ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ಭರವಸೆ: ₹ 2.25 ಕೋಟಿ ವಂಚನೆ, 7 ಜನರ ವಿರುದ್ಧ ಎಫ್‌ಐಆರ್

ನಕಲಿ ನಿವೇಶನ ಹಂಚಿಕೆ ಪತ್ರ, ರಸೀದಿ ನೀಡಿ ನಂಬಿಸಿದ್ದ ವಂಚಕರು
Last Updated 4 ಫೆಬ್ರುವರಿ 2020, 2:27 IST
ಅಕ್ಷರ ಗಾತ್ರ

ಬೆಂಗಳೂರು: ಕಡಿಮೆ ಬೆಲೆಯಲ್ಲಿ ಬಿಡಿಎ ನಿವೇಶನ ನೋಂದಣಿ ಮಾಡಿಸಿಕೊಡುವುದಾಗಿ ಹೇಳಿ ನಕಲಿ ಹಂಚಿಕೆ ಪತ್ರ, ರಸೀದಿಗಳನ್ನು ಸೃಷ್ಟಿಸಿ ₹ 2.25 ಕೋಟಿ ವಂಚಿಸಿದ ಆರೋಪದಲ್ಲಿ ಆರು ಮಂದಿ ವಿರುದ್ಧ ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಹೊಸಕೆರೆಹಳ್ಳಿ ಬಿಎಸ್‌ಕೆ ಮೂರನೇ ಹಂತದ ನಿವಾಸಿ, ಉದ್ಯಮಿ ಕಿರಣ್‌ರಾಜ್‌ ದೂರು ನೀಡಿದ್ದಾರೆ. ಜೆ.ಆರ್‌.ನಾಗರಾಜು, ಶಾರದಾ, ಶ್ರೀವತ್ಸ, ಚೈತ್ರಾ, ಮಂಜೇಶ ಜಿ.ಅತ್ರೇಯ ಮತ್ತು ನಾಗರಾಜು ಅವರ ತಾಯಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ನನಗೆ ಬಿಡಿಎ ಆಯುಕ್ತರು ಹಾಗೂ ಅಧ್ಯಕ್ಷರು ಗೊತ್ತು. ಹೊಸಕೆರೆಹಳ್ಳಿಯ ಬನಶಂಕರಿ ಆರನೇ ಹಂತದ ಬಡಾವಣೆಯಲ್ಲಿ ಕಡಿಮೆ ಬೆಲೆಗೆ ಬಿಡಿಎ ನಾಗರಿಕ ಸೌಲಭ್ಯ (ಸಿ.ಎ) ನಿವೇಶನ
ಮತ್ತು ವಿವಿಧ ಅಳತೆಗಳ ನಿವೇಶನಗಳನ್ನು ಮರುಹಂಚಿಕೆ ಮಾಡಿಸಿ ಕೊಡುವುದಾಗಿ ಅರೋಪಿಗಳು ನಂಬಿಸಿದ್ದರು.

2018ರ ಅಕ್ಟೋಬರ್‌ ತಿಂಗಳಿನಿಂದ 2019ರ ನವೆಂಬರ್‌ ನಡುವೆ ನನ್ನಿಂದ ಮತ್ತು ನನ್ನ ಸ್ನೇಹಿತರಿಂದ ಆನ್‌ಲೈನ್‌ ಮೂಲಕ ಮತ್ತು ನಗದು ರೂಪದಲ್ಲಿ ಹಣ ಪಡೆದುಕೊಂಡಿದ್ದಾರೆ.

ಅಲ್ಲದೆ, ನಿವೇಶನ ಹಂಚಿಕೆ ಪತ್ರ ಮತ್ತು ಹಣ ಕಟ್ಟಿದ ಬಗ್ಗೆ ಬಿಡಿಎದಿಂದ ರಸೀದಿ ಕೂಡಾ ನೀಡಿದ್ದಾರೆ’ ಎಂದು ದೂರಿನಲ್ಲಿ ಕಿರಣ್‌ರಾಜ್‌ ಆರೋಪಿಸಿದ್ದಾರೆ.

‘ಆದರೆ, ಮಾತು ಕೊಟ್ಟಂತೆ ನಿವೇಶನಗಳನ್ನು ನೋಂದಣಿ ಮಾಡಿಸಿಕೊಡದೆ ಸತಾಯಿಸುತ್ತಿದ್ದರು. ಅನುಮಾನಗೊಂಡು ವಿಚಾರಿಸಿದಾಗ ನಮಗೆ ನೀಡಿರುವುದು ನಕಲಿ ನಿವೇಶನ ಹಂಚಿಕೆ ಪತ್ರ ಮತ್ತು ರಸೀದಿ ಎನ್ನುವುದು ಗೊತ್ತಾಗಿದೆ’ ಎಂದೂ ಅವರು ಈ ಸಂಬಂಧ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

₹ 576 ಮರುಪಾವತಿಸಲು ಕೇಳಿ ₹ 31,307 ಕಳೆದುಕೊಂಡ!
ಬೆಂಗಳೂರು: ಆನ್‌ಲೈನ್‌ನಲ್ಲಿ ₹ 576 ಮೊತ್ತದ ತರಕಾರಿಯನ್ನು ಖರೀದಿಸಿದ್ದ ವ್ಯಕ್ತಿಯೊಬ್ಬರ ಖಾತೆಗೆ ಕನ್ನ ಹಾಕಿದ ಸೈಬರ್‌ ಕಳ್ಳರು, ₹ 31,307 ಹಣ ಲಪಟಾಯಿಸಿದ ಘಟನೆ ಸರ್ಜಾಪುರ ರಸ್ತೆಯ ಅಂಬೇಡ್ಕರ್‌ ನಗರದಲ್ಲಿ ನಡೆದಿದೆ. ಹಣ ಕಳೆದುಕೊಂಡಿರುವ ಜೆ.ಸಿ.ಬಿ. ಆಪರೇಟರ್‌ ಶ್ರೀನಿವಾಸ್‌ ಎಂಬವರು ಈ ಬಗ್ಗೆ ವರ್ತೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಶ್ರೀನಿವಾಸ್‌ ಅವರು ಜ. 23ರಂದು ‘ಗ್ರೋಜೆರ್‌’ ಆ್ಯಪ್‌ನಲ್ಲಿ ₹ 576 ಮೊತ್ತದ ತರಕಾರಿ ಖರೀದಿಸಿದ್ದರು. ಇನ್ನೂ ಹೆಚ್ಚು ತರಕಾರಿ ಬೇಕೆಂಬ ಕಾರಣಕ್ಕೆ ಹಿಂದಿನ ಆರ್ಡರ್‌ ರದ್ದುಪಡಿಸಿ, ₹ 1,200 ಮೊತ್ತದ ತರಕಾರಿ ಪೂರೈಸಲು ಕೋರಿದ್ದರು. ಎರಡನೇ ಬಾರಿಗೆ ಖರೀದಿಸಿದ್ದ ತರಕಾರಿ ಮನೆಗೆ ತಲುಪಿತ್ತು. ಆದರೆ, ಮೊದಲ ಖರೀದಿಗೆ ಸಂಬಂಧಿಸಿ ಹಣ ಖಾತೆಗೆ ಮರುಜಮೆ ಆಗಿರಲಿಲ್ಲ.

ಈ ಬಗ್ಗೆ ವಿಚಾರಿಸಲು ಜ.31ರಂದು ಬೆಳಿಗ್ಗೆ ಆ್ಯಪ್‌ನಲ್ಲಿದ್ದ ಗ್ರಾಹಕ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದರು. ತಕ್ಷಣ ಬೇರೊಂದು ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿಯೊಬ್ಬ, ‘ಹಣ ಜಮೆ ಮಾಡುತ್ತೇವೆ. ನಿಮ್ಮ ಬ್ಯಾಂಕ್‌ ಖಾತೆಗೆ ಜೋಡಣೆಯಾಗಿರುವ ಮೊಬೈಲ್‌ ನಂಬರ್‌ ಕೊಡಿ’ ಎಂದು ಅವರಿಗೆ ಹೇಳಿದ್ದ.

ಮೊಬೈಲ್‌ ನಂಬರ್‌ ಕೊಡುತ್ತಿದ್ದಂತೆ, ‘ನಿಮ್ಮ ಮೊಬೈಲ್‌ಗೆ ಬಂದಿರುವ ಒಟಿಪಿ (ಒನ್‌ ಟೈಮ್‌ ಪಾಸ್‌ವರ್ಡ್‌) ಸಂಖ್ಯೆ ತಿಳಿಸಿ’ ಎಂದು ಶ್ರೀನಿವಾಸ್‌ ಅವರಿಗೆ ವ್ಯಕ್ತಿ ತಿಳಿಸಿದ್ದ. ಒಟಿಪಿ ಸಂಖ್ಯೆ ಕೇಳಿದ್ದರಿಂದ ಅನುಮಾನಗೊಂಡು ಖಾತೆ ಇರುವ ಫೆಡರಲ್‌ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಖಾತೆಯಿಂದ ₹ 5 ಸಾವಿರ, ₹ 10 ಸಾವಿರ, ₹ 10 ಸಾವಿರ, ₹ 6 ಸಾವಿರ ಮತ್ತು ₹ 307 ಹೀಗೆ ಐದು ಬಾರಿ ಒಟ್ಟು ₹ 31,307 ಹಣ ಕಡಿತಗೊಂಡಿರುವುದು ಶ್ರೀನಿವಾಸ್‌ ಅವರ ಗಮನಕ್ಕೆ ಬಂದಿದೆ.

‘ಒಟಿಪಿ ಪಡೆದ ಅಪರಿಚಿತರು ನನ್ನ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಬೇಕು’ ಎಂದು ದೂರಿನಲ್ಲಿ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT