ಬೆಂಗಳೂರು: ಮೆಜೆಸ್ಟಿಕ್ ಕೇಂದ್ರ ನಿಲ್ದಾಣದಲ್ಲಿ ಬಿಎಂಟಿಸಿ ಬಸ್ ಗುದ್ದಿ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದು, ಅಪಘಾತಕ್ಕೆ ಕಾರಣವಾದ ಆರೋಪದಡಿ ಚಾಲಕ ಚನ್ನಯ್ಯ (43) ಅವರನ್ನು ಉಪ್ಪಾರಪೇಟೆ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ರಾಜರಾಜೇಶ್ವರಿನಗರ ಡಿಪೊಗೆ ಸೇರಿದ್ದ ಬಿಎಂಟಿಸಿ ಬಸ್ (ಕೆಎ 57 ಎಫ್ 5187), ಸೋಮವಾರ ಸಂಜೆ ನಿಲ್ದಾಣಕ್ಕೆ ಬಂದಿತ್ತು. ಚಾಲಕ ಚನ್ನಯ್ಯ, ನಿಗದಿತ ಸ್ಥಳದಲ್ಲಿ ಬಸ್ ನಿಲ್ಲಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಪ್ರಯಾಣಿಕ, ನಿಲ್ದಾಣದೊಳಗೆ ರಸ್ತೆ ದಾಟುತ್ತಿದ್ದರು.’
‘ಚಾಲಕ, ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ್ದ. ಪ್ರಯಾಣಿಕನಿಗೆ ಗುದ್ದಿತ್ತು. ರಸ್ತೆಗೆ ಬಿದ್ದಿದ್ದ ಪ್ರಯಾಣಿಕನ ತಲೆಗೆ ತೀವ್ರ ಪೆಟ್ಟಾಗಿತ್ತು. ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾರ್ಗಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು’ ಎಂದು ಪೊಲೀಸರು ತಿಳಿಸಿದರು.
‘ಪ್ರಯಾಣಿಕನ ಬಳಿ ಯಾವುದೇ ಗುರುತಿನ ಚೀಟಿಗಳಿಲ್ಲ. ಹೆಸರು ಗೊತ್ತಾಗಿಲ್ಲ. 25 ವರ್ಷದಿಂದ 30 ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಸಲಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸಂಬಂಧಿಕರು ಸಿಕ್ಕ ಬಳಿಕವೇ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.