ಬೆಂಗಳೂರು: 53 ಮೆಟ್ರೊ ರೈಲುಗಳಿಗೆ 318 ಬೋಗಿಗಳನ್ನು ಒದಗಿಸಲು, 15 ವರ್ಷ ನಿರ್ವಹಣೆ ಮಾಡಲು ಬಿಎಂಆರ್‌ಸಿಎಲ್ ಜೊತೆಗೆ ಬೆಮೆಲ್ ಒಪ್ಪಂದ ಮಾಡಿಕೊಂಡಿದೆ.
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬೆಮೆಲ್) 2025ರ ಆರಂಭಕ್ಕೆ ಮೊದಲ ಬೋಗಿ ನೀಡಲಿದ್ದು, 2026ರ ಡಿಸೆಂಬರ್ ಒಳಗೆ ಎಲ್ಲ ಬೋಗಿಗಳನ್ನು ಪೂರೈಸಲಿದೆ. 2025ರ ಜನವರಿಯಿಂದ ಪ್ರತಿ ತಿಂಗಳು 12ರಿಂದ 14 ಬೋಗಿಗಳನ್ನು ಒದಗಿಸಲಿದೆ. ಹಿಂದೆಯೂ ‘ನಮ್ಮ ಮೆಟ್ರೊ’ ಸೆರಿದಂತೆ ದೇಶದ ವಿವಿಧ ಮೆಟ್ರೊಗಳಿಗೆ ಬೋಗಿಗಳನ್ನು ತಯಾರಿಸಿ ನೀಡಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಮ್ಮ ಮೆಟ್ರೊದ ಅತಿಹೆಚ್ಚು ಬೋಗಿಗಳ ಒಪ್ಪಂದಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ಸ್ವೀಕಾರ ಪತ್ರವನ್ನು ನೀಡಿದೆ. ಒಪ್ಪಂದವು ₹3,177 ಕೋಟಿಯದ್ದಾಗಿದ್ದು, ಜಪಾನ್ ಇಂಟರ್‌ನ್ಯಾಷನಲ್ ಸಹಕಾರ ಏಜೆನ್ಸಿಯಿಂದ (ಜೆಐಸಿಎ) ಆರ್ಥಿಕ ನೆರವು ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುಲಾಬಿ ಮಾರ್ಗ ಕಾಳೇನ ಅಗ್ರಹಾರ– ನಾಗವಾರ 2ನೇ ಹಂತದಲ್ಲಿ, ನೀಲಿ ಮಾರ್ಗ ಸಿಲ್ಕ್ ಬೋರ್ಡ್– ಕೆ.ಆರ್. ಪುರ 2ಎ ಹಂತ, ಕೆ.ಆರ್.ಪುರ–ವಿಮಾನ ನಿಲ್ದಾಣ 2ಬಿಯಲ್ಲಿ ಸಂಚರಿಸಲಿರುವ ಮೆಟ್ರೊ ರೈಲಿನಲ್ಲಿ ಈ ಬೋಗಿಗಳು ಬಳಕೆಯಾಗಲಿವೆ.
ಗುಲಾಬಿ ಮಾರ್ಗದಲ್ಲಿ 2025ರ ಮಾರ್ಚ್‌ನಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ. 2026ರ ಜೂನ್‌ಗೆ ನೀಲಿ ಮಾರ್ಗ ಚಾಲನೆಗೊಳ್ಳಲಿದೆ.
‘2025ರ ಜನವರಿಯಲ್ಲಿ ಮೊದಲ ಬೋಗಿ ನೀಡುವಂತೆ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅದಕ್ಕಿಂತ ಮೊದಲೇ ಬೆಮೆಲ್ ಪೂರೈಸಲಿದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದ್ದಾರೆ.