ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಐಎಸ್‌ ಜತೆ ನಂಟಿನ ಶಂಕೆ ಐಐಟಿ ಪದವೀಧರ ವಶಕ್ಕೆ

Published 9 ಡಿಸೆಂಬರ್ 2023, 17:44 IST
Last Updated 9 ಡಿಸೆಂಬರ್ 2023, 17:44 IST
ಅಕ್ಷರ ಗಾತ್ರ

ಬೆಂಗಳೂರು: ನಿಷೇಧಿತ ಭಯೋತ್ಪಾದನಾ ಸಂಘಟನೆ ಐಎಸ್‌ (ಇಸ್ಲಾಮಿಕ್ ಸ್ಟೇಟ್) ಜೊತೆ ನಂಟು ಹೊಂದಿ, ಸಂಘಟನೆ ಸೇರುವಂತೆ ಯುವಕರನ್ನು ಪ್ರಚೋದಿಸುತ್ತಿದ್ದ ಆರೋಪದಲ್ಲಿ ಅಲಿ ಹಫೀಜ್ ಅಲಿಯಾಸ್ ಅಲಿ ಅಬ್ಬಾಸ್‌ನನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದಿದ್ದಾರೆ. ವೈದ್ಯೆ ಆಗಿರುವ ಆತನ ಪತ್ನಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

‘ಮುಂಬೈ ಐಐಟಿ ಪದವೀಧರನಾದ ಅಲಿ ಹಫೀಜ್, 2019ರಲ್ಲಿ ಪತ್ನಿ ಹಾಗೂ ಮೂವರು ಮಕ್ಕಳ ಜೊತೆ ಬೆಂಗಳೂರಿಗೆ ಬಂದಿದ್ದ. ಪುಲಿಕೇಶಿನಗರ ಠಾಣೆ ವ್ಯಾಪ್ತಿಯ ಮೋರ್ ರಸ್ತೆಯ ಮನೆಯೊಂದರಲ್ಲಿ ವಾಸವಿದ್ದ. ತನ್ನ ಹೆಸರನ್ನು ಅಲಿ ಅಬ್ಬಾಸ್ ಎಂಬುದಾಗಿ ಬದಲಾಯಿಸಿಕೊಂಡಿದ್ದ. ಡಾಟಾ ಸೈನ್ಸ್‌ ಎಂಜಿನಿಯರ್ ಆಗಿದ್ದ ಈತ, ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ವೈದ್ಯೆಯಾಗಿದ್ದ ಪತ್ನಿ, ಸಣ್ಣದೊಂದು ಕ್ಲಿನಿಕ್ ತೆರೆದಿದ್ದರು’ ಎಂದು ಮೂಲಗಳು ಹೇಳಿವೆ.

‘ಕೋವಿಡ್ ಸಂದರ್ಭದಲ್ಲಿ ಅಲಿ ಹಫೀಜ್, ಕೆಲಸ ಬಿಟ್ಟಿದ್ದ. ಕೋವಿಡ್ ಲಾಕ್‌ಡೌನ್ ತೆರವುಗೊಂಡ ನಂತರ, ಸ್ಥಳೀಯ ಮಕ್ಕಳಿಗೆ ಪಾಠ ಮಾಡಲಾರಂಭಿಸಿದ್ದ. ಸದ್ಯ ಈತ ಚಿಕ್ಕದೊಂದು ಉರ್ದು ಶಾಲೆ ನಡೆಸುತ್ತಿದ್ದ’ ಎಂದು ತಿಳಿಸಿವೆ.

ಬಯಾತ್ ಹೆಸರಿನಲ್ಲಿ ಸೇರ್ಪಡೆ: ‘ಐಎಸ್ ಸೇರಿದಂತೆ ಹಲವು ಭಯೋತ್ಪಾದನಾ ಸಂಘಟನೆಗಳ ಜೊತೆ ನಂಟು ಹೊಂದಿದ್ದ ಪ್ರಮುಖ ಆರೋಪಿ ಸಾದಿಕ್ ನಚ್ಚನ್, ಭಾರತದ ಯುವಕರನ್ನು ಪ್ರಚೋದಿಸಿ ಸಂಘಟನೆಗೆ ಸೇರಿಸುತ್ತಿದ್ದ. ಸಾದಿಕ್ ತಂಡದಲ್ಲಿ ಗುರುತಿಸಿಕೊಂಡಿದ್ದ ಅಲಿ ಹಫೀಜ್ ಕೂಡಾ ಯುವಕರನ್ನು ಸಂಪರ್ಕಿಸಿ, ಐಎಸ್‌ ಉಗ್ರ ಸಂಘಟನೆ ಸೇರಲು ಪ್ರಚೋದಿಸುತ್ತಿದ್ದನೆಂಬ ಮಾಹಿತಿ ಇದೆ’ ಎಂದು ಮೂಲಗಳು ಹೇಳಿವೆ.

‘ಬಯಾತ್ (ಐಎಸ್ ನಾಯಕನಿಗೆ (ಖಲೀಫಾ) ನಿಷ್ಠೆ ಪ್ರತಿಪಾದಿಸುವ ಪ್ರತಿಜ್ಞೆ) ಹೆಸರಿನಲ್ಲಿ ಯುವಕರನ್ನು ಸಂಘಟನೆಯತ್ತ ಸೆಳೆಯಲಾಗುತ್ತಿತ್ತು. ಯುವಕರನ್ನು ಸಂಪರ್ಕಿಸಲು ಹಾಗೂ ಮಾತುಕತೆಗೆಂದು ವಾಟ್ಸ್‌ಆ್ಯಪ್‌ ಗ್ರೂಪ್ ಸೃಷ್ಟಿಸಲಾಗಿತ್ತು. ಜೊತೆಗೆ, ಇ–ಮೇಲ್ ಸಹ ಬಳಸಲಾಗುತ್ತಿತ್ತು’ ಎಂದು ತಿಳಿಸಿವೆ.

ಇ– ಮೇಲ್ ನೀಡಿದ್ದ ಸುಳಿವು: ‘ಶಂಕಿತ ಅಲಿ ಹಫೀಜ್ ಸೃಷ್ಟಿಸಿದ್ದ ಇ–ಮೇಲ್‌ ಮೂಲಕ ಹಲವು ಯುವಕರಿಗೆ ಸಂದೇಶ ಕಳುಹಿಸಲಾಗಿತ್ತು. ಜೊತೆಗೆ, ವಾಟ್ಸ್‌ಆ್ಯಪ್ ಹಾಗೂ ಟೆಲಿಗ್ರಾಂ ಗ್ರೂಪ್ ಸೃಷ್ಟಿಸಿ ಯುವಕರನ್ನು ಒಂದೆಡೆ ಸೇರಿಸಲಾಗಿತ್ತು. ಇದೇ ಗ್ರೂಪ್‌ಗೆ ಅಲಿ ಹಫೀಜ್ ಸಂದೇಶಗಳನ್ನು ಕಳುಹಿಸುತ್ತಿದ್ದ. ಇ–ಮೇಲ್ ಸುಳಿವು ಆಧರಿಸಿ ಅಲಿ ಹಫೀಜ್‌ನನ್ನು ಸೆರೆ ಹಿಡಿಯಲಾಗಿದೆ’ ಎಂದು ಮೂಲಗಳು ಹೇಳಿವೆ.

ಅಲಿ ಹಫೀಜ್ ಮನೆಯಲ್ಲಿ ₹16.42 ಲಕ್ಷ ನಗದು, ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಜಪ್ತಿ ಮಾಡಿರುವುದಾಗಿ ಗೊತ್ತಾಗಿದೆ.

‘ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರಚಾರ’ ‘ಪುಲಿಕೇಶಿನಗರದಲ್ಲಿ ಸುತ್ತಾಡುತ್ತಿದ್ದ ಅಲಿ ಹಫೀಜ್ ಅಲಿಯಾಸ್ ಅಲಿ ಅಬ್ಬಾಸ್ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಲು ಪ್ರಚಾರ ಮಾಡುತ್ತಿದ್ದ. ತನ್ನದೇ ಉರ್ದು ಶಾಲೆ ಆರಂಭಿಸಿದ್ದು ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಪೋಷಕರನ್ನು ಒತ್ತಾಯಿಸುತ್ತಿದ್ದ’ ಎಂದು ಸ್ಥಳೀಯರು ಹೇಳಿದರು. ‘ಅಲಿ ಹಫೀಜ್ ಉರ್ದು ಹಿಂದಿ ಇಂಗ್ಲಿಷ್ ಹಾಗೂ ಕನ್ನಡ ಮಾತನಾಡುತ್ತಿದ್ದ. ಆತನ ಪತ್ನಿಯೂ ಕನ್ನಡದಲ್ಲಿ ನಮ್ಮೊಂದಿಗೆ ಮಾತನಾಡುತ್ತಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT