ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: 99 ನಿವೇಶನಗಳಿಗೆ ಕುದುರಿಲ್ಲ ಬೇಡಿಕೆ

ನಾಲ್ಕನೇ ಹಂತದ ಇ– ಹರಾಜಿನಲ್ಲಿ 332 ನಿವೇಶನಗಳ ಬಿಕರಿ
Last Updated 10 ನವೆಂಬರ್ 2020, 21:04 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿವೇಶನಗಳ ನಾಲ್ಕನೇ ಹಂತದ ಇ ಹರಾಜು ಪ್ರಕ್ರಿಯೆ ಸೋಮವಾರ ಮುಕ್ತಾಯವಾಗಿದೆ. ಈ ಬಾರಿಯೂ ನಿವೇಶನಗಳ ಇ–ಹರಾಜಿಗೆ ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ಬಂದಿಲ್ಲ. ಹರಾಜಿಗಿದ್ದ 448 ನಿವೇಶನಗಳಲ್ಲಿ 99 ನಿವೇಶನಗಳಿಗೆ ಯಾವುದೇ ಬೇಡಿಕೆ ಬಂದಿಲ್ಲ. ಒಟ್ಟು 332 ನಿವೇಶನಗಳು ಬಿಕರಿಯಾಗಿವೆ.

ಪ್ರತಿ ಹಂತದ ಹರಾಜಿನಲ್ಲೂ ಯಾವುದೇ ಬೇಡಿಕೆ ಬಾರದ ನಿವೇಶನಗಳ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಮೂರನೇ ಹಂತದಲ್ಲಿ ಒಟ್ಟು 402 ನಿವೇಶನಗಳನ್ನು ಬಿಡಿಎ ಇ-ಹರಾಜಿಗೆ ಇಟ್ಟಿತ್ತು. ಮಾರ್ಗಸೂಚಿ ದರ ಕಡಿಮೆ ಇದ್ದ ಕಾರಣ 40 ನಿವೇಶನಗಳನ್ನು ಇ– ಹರಾಜಿನಿಂದ ಹಿಂಪಡೆದಿತ್ತು. ಹರಾಜಿಗಿದ್ದ 362 ನಿವೇಶನಗಳಲ್ಲಿ 286 ನಿವೇಶನಗಳು ಮಾತ್ರ ಮಾರಾಟವಾಗಿದ್ದವು. 55 ನಿವೇಶನಗಳಿಗೆ ಬೇಡಿಕೆಯೇ ಬಂದಿರಲಿಲ್ಲ.

‘ಹರಾಜಿನಲ್ಲಿರುವ ಒಟ್ಟು ನಿವೇಶನಗಳಲ್ಲಿ ಶೇ 20ರಷ್ಟಕ್ಕೆ ಬೇಡಿಕೆ ಬರುವುದಿಲ್ಲ. ಇದು ಸಹಜ’ ಎಂದು ಬಿಡಿಎ ಆರ್ಥಿಕ ಸದಸ್ಯ ಎಸ್‌.ಎಂ.ರಾಮಪ್ರಸಾದ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನಾಲ್ಕನೇ ಹಂತದಲ್ಲಿ ಬಿಡಿಎ ಬನಶಂಕರಿ, ಸರ್. ಎಂ. ವಿಶ್ವೇಶ್ವರಯ್ಯ, ಜೆ.ಪಿ.ನಗರ, ಅರ್ಕಾವತಿ ಹಾಗೂ ಬಿಟಿಎಂ ಬಡಾವಣೆಗಳಲ್ಲಿ ವಿವಿಧ ಅಳತೆಯ ಒಟ್ಟು 448 ನಿವೇಶನಗಳು ಹರಾಜಿಗೆ ಇಟ್ಟಿತ್ತು. ಅ. 12ರಂದು ಪ್ರಾರಂಭವಾಗಿದ್ದ ಇ–ಹರಾಜು ಸೋಮವಾರ (ನ.9) ಕೊನೆಗೊಂಡಿದೆ. ಆರು ಹಂತಗಳಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆದಿದೆ.

ನಿಗದಿಪಡಿಸಿದ್ದಕ್ಕಿಂತ ಶೇ 5ರಷ್ಟು ಹೆಚ್ಚು ಮೊತ್ತಕ್ಕೆ ಖರೀದಿಸಲು ಯಾರೂ ಮುಂದೆ ಬಾರದ ಕಾರಣ 17 ನಿವೇಶನಗಳ ಹರಾಜನ್ನು ರದ್ದುಪಡಿಸಲಾಗಿದೆ. ಅದಲ್ಲದೇ ತಾಂತ್ರಿಕ ಕಾರಣಗಳಿಂದಾಗಿ ಮೂರು ನಿವೇಶನಗಳ ಹರಾಜನ್ನು ಹಿಂಪಡೆದಿದೆ.

ನಾಲ್ಕನೇ ಹಂತದಲ್ಲಿ ಹರಾಜಿಗಿಟ್ಟಿದ್ದ ನಿವೇಶನಗಳ ಒಟ್ಟು ಮೂಲ ಬೆಲೆ ₹ 171.95 ಕೋಟಿಯಷ್ಟಿತ್ತು. ಹರಾಜಿನಿಂದ ಒಟ್ಟು ಸರಾಸರಿ ಶೇ 63.61ರಷ್ಟು (₹ 281.32 ಕೋಟಿ) ಹೆಚ್ಚು ವರಮಾನವನ್ನು ಪ್ರಾಧಿಕಾರ ಗಳಿಸಲಿದೆ. ಮೂರನೇ ಹಂತದ ಇ ಹರಾಜಿಗೆ ಹೋಲಿಸಿದರೆ ಈ ಬಾರಿ ಬಿಡಿಎ ತುಸು ಹೆಚ್ಚು ವರಮಾನ ಗಳಿಸಿದಂತಾಗಿದೆ. ಮೂರನೇ ಹಂತದಲ್ಲಿ ಮಾರಾಟವಾದ ನಿವೇಶನಗಳ ಒಟ್ಟು ಮೂಲದರ ₹ 180.46 ಕೋಟಿಗಳಷ್ಟಿತ್ತು. ಇ ಹರಾಜಿನಲ್ಲಿ ಸರಾಸರಿ ಶೇ 47.58ರಷ್ಟು ಹೆಚ್ಚು ವರಮಾನ ಗಳಿಸಿತ್ತು.

‘ಸರ್ಕಾರದ ಸೂಚನೆ ಮೇರೆಗೆ ಸುಮಾರು 7 ಸಾವಿರ ನಿವೇಶನಗಳನ್ನು ಹರಾಜು ಮಾಡುವ ಉದ್ದೇಶವನ್ನು ಬಿಡಿಎ ಹೊಂದಿದೆ. ನಾಲ್ಕು ಹಂತಗಳಲ್ಲಿ ಸುಮಾರು 1,250 ನಿವೇಶನಗಳನ್ನು ಇ–ಹರಾಜಿಗೆ ಇಟ್ಟಿದ್ದೇವೆ. ಇದರಲ್ಲಿ 900 ನಿವೇಶನಗಳು ಬಿಕರಿಯಾಗಿವೆ’ ಎಂದು ರಾಮ ಪ್ರಸಾದ್‌ ತಿಳಿಸಿದರು.

‘ಒಂದೇ ಬಾರಿಗೆ 300ಕ್ಕೂ ಅಧಿಕ ನಿವೇಶನಗಳನ್ನು ಹರಾಜಿಗೆ ಇಡುವುದು ಅಷ್ಟು ಉತ್ತಮ ನಿರ್ಧಾರವಲ್ಲ. ಅದರ ಬದಲು ಯಾವ ಪ್ರದೇಶದ ನಿವೇಶನಗಳಿಗೆ ಬೇಡಿಕೆ ಇದೆ ಎಂದು ನೋಡಿಕೊಂಡು 40ರಿಂದ 50 ನಿವೇಶನಗಳನ್ನು ಹರಾಜಿಗೆ ಇಟ್ಟರೆ ಹೆಚ್ಚು ವರಮಾನ ಬರಲಿದೆ. ಆಗಾಗ ಹರಾಜು ನಡೆಸುವ ಬದಲು ಒಂದೆರಡು ತಿಂಗಳ ಅಂತರ ನೀಡಿ ಹರಾಜು ನಡೆಸುವುದು ಸೂಕ್ತ’ ಎಂದು ಬಿಡಿಎ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

‘ಸದ್ಯಕ್ಕಂತೂ ನಿವೇಶನಗಳ ಹರಾಜಿನಿಂದ ಮಾತ್ರ ಬಿಡಿಎ ವರಮಾನ ಗಳಿಸುತ್ತಿದೆ. ಇರುವ ಎಲ್ಲ ನಿವೇಶನಗಳನ್ನು ಸಂಪನ್ಮೂಲ ಸಂಗ್ರಹಿಸುವ ಏಕೈಕ ಉದ್ದೇಶಕ್ಕಾಗಿ ಮಾರಾಟ ಮಾಡಿದರೆ ಭವಿಷ್ಯದಲ್ಲಿ ಇಕ್ಕಟ್ಟಿನ ಪರಿಸ್ಥಿತಿ ಎದುರಿಸಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT