ಭಾನುವಾರ, ಜೂನ್ 13, 2021
25 °C
ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಸುಳ್ಳು ವಿಡಿಯೊ ಹರಿಯಬಿಟ್ಟಿದ್ದ ಮಹಿಳೆಯ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಕರ್ನಾಟಕ ಪೊಲೀಸರು ವ್ಯಕ್ತಿಯೊಬ್ಬರನ್ನು ಸುತ್ತುವರಿದು ಹಲ್ಲೆ ನಡೆಸಿದ್ದಾರೆ ಎಂದು ಹಳೆಯ ವಿಡಿಯೊ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಸುದ್ದಿ ಹರಿಯಬಿಟ್ಟಿದ್ದ ಆರೋಪದಡಿ ಮಹಿಳೆಯೊಬ್ಬರನ್ನು ಬೆಂಗಳೂರು ದಕ್ಷಿಣ ಸೆನ್‌ ಠಾಣೆ ಪೊಲೀಸರು ವಶಕ್ಕೆ ಪ‍ಡೆದಿದ್ದಾರೆ.

ವಿಡಿಯೊಗೆ ಹಿನ್ನೆಲೆ ಧ್ವನಿ ನೀಡಿ, ರಾಜ್ಯದ ಪೊಲೀಸರ ಮೇಲೆ ಸುಳ್ಳು ಆರೋಪ ಮಾಡಿದ್ದ ಬೆಂಗಳೂರಿನ ಪದ್ಮಾ ಹರೀಶ್ ಎಂಬ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ.

‘ಲಾಕ್‌ಡೌನ್ ವೇಳೆ ವಾಟ್ಸ್‌ಆ್ಯಪ್‌ ಮೂಲಕ ಪೊಲೀಸರ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊ ತುಣುಕನ್ನು ಹಂಚಿಕೊಳ್ಳಲಾಗಿತ್ತು. ವಿಡಿಯೊದಲ್ಲಿ ಪದ್ಮಾ ಹರೀಶ್ ಹೆಸರಿನ ಮಹಿಳೆಯು ರಾಜ್ಯ ಪೋಲಿಸ್ ಪಡೆಯನ್ನು ಅವಾಚ್ಯ ಶಬ್ದಗಳಿಂದ ದೂಷಿಸಿ ಹಾಗೂ ಪೊಲೀಸರ ಮೇಲೆ ಸಾರ್ವಜನಿಕರು ಪ್ರತೀಕಾರ ತೀರಿಸಿಕೊಳ್ಳುವಂತೆ ಪ್ರೇರೇಪಿಸಿದ್ದರು’ ಎಂದು ಪೊಲೀಸ್ ಇಲಾಖೆಯ ಫ್ಯಾಕ್ಟ್‌ಚೆಕ್ ತಂಡ ತಿಳಿಸಿದೆ.

‘ವಿಡಿಯೊ ಸಂಬಂಧ ಪರಿಶೀಲನೆ ನಡೆಸಿದಾಗ, ಈ ವಿಡಿಯೊ ಕಳೆದ ವರ್ಷದ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದ ಮುಂಬೈ ಸಮೀಪದ ಮುಂಬ್ರಾದಲ್ಲಿ ಸಂಭವಿಸಿದ ಘಟನೆ ಎಂದು ತಿಳಿದು ಬಂದಿದೆ’ ಎಂದೂ ಸ್ಪಷ್ಟಪಡಿಸಿದೆ.

‘ಹಳೆಯ ವಿಡಿಯೊ ಎಂದು ತಿಳಿದುಕೊಳ್ಳದ ಪದ್ಮಾ, ಆಕ್ರೋಶದಿಂದ ಹಿನ್ನೆಲೆ ಧ್ವನಿ ನೀಡಿ, ಸುಳ್ಳು ಸುದ್ದಿ ಹಬ್ಬಿಸಿದ್ದರು. ಈ ವಿಚಾರವನ್ನು ಪೊಲೀಸರು ನಗರ ಪೊಲೀಸ್ ಕಮಿಷನರ್ ಕಮಲ್ ‍ಪಂತ್ ಗಮನಕ್ಕೆ ತಂದಿದ್ದರು. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಮಿಷನರ್ ಸೂಚಿಸಿದ್ದರು’.

‘ಈ ಸಂಬಂಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಆರಂಭಿಸಿದ್ದರು. ಈ ವೇಳೆ ವಿಡಿಯೊ ಹರಿಬಿಟ್ಟಿದ್ದ ಪದ್ಮಾ ಸಿಕ್ಕಿಬಿದ್ದಿದ್ದಾರೆ. ಅವರ ಮೊಬೈಲ್‌ನಲ್ಲೂ ವಿಡಿಯೊ ಪತ್ತೆಯಾಗಿದೆ. ಅವರಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

*
ಸಾರ್ವಜನಿಕರು ಈ ರೀತಿ ಪ್ರಚೋದನಾತ್ಮಕ ಸುದ್ದಿಗಳಿಂದ ದಿಕ್ಕು ತಪ್ಪಬಾರದು. ಯಾವುದೇ ಸುದ್ದಿಯ ನೈಜತೆಯನ್ನು ಮೊದಲು ಪರಿಶೀಲಿಸಬೇಕು.
–ಕಮಲ್ ಪಂತ್, ನಗರ ಪೊಲೀಸ್ ಕಮಿಷನರ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು