ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಂದೂರು | ಐಟಿ ಹಬ್ ಎಂಬ ದೂಳಿನ ಜಾಲ

Last Updated 13 ಜನವರಿ 2020, 2:42 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮಾಹಿತಿ ತಂತ್ರಜ್ಞಾನ (ಐ.ಟಿ) ಕಂ‍ಪನಿಗಳು, ವಿಸ್ತರಣೆಯಾಗದ ರಸ್ತೆಗಳು, ಗಂಟೆಗೆ ಕೇವಲ ನಾಲ್ಕೈದು ಕಿಲೋ ಮೀಟರ್ ಸಂಚರಿಸುವ ವಾಹನಗಳು, ಬಸ್‌ಗಳೇ ಬಾರದ ಊರುಗಳು, ಆ ಊರುಗಳ ತುಂಬೆಲ್ಲಾ ದೂಳೋ ದೂಳು...

ಇದು ಸಿಲಿಕಾನ್ ಸಿಟಿಯ ಐ.ಟಿ ಕಂಪನಿಗಳ ತಾಣ ಎಂದೇ ಕರೆಸಿಕೊಳ್ಳುವ ಬೆಳ್ಳಂದೂರು ಸುತ್ತಮುತ್ತಲ ದುಸ್ಥಿತಿ. ಹೆಸರಿಗೆ ಐ.ಟಿ ಹಬ್‌ ಮೂಲಸೌಕರ್ಯಗಳ ವಿಷಯದಲ್ಲಿ ಕುಗ್ರಾಮಗಳಿಗಿಂತ ಕಡೆಯಾಗಿದೆ. ಅಗೆದು ಬಿಟ್ಟಿರುವ ರಸ್ತೆಗಳು, ರಸ್ತೆಯಲ್ಲೇ ಹರಿಯುವ ಕೊಳಚೆ ನೀರು, ಅದರಲ್ಲಿ ಬಿದ್ದು ಒದ್ದಾಡುವ ಹಂದಿಗಳು, ಕೆರೆಗಳ ಒಡಲನ್ನು ಸೇರುವ ಶೌಚ ಗುಂಡಿಯ ನೀರು, ಇವೆಲ್ಲವುದರ ನಡುವೆ ಐಟಿ ಉದ್ಯೋಗಿಗಳು...ಹೀಗೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಈ ಭಾಗದ ಜನರು ಬದುಕು ಸಾಗಿಸುತ್ತಿದ್ದಾರೆ.

ಬೆಳ್ಳಂದೂರು, ಕಸವನಹಳ್ಳಿ, ಕೈಕೊಂಡ್ರಹಳ್ಳಿ, ಹರಳೂರು, ದೊಡ್ಡಕನ್ನಳ್ಳಿ... ಹೀಗೆ ಹೊರವರ್ತುಲ ರಸ್ತೆ ಮತ್ತು ಸರ್ಜಾಪುರ ರಸ್ತೆ ಆಸುಪಾಸಿನಲ್ಲಿ ಐಟಿ ಕಂಪನಿಗಳ ಗಗನಮುಖಿ ಕಟ್ಟಡಗಳು ಒಂದರ ಹಿಂದೆ ಒಂದರಂತೆ ಎದ್ದು ನಿಂತಿವೆ. ಈ ಕಂಪನಿಗಳ ಉದ್ಯೋಗಿಗಳ ವಾಸ್ತವ್ಯಕ್ಕೆ ಅದೇ ಪ್ರಮಾಣದಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯಗಳೂ ತಲೆ ಎತ್ತಿವೆ.

ಹೊರವರ್ತುಲ ರಸ್ತೆಯಲ್ಲಿ ಸರ್ಜಾಪುರ ಬಳಿ ವಾಹನ ದಟ್ಟಣೆ

‘ಹೆಚ್ಚೆಂದರೆ ಒಂದು ಸಾವಿರ ಜನರ ವಾಸ ಮಾಡಬುದಾದ ಊರುಗಳಲ್ಲಿ ಈಗ ಸರಾಸರಿ 10 ಸಾವಿರ ಜನ ವಾಸಿಸುತ್ತಿದ್ದಾರೆ. ಪರಿಣಾಮವಾಗಿ ರಸ್ತೆಗಳೆಲ್ಲಾ ವಾಹನಗಳಿಂದ ತುಂಬಿವೆ. ಅಗೆದು ಬಿಟ್ಟಿರುವ ರಸ್ತೆಗಳಲ್ಲೇ ಅವು ಸಂಚರಿಸುವಾಗ ಏಳುವ ದೂಳು ನೋಡಿದರೆ ಸಿರಿಯಾದಲ್ಲಿನ ಬಾಂಬ್ ಸ್ಫೋಟ ನೆನಪಾಗುತ್ತದೆ’ ಎನ್ನುತ್ತಾರೆ ಸ್ಥಳೀಯರು.

‘ಸಂಚಾರ ದಟ್ಟಣೆ ಸಮಸ್ಯೆಯನ್ನು ವರ್ಣಿಸಲು ಪದಗಳೇ ಇಲ್ಲ. ಬೆಳಿಗ್ಗೆ ಮತ್ತು ಸಂಜೆ ವೇಳೆ ವಾಹನಗಳು ಗಂಟೆಗೆ 4ರಿಂದ 5 ಕಿಲೋ ಮೀಟರ್‌ ಸಂಚರಿಸಿದರೆ ಹೆಚ್ಚು ಎನ್ನುವ ಸ್ಥಿತಿ ಇದೆ. ಕಚೇರಿಯಲ್ಲಿ ಕೆಲಸ ನಿರ್ವಹಿಸುವುದಕ್ಕಿಂತ ರಸ್ತೆಯಲ್ಲಿ ಸಂಚಾರ ಮಾಡುವುದೇ ದೊಡ್ಡ ತಲೆನೋವಾಗಿದೆ’ ಎನ್ನುತ್ತಾರೆ ಐಟಿ ಕಂಪನಿ ಉದ್ಯೋಗಿಗಳು.

2015ರ ಪರಿಷ್ಕೃತ ನಗರ ಮಹಾ ಯೋಜನೆ (ಆರ್‌ಎಂಪಿ) ಪ್ರಕಾರ ಈ ವಲಯದಲ್ಲಿ ಭಾರಿ ಪ್ರಮಾಣದ ವಸತಿ ಯೋಜನೆಗಳು ಕಚೇರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳ್ಳಂದೂರು ವಾರ್ಡ್‌ ಒಂದರಲ್ಲೇ ಆರ್‌ಎಂಪಿ ಪ್ರಕಾರ 35 ಕಿ.ಮೀ.ಗೂ ಹೆಚ್ಚು ಉದ್ದದ ರಸ್ತೆಗಳ ನಿರ್ಮಾಣ ಆಗಬೇಕಿತ್ತು. ಈ ಆರ್‌ಎಂಪಿಯ ಅವಧಿ ಮುಗಿದು ನಾಲ್ಕು ವರ್ಷಗಳ ಕಳೆದರೂ ಇವುಗಳನ್ನು ನಿರ್ಮಿಸಿಲ್ಲ.

‘ಹೀಗಾಗಿ ಕಿರಿದಾದ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಸರ್ಜಾಪುರ ರಸ್ತೆ ವಿಸ್ತರಣೆ ಯೋಜನೆಯ ಕಾಮಗಾರಿಯೂ ಇನ್ನೂ ಆರಂಭವಾಗಿಲ್ಲ. ಬೆಳ್ಳಂದೂರು ಎಂದ ಕೂಡಲೇ ಮಲೀನಗೊಂಡಿರುವ ಕೆರೆಯ ಸಮಸ್ಯೆಯಷ್ಟೇ ಎಂದೂ ಹೊರಗಿನ ಜನರು ಅಂದುಕೊಂಡಿದ್ದಾರೆ. ಆದರೆ, ಸಮಸ್ಯೆಗಳ ಪಟ್ಟಿಯಲ್ಲಿ ಬೆಳ್ಳಂದೂರು ಕೆರೆಯೂ ಒಂದು ಅಷ್ಟೇ. ನರಕದಲ್ಲಿ ಜೀವನ ಮಾಡಿದ ಅನುಭವ ನಮ್ಮದು’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

‘ಬಿಬಿಎಂಪಿ ಬೊಕ್ಕಸಕ್ಕೆ ವಾರ್ಡ್‌ ಒಂದರಿಂದ ಅತೀ ಹೆಚ್ಚು ತೆರಿಗೆ ಸೇರುತ್ತಿರುವುದು ಬೆಳ್ಳಂದೂರಿನಿಂದ. ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗುತ್ತಿರುವುವೂ ಬೆಳ್ಳಂದೂರು ವಾರ್ಡ್‌ನಲ್ಲೇ. ಆದರೂ, ಮೂಲಸೌಕರ್ಯ ಇಲ್ಲದಿರುವುದು ದುರಂತ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಮಹದೇವಪುರ ವಲಯದಲ್ಲಿ ನಾಲ್ಕು ವರ್ಷಗಳಲ್ಲಿ ₹ 2,166 ಕೋಟಿಯನ್ನು ಬಿಬಿಎಂಪಿ ಆಸ್ತಿ ತೆರಿಗೆ ರೂಪದಲ್ಲಿ ಸಂಗ್ರಹಿಸಿದೆ. ಇದರಲ್ಲಿ ಈ ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವಷ್ಟು ಅನುದಾನ ನೀಡುತ್ತಿಲ್ಲ. ಅಭಿವೃದ್ಧಿ ಹೊಂದಿರುವ ಜಯನಗರಕ್ಕೂ, ಅಭಿವೃದ್ಧಿ ಹೊಂದುತ್ತಿರುವ ಬೆಳ್ಳಂದೂರಿಗೂ ಒಂದೇ ಪ್ರಮಾಣದ ಅನುದಾನ ನೀಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬೆಳ್ಳಂದೂರು ನಿವಾಸಿ ವಿಷ್ಣುಪ್ರಸಾದ್‌.

ಕೆಲವೆಡೆ ರಸ್ತೆಗಳು ಕಿರಿದಾಗಿದ್ದು, ಮನೆಗಳನ್ನು ಒಡೆದು ಬಸ್‌ ಹೋಗುವಂತೆ ರಸ್ತೆ ನಿರ್ಮಿಸುವುದು ಕಷ್ಟ. ಮಹದೇವಪುರ ವ್ಯಾಪ್ತಿಯಲ್ಲಿ 110 ಹಳ್ಳಿ ಯೋಜನೆಯ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎನ್ನುತ್ತಾರೆ ಬಿಬಿಎಂಪಿ ಆಯುಕ್ತಬಿ.ಎಚ್.ಅನಿಲ್‌ಕುಮಾರ್.

ಇನ್ನಷ್ಟು ಕಂಪನಿಗಳಿಗೆ ಅನುಮತಿ

ಸದ್ಯ ಇರುವ ಜನದಟ್ಟಣೆ ಕಾರಣಕ್ಕೆ ಉಂಟಾಗಿರುವ ಸಮಸ್ಯೆ ಪರಿಹಾರಕ್ಕೆ ಅಲೋಚಿಸುವ ಬದಲು, ಇನ್ನಷ್ಟು ಕಂಪನಿಗಳಿಗೆ ಅನುಮತಿಯನ್ನು ಸರ್ಕಾರ ನೀಡುತ್ತಲೇ ಇದೆ.

ಸರ್ಜಾಪುರ ರಸ್ತೆಯ ಕೊಡತಿ ಬಳಿ ಮತ್ತೊಂದು ಐಟಿ ಪಾರ್ಕ್ ತಲೆ ಎತ್ತುತ್ತಿದೆ. ಕನಿಷ್ಠ 40 ಸಾವಿರ ಉದ್ಯೋಗಿಗಳನ್ನು ಆ ಕಂಪನಿ ನೇಮಕ ಮಾಡಿಕೊಳ್ಳಲಿದೆ. ಅವರು ಮತ್ತು ಅವರ ಕುಟುಂಬ ಸದಸ್ಯರು ‌ಈ ಪ್ರದೇಶಕ್ಕೆ ಹೊಸದಾಗಿ ಸೇರ್ಪಡೆಯಾಗಲಿದ್ದಾರೆ.

‘ಸದ್ಯ 5 ವಿಶೇಷ ಆರ್ಥಿಕ ವಲಯಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೆರಡು ಎಸ್‌ಇಜೆಡ್‌ಗಳಿಗೆ ಅನುಮತಿ ನೀಡಲಾಗಿದೆ. ಸರ್ಜಾಪುರ ರಸ್ತೆ ಆಸುಪಾಸಿನಲ್ಲಿ 80 ಸಾವಿರಕ್ಕೂ ಅಧಿಕ ಉದ್ಯೋಗಿಗಳಿಗೆ ಆಶ್ರಯ ಕಲ್ಪಿಸುವ ಕಚೇರಿಗಳಿಗೆ ಹಾಗೂ ಹೊರ ವರ್ತುಲ ರಸ್ತೆ ಆಸುಪಾಸಿನಲ್ಲಿ 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಚೇರಿಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಅವು ಶೀಘ್ರವೇ ಇಲ್ಲಿ ಆರಂಭವಾಗಲಿವೆ. ಆಗ ವಾಹನಗಳಿರಲಿ ರಸ್ತೆಗಳಲ್ಲಿ ಪಾದಚಾರಿಗಳು ನಡೆದಾಡಲೂ ಕಷ್ಟವಾಗಬಹುದು’ ಎಂಬುದು ಸ್ಥಳೀಯರ ಆತಂಕ.

ಇಬ್ಬಲೂರು ಉದ್ಯಾನದ ಎದುರಿನ ಜಂಕ್ಷನ್ ರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ

ಬಸ್‌ ಕಾಣದ ಊರುಗಳು: ರಸ್ತೆಗಿಳಿಯುವ ಕಾರುಗಳು

ಬೆಳ್ಳಂದೂರು ವಾರ್ಡ್‌ನ ಮೂರು ಊರುಗಳಿಗೆ ಬಸ್‌ಗಳೇ ಬರುವುದಿಲ್ಲ. ಕಸವನಹಳ್ಳಿ, ದೊಡ್ಡಕನ್ನಳ್ಳಿ, ಹರಳೂರಿಗೆ ಬಸ್‌ಗಳು ಬರುವಷ್ಟು ಅಗಲದ ರಸ್ತೆಗಳೇ ಇಲ್ಲ.

ಈ ಊರಿನ ಸುತ್ತಮುತ್ತ ಸಾವಿರಾರು ಮನೆಗಳು ನಿರ್ಮಾಣವಾಗಿವೆ. ಇಲ್ಲಿನ ಕಿರಿದಾದ ರಸ್ತೆಗಳಲ್ಲಿ ಬಸ್‌ಗಳನ್ನು ತಿರುಗಿಸಲು ಸಾಧ್ಯವಾಗುವಷ್ಟು ಜಾಗ ಇಲ್ಲ. ಹೀಗಾಗಿ, ಇಲ್ಲಿನ ನಿವಾಸಿಗಳು ಕಾರು ಮತ್ತು ದ್ವಿಚಕ್ರ ವಾಹನಗಳೊಂದಿಗೆ ರಸ್ತೆಗೆ ಇಳಿಯುತ್ತಾರೆ. ಈ ಬಡಾವಣೆ ಮಾತ್ರವಲ್ಲದೇ ಹೊರವರ್ತುಲ ರಸ್ತೆಯಲ್ಲಿನ ವಾಹನ ದಟ್ಟಣೆ ಹೆಚ್ಚಳಕ್ಕೂ ಇದು ಕಾರಣವಾಗಿದೆ.

ದೂಳಿನ ಮಜ್ಜನ, ಕೆಸರಿನ ಸ್ನಾನ

ಈ ನಡುವೆ ಬೆಳ್ಳಂದೂರು ವಾರ್ಡ್‌ವೊಂದರ 7 ಹಳ್ಳಿಗಳಲ್ಲಿ ಜಲಮಂಡಳಿಯವರು ಕಾವೇರಿ ನೀರು ಪೂರೈಕೆ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ.

‘ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗೆ ಜಲಮಂಡಳಿಯಿಂದ ರಸ್ತೆಗಳನ್ನು ಅಗೆಯಲಾಗಿದೆ. ಬಿಸಿಲಾದರೆ ದೂಳಿನ ಮಜ್ಜನ, ಮಳೆಯಾದರೆ ಕೆಸರಿನಲ್ಲಿ ಸ್ನಾನವಾಗುತ್ತಿದೆ’ ಎನ್ನುತ್ತಾರೆ ಐಟಿ ಉದ್ಯೋಗಿಗಳು.

‘ಕಸವನಹಳ್ಳಿ ಮತ್ತು ಜುನ್ನಸಂದ್ರ, ಹರಳಹಳ್ಳಿಯಲ್ಲಿ ಕಾವೇರಿ ನೀರಿನ ಸಂಪರ್ಕ ಸದ್ಯ ಆರಂಭವಾಗುತ್ತಿದೆ. ಇನ್ನೂ ಒಳಚರಂಡಿ ಸಂಪರ್ಕ ಪೂರ್ಣಗೊಂಡಿಲ್ಲ’ ಎಂದು ಅವರು ತಿಳಿಸಿದರು.

ನಮ್ಮ ಮೆಟ್ರೊ ಬಲು ದೂರ

ಅತೀ ಹೆಚ್ಚು ವಾಹನ ದಟ್ಟಣೆ ಇರುವ ಈ ಪ್ರದೇಶಕ್ಕೆ ಮೆಟ್ರೊ ರೈಲು ಮಾರ್ಗದ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಬೆಳ್ಳಂದೂರಿಗೆ ಮೆಟ್ರೊ ಸಂಪರ್ಕ ಕನಸಿನ ಕೂಸಾಗಿಯೇ ಉಳಿದಿದೆ.

‘ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್‌.ಪುರ ತನಕ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಯೋಜನೆಯು ಟೆಂಡರ್ ಹಂತದಲ್ಲಿದೆ. 2025ರೊಳಗೆ ಪೂರ್ಣಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ಆರಂಭವೇ ಆಗದ ಕಾಮಗಾರಿ ಅಷ್ಟರಲ್ಲಿ ಪೂರ್ಣಗೊಳ್ಳಲಿದೆಯೇ’ ಎಂಬುದು ಜನರ ಪ್ರಶ್ನೆ.

‘ಇನ್ನೊಂದೆಡೆ, ಉಪನಗರ ರೈಲು ಯೋಜನೆಯೂ ಕಾರ್ಯರೂಪಕ್ಕೆ ಬಂದಿಲ್ಲ. ಮಾನ್ಯತಾ ಟೆಕ್‌‍ಪಾರ್ಕ್‌– ಬೈಯಪ್ಪನಹಳ್ಳಿ– ಬೆಳ್ಳಂದೂರು– ಹೀಲಳಿಗೆಗೆ ಹೆಚ್ಚು ರೈಲು ಓಡಿಸಬೇಕು ಎಂಬ ಕೂಗಿಗೆ ಬೆಲೆ ಸಿಕ್ಕಿಲ್ಲ. ಹೀಗಾಗಿ ಸಂಚಾರ ದಟ್ಟಣೆಯ ನಡುವೆಯೇ ಬದುಕಿನ ಅರ್ಧಭಾಗವನ್ನು ಕಳೆಯುತ್ತಿದ್ದೇವೆ’ ಎಂದು ಜನ ಬೇಸರ ವ್ಯಕ್ತಪಡಿಸುತ್ತಾರೆ.

ಬೆಳ್ಳಂದೂರು ವಾರ್ಡ್‌

ಹೆಚ್ಚುತ್ತಲೇ ಇದೆ ಜನದಟ್ಟಣೆ

ನಗರದ ಬೇರೆಲ್ಲಾ ಪ್ರದೇಶಕ್ಕೆ ಹೋಲಿಸಿದರೆ ಮಹದೇವಪುರ ವ್ಯಾಪ್ತಿಯಲ್ಲಿ ಜನವಸತಿ ವೇಗವಾಗಿ ಬೆಳೆಯುತ್ತಿದೆ. 2001ರ ಗಣತಿ ಪ್ರಕಾರ ಮಹದೇವಪುರ ವಲಯದ ವಾರ್ಡ್‌ಗಳ ಸರಾಸರಿ ಜನಸಂಖ್ಯೆ 48,220 ಇತ್ತು. 2011ರ ವೇಳೆಗೆ ಈ ಪ್ರಮಾಣವು 2.48 ಲಕ್ಷಕ್ಕೆ ಹೆಚ್ಚಾಗಿದೆ.

2013ರ ವಿಧಾನಸಭಾ ಚುನಾವಣೆ ವೇಳೆ ವಾರ್ಡ್‌ನ ಸರಾಸರಿ ಜನಸಂಖ್ಯೆ 3.68 ಲಕ್ಷಕ್ಕೆ ಹಾಗೂ 2019ರ ಲೋಕಸಭಾ ಚುನಾವಣೆ ವೇಳೆಗೆ 5.25 ಲಕ್ಷಕ್ಕೆ ಹೆಚ್ಚಳ ಕಂಡಿದೆ. ಅದಕ್ಕೆ ಅನುಗುಣವಾಗಿ ಮೂಲಸೌಕರ್ಯಗಳು ಹೆಚ್ಚಳ ಕಂಡಿಲ್ಲ ಎಂಬುದು ಈ ಭಾಗದ ಜನರ ಆರೋಪ.

ಅಂಕಿಅಂಶಗಳಲ್ಲಿ ಬೆಳ್ಳಂದೂರು

ಹಾಲಿ ಇರುವ ಎಸ್‌ಇಜೆಡ್‌– 5,ಬರಲಿರುವ ಎಸ್‌ಇಜೆಡ್‌– 2,ಬೆಳ್ಳಂದೂರಿನಲ್ಲಿರುವ ಐಟಿ ಕಂಪನಿಗಳು– 2,500,ನಾಲ್ಕು ವರ್ಷಗಳಲ್ಲಿ ಸಂಗ್ರಹವಾದ ಆಸ್ತಿ ತೆರಿಗೆ– ₹ 2,166 ಕೋಟಿ,ಐಟಿ ಹಬ್‌ನಲ್ಲಿರುವ ಒಳ ರಸ್ತೆಗಳು– 200 ಕಿ.ಮೀ,ಆರ್‌ಎಂಪಿ ಪ್ರಕಾರ ಅಭಿವೃದ್ಧಿ ಆಗಬೇಕಿರುವ ಪ್ರಮುಖ ರಸ್ತೆ– 35 ಕಿ.ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT