ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಂದೂರು: ನಕಲಿ ಸ್ಯಾನಿಟೈಸರ್‌ ಜಪ್ತಿ, ಮನೆಯಲ್ಲೇ ಗೋದಾಮು

ವಶಪಡಿಸಿಕೊಂಡ ಸರಕಿನ ಮೌಲ್ಯ ₹2 ಲಕ್ಷ
Last Updated 2 ಏಪ್ರಿಲ್ 2020, 20:57 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಹ್ಯಾಂಡ್ ಸ್ಯಾನಿಟೈಸರ್ ಮಾರುತ್ತಿದ್ದ ಆರೋಪದಡಿ ಮನೆಯೊಂದರ ಮೇಲೆ ದಾಳಿ ಮಾಡಿದಬೆಳ್ಳಂದೂರು ಪೊಲೀಸರು,₹ 2 ಲಕ್ಷ ಮೌಲ್ಯದ 200 ಬಾಟಲಿ (ತಲಾ 500 ಎಂ.ಎಲ್) ನಕಲಿ ಸ್ಯಾನಿಟೈಸರ್ ಹಾಗೂ ರಾಸಾಯನಿಕವನ್ನು ಜಪ್ತಿ ಮಾಡಿದ್ದಾರೆ.

ಬಾಡಿಗೆ ಮನೆಯಲ್ಲೇ ಗೋದಾಮು ತೆರೆದು ನಕಲಿ ಸ್ಯಾನಿಟೈಸರ್ ತಯಾರಿಸುತ್ತಿದ್ದ ಆರೋಪಿ ಮುಬಾರಕ್ (24) ಎಂಬಾತನನ್ನು ಬಂಧಿಸಿದ್ದಾರೆ.

‘ನಕಲಿ ಸ್ಯಾನಿಟೈಸರ್ ಮಾರಾಟದ ಬಗ್ಗೆ ‘ವೀಟಾ ಕೇರ್ ಫಾರ್ಮಾ’ ಕಂಪನಿ ಮಾಲೀಕ ಎಸ್.ಸಿದ್ದೇಶ ಎಂಬುವರು ದೂರು ನೀಡಿದ್ದರು. ಅದರನ್ವಯ ಇನ್‌ಸ್ಪೆಕ್ಟರ್ ಜಿ. ಸೋಮಶೇಖರ್ ಹಾಗೂ ಪಿಎಸ್‌ಐ ಪರಶುರಾಮ್ ನೇತೃತ್ವದ ತಂಡ ಈ ದಾಳಿ ಮಾಡಿತು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

’ಎಲೆಕ್ಟ್ರಾನಿಕ್ ಸಿಟಿಯ ಹೊಸ ರಸ್ತೆ ನಿವಾಸಿಯಾದ ದೂರುದಾರ ಸಿದ್ದೇಶ್, ಹಲವು ವರ್ಷಗಳಿಂದ ವೀಟಾ ಕೇರ್ ಫಾರ್ಮಾ ಕಂಪನಿ ನಡೆಸುತ್ತಿದ್ದಾರೆ. ಕೇರಳದ ಎನ್‌ಎಪಿ (ನ್ಯೂ ಅಸೋಸಿಯೇಟ್ ಫಾರ್ಮಾ) ಕಂಪನಿ ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಹ್ಯಾಂಡ್ ರಬ್‌ಗಳನ್ನು ಕರ್ನಾಟಕದಲ್ಲಿ ವಿತರಣೆ ಮಾಡುವ ಹಕ್ಕು ಹೊಂದಿದ್ದಾರೆ. ಎನ್‌ಎಪಿ ಕಂಪನಿ ಸ್ಯಾನಿಟೈಸರ್‌ಗೆ ನಗರದಲ್ಲಿ ಬೇಡಿಕೆ ಹೆಚ್ಚಿದೆ’ ಎಂದರು.

‘ಇತ್ತೀಚಿಗೆ ಕೊರೊನಾ ವೈರಾಣು ಹರಡುವಿಕೆ ಭೀತಿಯಲ್ಲಿ ಸ್ಯಾನಿಟೈಸರ್‌ಗಳಿಗೆ ಬೇಡಿಕೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಮುಬಾರಕ್, ಎನ್‌ಎಪಿ ಕಂಪನಿ ಹೆಸರಿನಲ್ಲಿ ನಕಲಿ ಸ್ಯಾನಿಟೈಸರ್ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ದೂರುಗಳು ಬರುತ್ತಿದ್ದಂತೆ ಸಿದ್ದೇಶ್ ಪರಿಶೀಲನೆ ಆರಂಭಿಸಿದ್ದರು.’

‘ಸರ್ಜಾಪುರ ರಸ್ತೆಯ ರಾಧಾರೆಡ್ಡಿ ಲೇಔಟ್‌ನಲ್ಲಿರುವ ಬಾಲಾಜಿ ಮೆಡಿಕಲ್ಸ್ ಔಷಧಿ ಮಳಿಗೆಗೆ ಹೋಗಿ ವಿಚಾರಿಸಿದ್ದರು. ಅಲ್ಲಿ ಎನ್‌ಎಪಿ ಕಂಪನಿ ಸ್ಟಿಕರ್ ಇದ್ದ 500 ಎಂ.ಎಲ್ ಸ್ಯಾನಿಟೈಸರ್ ಬಾಟಲಿಯನ್ನು ₹610ಕ್ಕೆ ಮಾರಾಟ ಮಾಡುತ್ತಿದ್ದರು. ಬಾಟಲಿ ಪರಿಶೀಲಿಸಲಾಗಿ ನಕಲಿ ಸ್ಯಾನಿಟೈಸರ್ ಎಂಬುದು ಗಮನಕ್ಕೆ ಬಂದಿತ್ತು’ ಎಂದು ಮೂಲಗಳು ಹೇಳಿವೆ.

ರಾಸಾಯನಿಕವೇ ಸ್ಯಾನಿಟೈಸರ್: ‘ಎನ್‌ಎಪಿ ಕಂಪನಿ ಬಾಟಲಿ ಹಾಗೂ ಸ್ಟಿಕರ್‌ಗಳನ್ನು ನಕಲು ಮಾಡಲಾಗಿತ್ತು. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕವನ್ನು ತಂದು ಬಾಟಲಿಯಲ್ಲಿ ಹಾಕಿ, ಅದನ್ನೇ ಅಸಲಿ ಸ್ಯಾನಿಟೈಸರ್ ಎಂದು ಮಾರಾಟ ಮಾಡಲಾಗುತ್ತಿತ್ತು’ ಎಂದು ಪೊಲೀಸರು ಹೇಳಿದರು.

’ರಾಸಾಯನಿಕ ಬಳಕೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಹಣದ ಆಸೆಗಾಗಿ ಆರೋಪಿ ಈ ರೀತಿ ನಕಲಿ ಸ್ಯಾನಿಟೈಸರ್ ತಯಾರಿಸುತ್ತಿದ್ದ. ಆತನ ಬಳಿ ಇದ್ದ ಖಾಲಿ ಬಾಟಲಿಗಳನ್ನೂ ಜಪ್ತಿ ಮಾಡಲಾಗಿದೆ. ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT