ಮಂಗಳವಾರ, ಜೂನ್ 22, 2021
24 °C
ಗುಣಮುಖರಾದವರ, ಮೃತರ ಹೆಸರಿನಲ್ಲಿ ಅನ್ಯರಿಗೆ ಚಿಕಿತ್ಸೆ

ಹಾಸಿಗೆ ಬ್ಲಾಕಿಂಗ್ ದಂಧೆ: ‘ಆರೋಗ್ಯಮಿತ್ರ’ ಅಧಿಕಾರಿ ಸೇರಿ ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿತರ ಹೆಸರಿನಲ್ಲಿ ಹಾಸಿಗೆಗಳನ್ನು ಬ್ಲಾಕ್ ಮಾಡುತ್ತಿದ್ದ ಪ್ರಕರಣದ ತನಿಖೆ ಮುಂದುವರಿಸಿರುವ ಸಿಸಿಬಿ ಪೊಲೀಸರು, ‘ಆರೋಗ್ಯ ಮಿತ್ರ’ ಅಧಿಕಾರಿ ಸೇರಿ ಮೂವರನ್ನು ಸೋಮವಾರ ಬಂಧಿಸಿದ್ದಾರೆ.

‘ಶಶಿಧರ್, ವೆಂಕೋಬ ರಾವ್ ಹಾಗೂ ಸುಧೀರ್ ಉಮಾರಾಣಿ ಬಂಧಿತರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಬೇಕಿದೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಆರೋಪಿ ಶಶಿಧರ್, ’ಆರೋಗ್ಯ ಮಿತ್ರ’ದಲ್ಲಿ ಕೆಲಸ ಮಾಡುತ್ತಿದ್ದರು. ವೆಂಕೋಬ ರಾವ್, ರಾಜರಾಜೇಶ್ವರಿನಗರದ ಸ್ಪರ್ಶ ಆಸ್ಪತ್ರೆ ನೌಕರ. ಸುಧೀರ್ ಬಸವೇಶ್ವರನಗರದ ಪುಣ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಮೂವರು ಹಾಸಿಗೆ ಬ್ಲಾಕಿಂಗ್ ದಂಧೆಯಲ್ಲಿ ಭಾಗಿಯಾಗಿರುವುದಕ್ಕೆ ಪುರಾವೆಗಳು ಸಿಕ್ಕಿವೆ’ ಎಂದೂ ಅಧಿಕಾರಿ ಹೇಳಿದರು.

‘ಪ್ರಕರಣ ಸಂಬಂಧ ವಾರ್‌ರೂಮ್‌ಗಳ ಉಸ್ತುವಾರಿಯೂ ಆಗಿದ್ದ ವೈದ್ಯರಾದ ಡಾ. ರಿಹಾನ್, ಡಾ. ಶಶಿ, ಸಾಮಾಜಿಕ ಕಾರ್ಯಕರ್ತೆ ಬೇಗೂರಿನ ನೇತ್ರಾವತಿ ಹಾಗೂ ಆಕೆಯ ಸ್ನೇಹಿತ ರೋಹಿತ್‌ಕುಮಾರ್ ಎಂಬುರನ್ನು ಈಗಾಗಲೇ ಬಂಧಿಸಲಾಗಿದೆ. ಇದೀಗ ಮತ್ತೆ ಮೂವರನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ’ ಎಂದು ತಿಳಿಸಿದರು.

‘ವಾರ್‌ರೂಮ್‌ಗಳಲ್ಲಿ ಸಿಕ್ಕ ಮಾಹಿತಿ ಆಧರಿಸಿ ನಗರದ 18 ಆಸ್ಪತ್ರೆಗಳಲ್ಲಿ ಶೋಧ ನಡೆಸಲಾಗಿತ್ತು. ಕೆಲ ದಾಖಲೆಗಳನ್ನೂ ಜಪ್ತಿ ಮಾಡಲಾಗಿತ್ತು. ಕೃತ್ಯದಲ್ಲಿ ಮೂರು ಆಸ್ಪತ್ರೆಗಳ ಸಿಬ್ಬಂದಿ ಭಾಗಿಯಾಗಿರುವ ಮಾಹಿತಿ ಇದೆ. ಸದ್ಯ ಎರಡು ಆಸ್ಪತ್ರೆಗಳ ನೌಕರರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದರು.

ಗುಣಮುಖರಾದವರ, ಮೃತರ ಹೆಸರಿನಲ್ಲಿ ಚಿಕಿತ್ಸೆ: ‘ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಗುಣಮುಖರಾದವರ ಹಾಗೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟವರ ಮಾಹಿತಿಯನ್ನು ಬಿಬಿಎಂಪಿ ವಾರ್‌ರೂಮ್‌ಗೆ ತಿಳಿಸಬೇಕೆಂಬ ನಿಯಮವಿದೆ. ಆದರೆ, ಬಂಧಿತ ಆರೋಪಿಗಳು ಆ ಮಾಹಿತಿಯನ್ನು ವಾರ್‌ರೂಮ್‌ಗೆ ತಿಳಿಸುತ್ತಿರಲಿಲ್ಲ. ಅದೇ ಮಾಹಿತಿಯನ್ನು ಖಾಸಗಿ ವ್ಯಕ್ತಿಗಳಿಗೆ ರವಾನಿಸುತ್ತಿದ್ದರು’ ಎಂದೂ ಅಧಿಕಾರಿ ವಿವರಿಸಿದರು.

‘ಹಾಸಿಗೆಗಾಗಿ ಹುಡುಕಾಟ ನಡೆಸುತ್ತಿದ್ದ ಸೋಂಕಿತರನ್ನು ಸಂಪರ್ಕಿಸುತ್ತಿದ್ದ ಖಾಸಗಿ ವ್ಯಕ್ತಿಗಳು, ‘ಕೆಲ ಖಾಸಗಿ ಆಸ್ಪತ್ರೆಯಲ್ಲಿ ಬಿಬಿಎಂಪಿ ಹಾಸಿಗೆಗಳು ಇವೆ. ಹಣ ಕೊಟ್ಟರೆ ನಿಮ್ಮನ್ನು ದಾಖಲು ಮಾಡುತ್ತೇವೆ’ ಎನ್ನುತ್ತಿದ್ದರು. ಹಾಸಿಗೆ ಸಿಗುವ ಆಸೆಯಿಂದ ಸೋಂಕಿತರು, ಹಣ ಕೊಟ್ಟು ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಮೃತರ ಹಾಗೂ ಗುಣಮುಖರಾದವರ ಹೆಸರಿನಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ’ ಎಂದೂ ಅಧಿಕಾರಿ ವಿವರಿಸಿದರು.

‘ಆರೋಪಿಗಳ ಕೃತ್ಯದಿಂದ ಹಾಸಿಗೆಗಳು ಸಿಗದೇ ಸೋಂಕಿತರು ಮೃತಪಟ್ಟಿದ್ದಾರೆ. ಸಾಕಷ್ಟು ಮಂದಿ ತೊಂದರೆಗಳನ್ನೂ ಅನುಭವಿಸಿದ್ದಾರೆ. ಗುಣಮುಖರಾದ ಸೋಂಕಿತರು ಹಾಗೂ ಅವರ ಸಂಬಂಧಿಕರಿಂದಲೂ ಪ್ರಕರಣ ಸಂಬಂಧ ಹೇಳಿಕೆ ಪಡೆಯಲಾಗಿದೆ’ ಎಂದೂ ಅಧಿಕಾರಿ ಹೇಳಿದರು.

ರಾಜಕಾರಣಿಗಳ ಆಪ್ತರು?
‘ಬಿಬಿಎಂಪಿ ವಾರ್‌ರೂಮ್‌ಗೆ ನೀಡಬೇಕಿದ್ದ ಮಾಹಿತಿಯನ್ನು ಬೇರೆಯವರಿಗೆ ನೀಡುತ್ತಿದ್ದರು’ ಎಂದು ಸಿಸಿಬಿ ಪೊಲೀಸರು ಹೇಳುತ್ತಿದ್ದಾರೆ. ಆದರೆ, ಮಾಹಿತಿ ಪಡೆಯುತ್ತಿದ್ದ ಖಾಸಗಿ ವ್ಯಕ್ತಿಗಳು ಯಾರು ಎಂಬುದನ್ನು ಬಹಿರಂಗಪಡಿಸಿಲ್ಲ. ಅಂಥ ಖಾಸಗಿ ವ್ಯಕ್ತಿಗಳು, ರಾಜಕಾರಣಿಗಳ ಆಪ್ತರೆಂದು ಮೂಲಗಳು ಹೇಳುತ್ತಿವೆ.ಆ ಬಗ್ಗೆ ಪ್ರತಿಕ್ರಿಯಿಸಿದ ಸಿಸಿಬಿ ಅಧಿಕಾರಿಯೊಬ್ಬರು, ‘ತನಿಖೆ ನಡೆದಿದೆ. ಪುರಾವೆ ಸಮೇತ ಪ್ರತಿಯೊಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದರು.


ಬಂಧಿತ ಆರೋಪಿಗಳಾದ ವೆಂಕೋಬ ರಾವ್, ಸುಧೀರ್

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು