ಶುಕ್ರವಾರ, ಮಾರ್ಚ್ 24, 2023
22 °C

ಗಾಂಜಾ ನಶೆಯಲ್ಲಿ ಡ್ರ್ಯಾಗರ್ ಹಿಡಿದು ಸುತ್ತಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾತ್ರಿ ಹೊತ್ತಿನಲ್ಲಿ ಗಾಂಜಾ ನಶೆಯಲ್ಲಿ ಡ್ರ್ಯಾಗರ್ ಹಿಡಿದುಕೊಂಡು ಸುತ್ತಾಡಿ ಕಳ್ಳತನ ಹಾಗೂ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

‘ಪ್ರಕಾಶನಗರದ 3ನೇ ಮುಖ್ಯರಸ್ತೆ ಬಳಿ ಜುಲೈ 10ರಂದು ಬೆಳಿಗ್ಗೆ ಆರೋಪಿಗಳು ಪಲ್ಸರ್ ಬೈಕ್‌ನಲ್ಲಿ ಹೊರಟಿದ್ದರು. ಅನುಮಾನಗೊಂಡ ಗಸ್ತಿನಲ್ಲಿದ್ದ ಸಿಬ್ಬಂದಿ, ಆರೋಪಿಗಳನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ ಕೃತ್ಯಗಳು ಬಯಲಾಗಿವೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕಳವು, ಸುಲಿಗೆ, ಹಲ್ಲೆ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು. ಅವರಿಂದ ₹ 4.15 ಲಕ್ಷ ಮೌಲ್ಯದ 7 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿವೆ.

ಜಾಮೀನು ಮೇಲೆ ಹೊರಬಂದಿದ್ದರು: ‘ಹಲಸೂರು ಗೇಟ್, ಸಂಪಂಗಿರಾಮನಗರ, ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು. ಅದೇ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳು, ಜಾಮೀನು ಮೇಲೆ ಹೊರಬಂದು ಕೃತ್ಯ ಮುಂದುವರಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಿತ್ಯವೂ ರಾತ್ರಿ ಗಾಂಜಾ ಸೇವಿಸುತ್ತಿದ್ದ ಆರೋಪಿಗಳು, ಅದರ ನಶೆಯಲ್ಲಿ ಡ್ರ್ಯಾಗರ್ ಹಿಡಿದುಕೊಂಡು ನಗರದಲ್ಲಿ ಸುತ್ತಾಡುತ್ತಿದ್ದರು. ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕದಿಯುತ್ತಿದ್ದರು. ಡ್ರ್ಯಾಗರ್ ತೋರಿಸಿ ಜೀವಬೆದರಿಕೆಯೊಡ್ಡಿ ಸುಲಿಗೆ ಸಹ ಮಾಡುತ್ತಿದ್ದರು.’

‘ಆರೋಪಿಯೊಬ್ಬನ ವಿರುದ್ಧ ಅತ್ಯಾಚಾರ ಪ್ರಕರಣ ಸಹ ದಾಖಲಾಗಿತ್ತು. ಇವರಿಬ್ಬರ ಬಂಧನದಿಂದ ಬಸವೇಶ್ವರನಗರ ಹಾಗೂ ಯಲಹಂಕ ನ್ಯೂ ಟೌನ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ವಾಹನ ಕಳವು ಪ್ರಕರಣಗಳೂ ಪತ್ತೆಯಾಗಿವೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು