ಮಂಗಳವಾರ, ಆಗಸ್ಟ್ 4, 2020
22 °C
ಬಿಡಿಎ ಸಲ್ಲಿಸಿದ್ದ ‘ಪರಿಷ್ಕೃತ ಮಹಾಯೋಜನೆ 2031’ l ನಗರಾಭಿವೃದ್ಧಿ ಇಲಾಖೆ ನಿರ್ಧಾರ

ತಾತ್ಕಾಲಿಕ ಅನುಮೋದನೆ ವಾಪಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ‘ಪರಿಷ್ಕೃತ ಮಹಾ ಯೋಜನೆ–2031’ಕ್ಕೆ ನೀಡಿರುವ ತಾತ್ಕಾಲಿಕ ಅನುಮೋದನೆಯನ್ನು ರಾಜ್ಯ ಸರ್ಕಾರ ವಾಪಸ್‌ ಪಡೆದಿದೆ.

ಬೆಂಗಳೂರು ಅಭಿವೃದ್ಧಿ ‍ಪ್ರಾಧಿಕಾರವು ಪರಿಷ್ಕೃತ ಮಹಾ ಯೋಜನೆಯನ್ನು 2019ರ ಜನವರಿ 17ರಂದು ಅಂತಿಮಗೊಳಿಸಿ ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿತ್ತು. ಒಂದೂವರೆ ವರ್ಷಗಳ ಬಳಿಕ ತಾತ್ಕಾಲಿಕ ಅನುಮೋದನೆಯನ್ನು ವಾಪಸ್‌ ‍ಪಡೆದಿರುವುದಾಗಿ ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿದೆ. ‘ಮಹಾಯೋಜನೆಗೆ 2017ರಲ್ಲಿ ತಾತ್ಕಾಲಿಕ ಅನುಮೋದನೆ ನೀಡಲಾಗಿತ್ತು. ಮಹಾಯೋಜನೆ ಪ್ರಸ್ತಾವನೆ ಬಗ್ಗೆ ಹಲವಾರು ಸಭೆಗಳನ್ನು ನಡೆಸಿ ಕೂಲಂಕಷವಾಗಿ ಪರಿಶೀಲಿಸಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹೀಗಾಗಿ, ಪ್ರಾಧಿಕಾರವು ಕರಡಿನಲ್ಲಿ ಇನ್ನಷ್ಟು ಅಂಶಗಳನ್ನು ಸೇರಿಸಿ ಹಾಗೂ ಬದಲಾವಣೆಗಳನ್ನು ಮಾಡಿ ಹೊಸ ಪ್ರಸ್ತಾವ ಸಲ್ಲಿಸಬೇಕಿದೆ. ಪ್ರಾಧಿಕಾರವು 2017ರ ನವೆಂಬರ್‌ 25ರಂದು ಯೋಜನೆಯ ಕರಡನ್ನು ವೆಬ್‌ಸೈಟ್‌ನಲ್ಲಿ (www.bdabangalore.org) ಪ್ರಕಟಿಸಿತ್ತು. ಸಾರ್ವಜನಿಕರಿಂದ 13,046 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಇವುಗಳನ್ನು ಪರಿಶೀಲಿಸಿದ್ದ ಬಿಬಿಎಂಪಿ ವಿಶೇಷ ಆಯುಕ್ತರ ನೇತೃತ್ವದ ಸಮಿತಿ ಯೋಜನೆಗೆ ಅಂತಿಮ ರೂಪ ನೀಡಿತ್ತು.

ಬಿಡಿಎ ಪರಿಷ್ಕೃತ ನಗರ ಮಹಾ ಯೋಜನೆ ಬಗ್ಗೆ ಸಾರ್ವಜನಿಕರು ಎತ್ತಿರುವ ಆಕ್ಷೇಪಣೆಗಳಿಗೆ ಸ್ಪಷ್ಟನೆ ನೀಡದೆಯೇ ಕರಡನ್ನು ಅಂತಿಮಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿ ‘ಸಿಟಿಜನ್ಸ್‌ ಆ್ಯಕ್ಷನ್‌ ಫೋರಂ’ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಹಾಗಾಗಿ, ಕರಡು ಅಂತಿಮಗೊಳಿಸುವ ಮುನ್ನ ಸಾರ್ವಜನಿಕರ ಆಕ್ಷೇಪಣೆಗಳನ್ನು ಸಮರ್ಪಕವಾಗಿ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.  ಹೈಕೋರ್ಟ್‌ ನಿರ್ದೇಶನದ ಮೇರೆಗೆ, ಯೋಜನೆಯ ಕರಡನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲನೆ ನಡೆಸಲು ಸರ್ಕಾರ 2018ರ ಮಾರ್ಚ್‌ನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್‌.ಪಾಟೀಲ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿತ್ತು. ಆ ಸಮಿತಿ ಒಮ್ಮೆಯೂ ಸಭೆಯನ್ನೇ ನಡೆಸಿರಲಿಲ್ಲ. ಈ ನಡುವೆ, ಬಿಡಿಎ ಆರ್‌ಎಂಪಿ 2031ರ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಾಯೋಜನೆಯ ಕರಡು ಸಿದ್ಧಪಡಿಸಲಾಯಿತು. ಮೈತ್ರಿ ಸರ್ಕಾರದ ಅವಧಿಯಲ್ಲಿ ಅದಕ್ಕೆ ಅಂತಿಮ ರೂಪ ನೀಡಲಾಯಿತು. ಮಹಾಯೋಜನೆಗೆ ಅನುಮೋದನೆ ನೀಡುವ ಮೊದಲೇ ಸರ್ಕಾರ ಪತನವಾಯಿತು. ಮಹಾಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ತರಲು ಬಿಜೆಪಿ ಸರ್ಕಾರ ಉದ್ದೇಶಿಸಿದೆ. ಅದಕ್ಕಾಗಿ ಅನುಮೋದನೆ ವಾಪಸ್‌ ಪಡೆದಿದೆ’ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು