ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಗಳ ಜನ್ಮಸ್ಥಳ ಬೆಳ್ಳಂದೂರು ಕೆರೆ!

ಕೆರೆಯ ಒಡಲು ಸೇರುತ್ತಿದೆ ಮಲಿನ ನೀರು l ಎನ್‌ಜಿಟಿ ಆದೇಶಕ್ಕೂ ಕಿಮ್ಮತ್ತು ನೀಡದ ನಾಗರಿಕ ಸಂಸ್ಥೆಗಳು
Last Updated 30 ಅಕ್ಟೋಬರ್ 2019, 4:44 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಳ್ಳಂದೂರು ಕೆರೆಯ ನೀರು ಸ್ಪರ್ಶಿಸಿದರೂ ಕಾಲು ಉರಿಯುತ್ತದೆ. ಡೆಂಗಿ, ಗಂಟಲು ಕೆರೆತ, ತಲೆಭಾರ, ಉಸಿರಾಟದ ಸಮಸ್ಯೆ ನಮ್ಮನ್ನು ಕಾಡುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು, ಬಿಬಿಎಂಪಿ, ಬಿಡಿಎ, ಜಲಮಂಡಳಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಒಗ್ಗೂಡಿ ನಮಗೆ ನೀಡುತ್ತಿರುವ ಶಿಕ್ಷೆ ಇದು...’

ನಗರದ ಅತಿ ದೊಡ್ಡ ಕೆರೆ ಎಂದೇ ಹೇಳಲಾಗುವ ಬೆಳ್ಳಂದೂರು ಕೆರೆಯ ಸುತ್ತ–ಮುತ್ತ ವಾಸಿಸುವವರು ಹೇಳುವ ಮಾತುಗಳಿವು. 917 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಈ ಜಲಮೂಲಕ್ಕೆ ಕಲುಷಿತ ನೀರು ಹರಿದು ಸಂಪೂರ್ಣ ಮಲಿನಗೊಂಡಿದೆ.

‘ಹಳ್ಳಿಗಳಲ್ಲಿ ಯಾವುದಾದರೂ ಕೆರೆ ಇದ್ದರೆ ಅದರ ಸುತ್ತ ಹೆಚ್ಚು ಕಾಲ ಕಳೆಯಲು ಮನಸಾಗುತ್ತದೆ. ಆದರೆ, ಈ ಬೆಳ್ಳಂದೂರು ಕೆರೆ ಬಳಿ ಹೋದರೆ, ಯಾವಾಗ ದೂರ ಹೋಗುತ್ತೇವೆಯೋ ಎನಿಸುತ್ತದೆ. ಅಷ್ಟೊಂದು ದುರ್ವಾಸನೆ ಬರುತ್ತದೆ’ ಎಂದು ಜಗದೀಶ ರೆಡ್ಡಿ ಹೇಳುತ್ತಾರೆ.

ಮೆಜೆಸ್ಟಿಕ್, ಕಲಾಸಿಪಾಳ್ಯ, ಶಿವಾಜಿನಗರ, ಆಡುಗೋಡಿ ಅಲ್ಲದೆ ದೊಮ್ಮಲೂರು ಮೇಲ್ಸೇತುವೆಯ ಕೆಳಗಿನ ಕಾಲುವೆಯ ನೀರು ಹಾಗೂ ಸುತ್ತ–ಮುತ್ತಲಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಮಲಿನ ನೀರು ನೇರವಾಗಿ ಕೆರೆ ಸೇರುತ್ತಿದೆ. ಇದರಿಂದ ದುರ್ವಾಸನೆ ಮತ್ತು ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ವಾತಾವರಣ ಪೂರ್ತಿ ವಿಷಪೂರಿತವಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಕೆರೆಯ ಸಂರಕ್ಷಣೆಗಾಗಿ ಬಿಡಿಎ ಬೇಲಿ ಹಾಕುತ್ತಿದೆ. ಹೂಳನ್ನು ತೆಗೆಯಲು, ಜಲಮೂಲವನ್ನು ಬರಿದು ಮಾಡಲಾಗುತ್ತಿದ್ದು, ‘ಡೈವರ್ಷನ್‌ ಚಾನೆಲ್‌’ ಕಾಮಗಾರಿ ಕೂಡ ನಡೆಯುತ್ತಿದೆ. ನೊರೆ ಹಾವಳಿಯನ್ನು ತಪ್ಪಿಸುವ ಸಲುವಾಗಿ ಸ್ಲೂಯಿಸ್ ಗೇಟ್ ಮೆಕಾನಿಸಂ ಮತ್ತು ತಡೆಗೋಡೆಗಳನ್ನು ಬೆಳ್ಳಂದೂರಿನಲ್ಲಿ ಅಳವಡಿಸಲಾಗುತ್ತಿದೆ. ಆದರೆ, ಕಲುಷಿತ ನೀರು ಕೆರೆಗೆ ಸೇರುತ್ತಿರುವುದನ್ನು ತಡೆಯುವ ಕಾರ್ಯ ಮಾತ್ರ ಆಗುತ್ತಿಲ್ಲ.

ಕೆರೆಯನ್ನು ಸಂರಕ್ಷಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ನಾಲ್ಕು ವರ್ಷಗಳ ಹಿಂದೆಯೇ ಸೂಚನೆ ನೀಡಿದೆ. ಎನ್‌ಜಿಟಿ ಆದೇಶದಂತೆ ಕಳೆದ ಜನವರಿಯಲ್ಲಿ ರಾಜ್ಯ ಸರ್ಕಾರದಿಂದ ₹500 ಕೋಟಿ ಮೊತ್ತದ ಠೇವಣಿಯನ್ನು ಬಿಬಿಎಂಪಿಯ ‘ಎಸ್ಕ್ರೊ ಅಕೌಂಟ್‌’ಗೆ ವರ್ಗಾಯಿಸಲಾಗಿದೆ. ಎನ್‌ಜಿಟಿ ಮಾರ್ಗದರ್ಶನದಲ್ಲಿ ನಿವೃತ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕೆರೆಯ ಇಂದಿನ ಸ್ಥಿತಿಗೆ ಕಾರಣವಾದ ನಗರದ ಎಲ್ಲ ನಾಗರಿಕ ಸಂಸ್ಥೆಗಳ ಲೋಪದೋಷಗಳನ್ನು ಹಾಗೂ ಕೆರೆಯ ಅಭಿವೃದ್ಧಿಗೆ ಬೇಕಾದ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಮಿತಿಯು ನ್ಯಾಯಾಲಯಕ್ಕೆ ಸಲ್ಲಿಸಿದೆ.

‘ಎನ್‌ಜಿಟಿಯ ಆದೇಶಕ್ಕೂ ಸ್ಥಳೀಯ ನಾಗರಿಕ ಸಂಸ್ಥೆಗಳು ಬೆಲೆ ಕೊಟ್ಟಿಲ್ಲ. ಕಲುಷಿತ ನೀರಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದೆ ಜಮೀನು ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಸ್ಥಳೀಯರಾದ ಪಿ.ಎಂ. ಪ್ರಕಾಶ್‌ ಹಾಗೂ ಬಸವರಾಜ್‌ ಹೇಳಿದರು.

‘ಕಟ್ಟಡಗಳಿಗೆ ನೋಟಿಸ್‌ ನೀಡಲಾಗಿದೆ’

‘ಒಳಚರಂಡಿ ಸಂಪರ್ಕ ಪಡೆಯದೇ ಅನಧಿಕೃತವಾಗಿ ಕೆರೆಗೆ ನೀರು ಹರಿಸಿದ ಕಟ್ಟಡಗಳ ಮಾಲೀಕರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೂಲಕ ನೋಟಿಸ್‌ ನೀಡಲಾಗಿದೆ’ ಎಂದುಜಲಮಂಡಳಿ ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಸಿ. ಗಂಗಾಧರ್ ಹೇಳಿದರು.

‘ಈವರೆಗೆ 203 ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿದ್ದು, ಈ ಪೈಕಿ ಬೆಳ್ಳಂದೂರು ಕೆರೆಗೆ ನೀರು ಬಿಡುವ ಕಟ್ಟಡಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಅಧಿಕೃತವಾಗಿ ಸಂಪರ್ಕ ಪಡೆದು, ಎಸ್‌ಟಿಪಿಗಳನ್ನು ಸ್ಥಾಪಿಸಿಕೊಳ್ಳಬೇಕು. ನೋಟಿಸ್‌ ನಂತರವೂ ಎಚ್ಚೆತ್ತುಕೊಳ್ಳದಿದ್ದರೆ ನೀರು ಮತ್ತು ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ’ ಎಂದು ತಿಳಿಸಿದರು.

ಹದಿನೈದು ದಿನಗಳ ಹಿಂದೆ ಬೆಳ್ಳಂದೂರು ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ವರ್ತೂರು–ಬೆಳ್ಳಂದೂರು ಕೆರೆ ಅಭಿವೃದ್ಧಿಗೆ ₹450 ಕೋಟಿ ಅನುದಾನ ಬಿಡುಗಡೆಯಾಗಿದೆ.

-ಅರವಿಂದ ಲಿಂಬಾವಳಿ, ಮಹದೇವಪುರ ಕ್ಷೇತ್ರದ ಶಾಸಕ

ಕಲುಷಿತ ನೀರನ್ನು ಸಂಸ್ಕರಿಸದೆ ನೇರವಾಗಿ ಕೆರೆಗೆ ಬಿಡಲಾಗುತ್ತಿದೆ. ಜಲಮಂಡಳಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

-ಆರ್. ಶ್ರೀನಿವಾಸ್ಬೆ, ಳ್ಳಂದೂರು ನಿವಾಸಿ

ಪಿಕ್‌ನಿಕ್‌ ತಾಣಕ್ಕೆ ಭೇಟಿ ನೀಡುವಂತೆ ಸಚಿವರು, ಶಾಸಕರು, ಮೇಯರ್‌ ಎಲ್ಲ ಭೇಟಿ ನೀಡುತ್ತಾರೆ. ಆದರೆ, ಕೆರೆ ಮಾತ್ರ ಅಭಿವೃದ್ಧಿಯಾಗುತ್ತಿಲ್ಲ.

ಎಂ.ವೆಂಕಟೇಶ್‌, ಬೆಳ್ಳಂದೂರು ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT