ಮಂಗಳವಾರ, ಆಗಸ್ಟ್ 20, 2019
22 °C

ಪೊಲೀಸರಿಗೇ ಚಾಕುವಿನಿಂದ ಇರಿದು ಹಲ್ಲೆ ಯತ್ನ

Published:
Updated:

ಬೆಂಗಳೂರು: ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ಮೂವರನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

‘ಕೋಡಿಚಿಕ್ಕನಹಳ್ಳಿಯ ರಾಕೇಶ್ (30), ರಮೇಶ್ ಹಾಗೂ ಅಭಿಷೇಕ್ ಬಂಧಿತರು. ಕಾನ್‌ಸ್ಟೆಬಲ್ ಕೆ.ಎಸ್. ಲೋಕೇಶ್ ನೀಡಿರುವ ದೂರು ಆಧರಿಸಿ ಮೂವರ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸರಗಳವು ‍ಪ್ರಕರಣಗಳ ಪತ್ತೆಗಾಗಿ ಠಾಣೆ ವ್ಯಾಪ್ತಿಯಲ್ಲಿ ವಾಹನಗಳ ತಪಾಸಣೆ ನಡೆಸಲು ಸಿಬ್ಬಂದಿ ನಿಯೋಜಿಸಲಾಗಿತ್ತು. ಜುಲೈ 13ರಂದು ತಡರಾತ್ರಿ ಮೂವರು ಆರೋಪಿಗಳು, ಒಂದೇ ಬೈಕ್‌ನಲ್ಲಿ ರಾಯಲ್ ಶೆಲ್ಟರ್‌ 2ನೇ ಅಡ್ಡರಸ್ತೆಯಲ್ಲಿ ಹೊರಟಿದ್ದರು. ಅವರನ್ನು ತಡೆದಿದ್ದ ಸಿಬ್ಬಂದಿ, ತಪಾಸಣೆ ನಡೆಸಲು ಮುಂದಾಗಿದ್ದರು’.

‘ಸಿಬ್ಬಂದಿಯನ್ನೇ ಅವಾಚ್ಯ ಶಬ್ದಗಳಿಂದ ಬೈಯಲಾರಂಭಿಸಿದ್ದ ಆರೋಪಿಗಳು, ‘ಬೆಂಗಳೂರಿನಲ್ಲಿ ರಾತ್ರಿ ಹೊತ್ತು ಓಡಾಡಲು ನಮಗೆ ಸ್ವಾತಂತ್ರ್ಯವಿಲ್ಲವೆ’ ಎಂದು ಪ್ರಶ್ನಿಸಿದ್ದರು. ಆರೋಪಿಯೊಬ್ಬ, ‘ಪೊಲೀಸರದ್ದು ಬಹಳ ಆಗಿದೆ. ಒಬ್ಬನನ್ನು ಕೊಂದು ಹಾಕಿದರೆ, ನಗರದಲ್ಲಿ ಒಳ್ಳೆಯ ಹೆಸರು ಬರುತ್ತದೆ. ಆಮೇಲೆ ನಮ್ಮದೇ ಹವಾ’ ಎಂದು ಹೇಳಿದ್ದ. ನಂತರ, ಮಾತಿಗೆ ಮಾತು ಬೆಳೆದಿತ್ತು’ ಎಂದು ಅಧಿಕಾರಿ ಮಾಹಿತಿ ನೀಡಿದರು.

‘‍ಪೊಲೀಸರ ಮೇಲೆಯೇ ದಾಳಿ ಮಾಡಿದ್ದ ಆರೋಪಿಗಳು, ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್ ಅವರ ಕೈ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದರು. ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿ ಎಲ್ಲರೂ ಸ್ಥಳಕ್ಕೆ ಬಂದು ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್‌ ಅವರನ್ನು ರಕ್ಷಿಸಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ತಂದೊಪ್ಪಿಸಿದ್ದರು’ ಎಂದು ಹೇಳಿದರು. 

Post Comments (+)