ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ಕಿ.ಮೀ ಸುರಂಗಕ್ಕೆ ₹22 ಸಾವಿರ ಕೋಟಿ: ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಸಮಾಲೋಚನೆ

Published 5 ಜುಲೈ 2023, 0:30 IST
Last Updated 5 ಜುಲೈ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸುರಂಗ ರಸ್ತೆ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ. ಮೊದಲ ಹಂತದ ಯೋಜನೆಯಡಿ ಸುಮಾರು 50 ಕಿ.ಮೀ ರಸ್ತೆ ನಿರ್ಮಿಸಲು ಅಂದಾಜು ₹22 ಸಾವಿರ ಕೋಟಿ ವೆಚ್ಚವಾಗಲಿದೆ.

ಅತ್ಯಂತ ಹೆಚ್ಚಿನ ವಾಹನ ದಟ್ಟಣೆ ಉಂಟಾಗುತ್ತಿರುವ ಬಳ್ಳಾರಿ ರಸ್ತೆ, ಹೊಸೂರು ರಸ್ತೆ,  ಹಳೇ ಮದ್ರಾಸ್‌ ರಸ್ತೆ, ತುಮಕೂರು ರಸ್ತೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸುರಂಗ ಮಾರ್ಗವನ್ನು ಮೊದಲ ಹಂತದಲ್ಲಿ ನಿರ್ಮಿಸಲು ಆಲೋಚನೆ ನಡೆಸಲಾಗಿದೆ.

ಸುರಂಗ ರಸ್ತೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ‘ಸುರಂಗ ರಸ್ತೆ ನಿರ್ಮಾಣ ಸಲಹಾ ಸಂಸ್ಥೆ’ ಅಧಿಕಾರಿಗಳ ಜತೆ ಮಂಗಳವಾರ ಸಮಾಲೋಚನೆ ನಡೆಸಿದರು. ಅಂತರ ರಾಷ್ಟ್ರೀಯ ಸಲಹಾ ಸಂಸ್ಥೆಯ ಪ್ರತಿನಿಧಿಗಳು ನಗರದಲ್ಲಿ ಸುರಂಗ ರಸ್ತೆ ನಿರ್ಮಿಸುವ ಸಾಧ್ಯತೆಗಳ ಬಗ್ಗೆ ಈ ಸಭೆಯಲ್ಲಿ ವಿವರ ನೀಡಿದರು.

ನಗರದ ಹೃದಯಭಾಗ ಹಾಗೂ ಕೇಂದ್ರ ಭಾಗಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಭೂಸ್ವಾಧೀನಕ್ಕೆ ಹೆಚ್ಚು ಹಣ ವ್ಯಯವಾಗುತ್ತದೆ. ಇದಲ್ಲದೆ, ಕಾಮಗಾರಿ ಸಂದರ್ಭದಲ್ಲಿ ಸಂಚಾರವನ್ನು ನಿಲ್ಲಿಸಬೇಕಾಗುತ್ತದೆ. ಇದರಿಂದ ಹಲವು ಸಮಸ್ಯೆಗಳು ಉಂಟಾಗಲಿದ್ದು, ಇದಕ್ಕೆ ಪರಿಹಾರವಾಗಿ ಸುರಂಗ ರಸ್ತೆ ನಿರ್ಮಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ನಗರದ ಎಲ್ಲ ಹೊರವಲಯವನ್ನು ಸಂಪರ್ಕಿಸಲು ಸುಮಾರು 100 ಕಿ.ಮೀ ಸುರಂಗ ರಸ್ತೆ ನಿರ್ಮಿಸಬೇಕಾಗುತ್ತದೆ. ಮೊದಲ ಹಂತದಲ್ಲಿ ಸುಮಾರು 50 ಕಿ.ಮೀ ಮಾತ್ರ ನಿರ್ಮಿಸಲು ಆಲೋಚಿಸ
ಲಾಗಿದ್ದು, ಮುಂದಿನ ಪ್ರಕ್ರಿಯೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕ–ಖಾಸಗಿ ಸಹಭಾಗಿತ್ವದ (ಪಿಪಿಪಿ) ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ. ನಿರ್ಮಾಣ, ನಿರ್ವಹಣೆ, ವರ್ಗಾವಣೆ (ಬಿಒಟಿ–ಟೋಲ್‌), ಬಿಒಟಿ–ಟೋಲ್‌ನೊಂದಿಗೆ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಸೇರಿದಂತೆ ಹಲವು ಆಯ್ಕೆ
ಗಳಿವೆ. ಬಿಒಟಿ– ಟೋಲ್‌ ಆಯ್ಕೆಯನ್ನೇ ಬಹುತೇಕ ಅಂತಿಮಗೊಳಿಸುವ ಸಾಧ್ಯತೆ ಇದ್ದು, ನಾಗರಿಕರು
ಸುರಂಗ ರಸ್ತೆ ಬಳಸುವಾಗ ಶುಲ್ಕ ಪಾವತಿಸಬೇಕು.

ಬಿಒಟಿ– ಟೋಲ್‌ ಆಯ್ಕೆಯಲ್ಲಿ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ. ಖಾಸಗಿಯಿಂದ ನಿರ್ಮಾಣ, ನಿರ್ವಹಣೆಯಾಗಲಿದ್ದು, ಶುಲ್ಕ ಸಂಗ್ರಹಿಸಲಿದ್ದಾರೆ. ಈ ಯೋಜನೆಯಿಂದ ನಗರ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ ಎಂದು ಯೋಚಿಸಲಾಗಿದೆ.

ಸುರಂಗ ಮಾರ್ಗವನ್ನು ನಾಲ್ಕು ಅಥವಾ ಆರು ಪಥಗಳಲ್ಲಿ ನಿರ್ಮಿಸಲಾಗುತ್ತದೆ. ಹೆಚ್ಚಿನ ವಾಹನಗಳಿಗೆ ಅವಕಾಶ ಕಲ್ಪಿಸುವ ಹಾಗೂ ಸುರಕ್ಷಾ ಸಂಚಾರಕ್ಕಾಗಿ ಏಕಮುಖ ರಸ್ತೆಗಳನ್ನಾಗಿ ನಿರ್ಮಿಸಲು ಯೋಜಿಸಲಾಗಿದೆ. ಸುರಂಗ ಮಾರ್ಗ ಎರಡು ಅಂತಸ್ತಿನಲ್ಲಿರಲ್ಲಿದ್ದು, ಕೆಳಭಾಗದಲ್ಲಿ ಒಂದು ಕಡೆಗೆ, ಮೇಲ್ಬಾಗದಲ್ಲಿ ಮತ್ತೊಂದು ಕಡೆಯ ಸಂಚಾರ ಇರಲಿದೆ.

2013ರ ಅವಧಿಯಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಮೇಲ್ಸೇತುವೆ ಕಾರಿಡಾರ್‌ಗಳನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಈಗ ಬಹುತೇಕ ಅದೇ ಕಾರಿಡಾರ್‌ಗಳನ್ನು ಸುರಂಗ ಮಾರ್ಗದ ಕಾರಿಡಾರ್‌ಗಳನ್ನಾಗಿಸಲು ಸರ್ಕಾರ ಯೋಜಿಸುತ್ತಿದೆ.

ಲೋಕೋಪಯೋಗಿ ಇಲಾಖೆ ಕೂಡ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ಮನವಿ ಸಲ್ಲಿಸಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆ ಯೋಜನೆಗೆ ಸುಮಾರು ₹50 ಸಾವಿರ ಕೋಟಿ ವೆಚ್ಚವಾಗುತ್ತದೆ ಎಂದು ಹೇಳಿತ್ತು. ಈಗ ಖಾಸಗಿ ಸಹಭಾಗಿತ್ವದಲ್ಲಿ ಸುರಂಗ ಮಾರ್ಗ ನಿರ್ಮಿಸುವ ಯೋಜನೆಯತ್ತ ಡಿಸಿಎಂ ಡಿ.ಕೆ. ಶಿವಕುಮಾರ್‌ ಆಸಕ್ತಿ ವಹಿಸಿದ್ದಾರೆ.

ಸುರಂಗ ರಸ್ತೆಯ ಮಾದರಿ
ಸುರಂಗ ರಸ್ತೆಯ ಮಾದರಿ
ಎರಡು ಅಂತಸ್ತಿನ ಸುರಂಗ ರಸ್ತೆಯ ಮಾದರಿ
ಎರಡು ಅಂತಸ್ತಿನ ಸುರಂಗ ರಸ್ತೆಯ ಮಾದರಿ
50 ಕಿ.ಮೀ ಸುರಂಗಕ್ಕೆ ₹22 ಸಾವಿರ ಕೋಟಿ: ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಸಮಾಲೋಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT