ಜನದನಿ | ಕುಂದು ಕೊರತೆ: ‘ಪಾದಚಾರಿ ಮಾರ್ಗ ಸರಿಪಡಿಸಿ’

‘ಪಾದಚಾರಿ ಮಾರ್ಗ ಸರಿಪಡಿಸಿ’
ಮಲ್ಲೇಶ್ವರನ ಸಂಪಿಗೆ ರಸ್ತೆಯಲ್ಲಿ ಸಂಪಿಗೆ ಚಿತ್ರಮಂದಿರದ ಎದುರು ಪಾದಚಾರಿ ಮಾರ್ಗ ಹಾಳಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿದೆ. ಈ ಮಾರ್ಗದಲ್ಲಿ ಹಾಳಾದ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ಮುಖ್ಯರಸ್ತೆಗೆ ಹೊಂದಿಕೊಂಡಿರುವ ಪಾದಚಾರಿ ಮಾರ್ಗವೂ ಮಕ್ಕಳು, ವೃದ್ಧರು ಸಾಗುವುದಕ್ಕೆ ಕಷ್ಟವಾಗಿದೆ. ವಾಹನಗಳು ಅತಿ ವೇಗವಾಗಿ ಸಂಚರಿಸುವುದರಿಂದ ರಸ್ತೆ ಅಂಚಿನಲ್ಲಿ ಓಡಾಡುವುದಕ್ಕೂ ಭಯಪಡಬೇಕಾದ ಪರಿಸ್ಥಿತಿ ಇದೆ. ಬಿಬಿಎಂಪಿ ದುರಸ್ತಿ ಕಾರ್ಯ ಕೈಗೊಂಡು ನಾಗರಿಕರಿಗೆ ಆಗುತ್ತಿರುವ ಸಮಸ್ಯೆ ಪರಿಹರಿಸಬೇಕು.
ಮಂಜುನಾಥ, ಸ್ಥಳೀಯ ನಿವಾಸಿ
‘ನಾಯಿ ಹಾವಳಿ ನಿಯಂತ್ರಿಸಿ’
ಬಿಟಿಎಂ ಬಡಾವಣೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ರಸ್ತೆಗೊಂದರಂತೆ 5–6 ಬೀದಿ ನಾಯಿಗಳಿವೆ. ನಾಯಿಗಳ ಹಾವಳಿಯಿಂದ ವಾಹನ ಸವಾರರು ಸಂಚರಿಸುವುದು ಸಹ ಕಷ್ಟವಾಗುತ್ತಿದೆ. ಬೈಕ್‌ಗಳ ಹಿಂದೆ ಈ ನಾಯಿಗಳು ಬೆನ್ನು ಹತ್ತುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ. ಜತೆಗೆ, ರಾತ್ರಿ ಸಮಯದಲ್ಲಿ ನಾಯಿಗಳು ಬೊಗಳಲು ಶುರು ಮಾಡಿ ನಿದ್ದೆ ಹಾಳು ಮಾಡುತ್ತಿವೆ. ಆದ್ದರಿಂದ ಇವುಗಳ ಹಾವಳಿ ತಪ್ಪಿಸಲು ಬಿಬಿಎಂಪಿ ಕ್ರಮ ಕೈಗೊಳ್ಳಬೇಕು.
ಎಂ. ಜೆ. ಅಭಿಷೇಕ್, ಬಿಟಿಎಂ ನಿವಾಸಿ
‘ತೆರೆದ ಚರಂಡಿ ಮುಚ್ಚಿ’
ಚಾಮುಂಡಿನಗರದ ಗಿರಿನಗರ ಬಡಾವಣೆಯ ಎಲ್ಲಾ ಅಡ್ಡರಸ್ತೆಗಳಲ್ಲಿ ಹೂಳು ತೆಗೆಯುವ ನೆಪದಲ್ಲಿ ಚರಂಡಿಗೆ ಅಳವಡಿಸಿರುವ ಕಲ್ಲುಗಳನ್ನು ತೆಗೆದು ಹಾಗೆಯೇ ಬಿಡಲಾಗಿದೆ. ಮನೆಯ ಮುಂದೆ ಇರುವ ಚರಂಡಿಗೆ ಹಾಕಿರುವ ಕಲ್ಲುಗಳನ್ನು ತೆಗೆದಿರುವುದರಿಂದ ಓಡಾಟಕ್ಕೆ ತೊಂದರೆಯಾಗಿದೆ. ಮಕ್ಕಳು, ಮಹಿಳೆಯರು, ವೃದ್ಧರು ಮನೆಯಿಂದ ಹೊರ ಬರಲು ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಅವಘಡ ಸಂಭವಿಸುವ ಮುನ್ನ ಕೂಡಲೇ
ಸಮಸ್ಯೆಯನ್ನು ಪರಿಹರಿಸಬೇಕು.
ಕೃಷ್ಣಮೂರ್ತಿ, ಚಾಮುಂಡಿನಗರದ ನಿವಾಸಿ
‘ತೆರೆದ ಸ್ಥಿತಿಯಲ್ಲಿ ವಿದ್ಯುತ್ ಮ್ಯಾನ್ ಹೋಲ್’
ಕೆಂಗೇರಿ ಉಪನಗರದ ಭಗೀರಥ ಬಡಾವಣೆಯ 1ನೇ ಕ್ರಾಸ್‌ನಲ್ಲಿ 11 ಕೆವಿ ವಿದ್ಯುತ್ ಮ್ಯಾನ್‌ಹೋಲ್ ಮುಚ್ಚಳ ತೆರೆದುಕೊಂಡ ಸ್ಥಿತಿಯಲ್ಲಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಚಿಕ್ಕ ಮಕ್ಕಳು, ವೃದ್ಧರು, ಮಹಿಳೆಯರು ಓಡಾಡುತ್ತಾರೆ. ಅನಾಹುತ ಸಂಭವಿಸುವ ಮುನ್ನ ಬೆಸ್ಕಾಂ ಅಧಿಕಾರಿಗಳು ಈ ಮ್ಯಾನ್‌ಹೋಲ್‌ನ ಮುಚ್ಚಳವನ್ನು ಮುಚ್ಚಲು ಕ್ರಮಕೈಗೊಳ್ಳಬೇಕು ಎಂಬುದು ಸ್ಥಳೀಯ ಆಗ್ರಹ.
ಸಿ.ಎನ್. ಭಂಡಾರೆ, ಸ್ಥಳೀಯ ನಿವಾಸಿ
‘ಸಂಕಟ ತಂದ ಪಾದಚಾರಿ ಮಾರ್ಗ’
ಕಬ್ಬನ್ ಉದ್ಯಾನದ ಮೆಟ್ರೊ ನಿಲ್ದಾಣದ ಎದುರು ಇರುವ ಪಾದಚಾರಿ ಮಾರ್ಗದಲ್ಲಿ ತೆರೆದ ಸ್ಥಿತಿಯಲ್ಲಿರುವ ಮ್ಯಾನ್‌ಹೋಲ್ ನಾಗರಿಕರ ಓಡಾಟಕ್ಕೆ ಸಮಸ್ಯೆಯಾಗಿದೆ. ಕಬ್ಬನ್ ಉದ್ಯಾನಕ್ಕೆ ಬರುವ ಸಾವಿರಾರು ಜನ ಈ ಮಾರ್ಗದಿಂದಲೇ ಸಾಗಬೇಕು. ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಈ ಪಾದಚಾರಿ ಮಾರ್ಗದಲ್ಲಿ ತೆರೆದುಕೊಂಡಿರುವ ಹೊಂಡವನ್ನು ಮುಚ್ಚಿ, ಪಾದಚಾರಿಗಳಿಗೆ ಆಗುತ್ತಿರುವ ಅನನುಕೂಲವನ್ನು ತಪ್ಪಿಸಬೇಕು.
ನಿರಂಜನ ಶಾಸ್ತ್ರಿ, ಪಾದಚಾರಿ
‘ಕೆಂಗೇರಿ ಚೆಕ್‌ಪೋಸ್ಟ್ ಬಳಿ ಸ್ಕೈವಾಕ್ ಅಳವಡಿಸಿ’
ಕೆಂಗೇರಿಯ ಬಾಲಸಾಬರ ಪಾಳ್ಯ, ಬಸವನಗರ ಮತ್ತು ವೈಷ್ಣವಿನಗರದಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ನಗರದ ವಿವಿಧೆಡೆ ಮತ್ತು ಬಿಡದಿ ಕಡೆಗೆ ಪ್ರತಿನಿತ್ಯ ಪ್ರಯಾಣಿಸುತ್ತಾರೆ. ಈಗ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ಪ್ರಾರಂಭವಾಗಿದ್ದು, ಎರಡು ಕಡೆಯಿಂದ ವಾಹನಗಳು ವೇಗವಾಗಿ ಚಲಿಸುತ್ತಿವೆ. ಇದರಿಂದ ವೃದ್ಧರು, ಮಕ್ಕಳು ಮತ್ತು ಮಹಿಳೆಯರು ಹೆದ್ದಾರಿ ದಾಟಲು ಹರ ಸಾಹಸಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ರಾತ್ರಿ ಸಮಯದಲ್ಲಿ ಬೀದಿ ದೀಪದ ವ್ಯವಸ್ಥೆ ಇಲ್ಲದಿರುವುದು ಅಪಾಯಕ್ಕೆ ಆಹ್ವಾನಿಸಿದಂತಿದೆ. ಇಲ್ಲಿ ಪ್ರತಿದಿನ ಒಂದಿಲ್ಲ ಒಂದು ಅಪಘಾತ ಸಂಭವಿಸುತ್ತಿದೆ. ಸಾರ್ವಜನಿಕರು ಸುಗಮವಾಗಿ ರಸ್ತೆ ದಾಟಲು, ಕೆಂಗೇರಿ ಚೆಕ್‌ಪೋಸ್ಟ್ 29ಕ್ಕೆ ಒಂದು ಸ್ಕೈವಾಕ್ ಅಥವಾ ಸಿಗ್ನಲ್ ದೀಪವನ್ನು ಅಳವಡಿಸಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು.
ಎಂ.ಟಿ. ಸ್ವಾಮಿ, ಸ್ಥಳೀಯ ನಿವಾಸಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.