ್ಲ. ಮೊದಲು ಪೂರ್ಣ ಪ್ರಮಾಣದ ಸೌಕರ್ಯ ಒದಗಿಸಲಿ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಆಗ್ರಹಿಸಿದೆ.

ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಅರ್ಕಾವತಿ ಬಡಾವಣೆಯ ನಿವೇಶನಗಳಿಗೆ ಆಸ್ತಿ ತೆರಿಗೆಯಲ್ಲಿ ಹೆಚ್ಚಳವಾಗಿಲ್ಲ. ಆದರೆ, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನಗಳ ತೆರಿಗೆ ಹೆಚ್ಚಳವಾಗಿದೆ.

‘ಆಸ್ತಿ ತೆರಿಗೆಯನ್ನು ಹೆಚ್ಚಿಸುವ ಮೊದಲು ಬಿಡಿಎ ಮೂಲಸೌಕರ್ಯಗಳನ್ನು ಒದಗಿಸಬೇಕು. ಮಾರ್ಗಸೂಚಿ ದರದ ಆಧಾರದ ಮೇಲೆ ಆಸ್ತಿ ತೆರಿಗೆಯನ್ನು ಹೆಚ್ಚಿಸುವುದು ಅನ್ಯಾಯ. ಖಾಲಿ ನಿವೇಶನಗಳಿಂದ ಮಾಲೀಕರಿಗೆ ಯಾವುದೇ ಆದಾಯವಿಲ್ಲ, ಆದ್ದರಿಂದ ಹೆಚ್ಚಿನ ಆಸ್ತಿ ತೆರಿಗೆ ಪಾವತಿಸುವುದು ಕಷ್ಟ. ಅಧಿಕಾರಿಗಳು ಇದನ್ನು ಪರಿಗಣಿಸಬೇಕು' ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

‘ಬಡಾವಣೆಗೆ ಮೂಲಸೌಕರ್ಯ ಕಲ್ಪಿಸದೇ ಯಾವ ಪುರುಷಾರ್ಥಕ್ಕೆ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿದ್ದಾರೆ. ನೀರು, ರಸ್ತೆ, ದೀಪ, ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ನಮ್ಮಿಂದ 2011ರಲ್ಲಿ ಜಮೀನು ಪಡೆದುಕೊಂಡು, ಪರಿಹಾರವಾಗಿ ನಿವೇಶನ ನೀಡಿದ್ದಾರೆ. ಕೆಲವರು ಸಾಲ ಮಾಡಿ ನಿವೇಶನ ಖರೀದಿಸಿದ್ದಾರೆ. ಅವರು ಮನೆ ನಿರ್ಮಿಸಲು ಆಗುತ್ತಿಲ್ಲ. ಎಲ್ಲಿಂದ ಹಣ ತರುವುದು. ನಿವೇಶನ ಕೊಟ್ಟು ತಲೆ ಮೇಲೆ ಚಪ್ಪಡಿ ಹಾಕಿದ್ದಾರೆ’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನ ಮಾಲೀಕ ಡಿ.ಎಸ್.ಗೌಡ ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಸರಾಸರಿ ಆಧಾರದಲ್ಲಿ ಹೆಚ್ಚಳ ಮಾಡಿಲ್ಲ’

‘2023ರಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ಪರಿಷ್ಕರಿಸಲಾಗಿತ್ತು. ಸ್ಥಿರಾಸ್ತಿ ಮಾರ್ಗಸೂಚಿ ದರದಲ್ಲಿನ ಹೆಚ್ಚಳವನ್ನು ಆಧರಿಸಿ ತೆರಿಗೆಯನ್ನು ಹೆಚ್ಚಿಸಲಾಗಿದೆ. ಸರಾಸರಿ ಆಧಾರದಲ್ಲಿ ಹೆಚ್ಚಳ ಮಾಡಿಲ್ಲ. ಅವೈಜ್ಞಾನಿಕವಾಗಿ ಹೆಚ್ಚಳವಾಗಿದೆ ಎಂದು ಹೇಳುವುದು ತಪ್ಪು. ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದು ಸರಿಯಲ್ಲ ಎನಿಸಿದರೆ, ಆಸ್ತಿ ಮಾಲೀಕರು ಪ್ರಾಧಿಕಾರವನ್ನು ಸಂಪರ್ಕಿಸಬಹುದು. ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಬಿಡಿಎ ಆಯುಕ್ತ ಎನ್.ಜಯರಾಂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.