ಭಾನುವಾರ, ಸೆಪ್ಟೆಂಬರ್ 25, 2022
28 °C
ಬಿಡಿಎ, ಬಿಬಿಎಂಪಿ, ಬಿಎಂಟಿಸಿ, ಸ್ಲಂ ಬೋರ್ಡ್‌ಗಳಿಂದ ಅಕ್ರಮ; ಕ್ರಮ ಏಕಿಲ್ಲ– ನಾಗರಿಕರ ಪ್ರಶ್ನೆ

ಇಲಾಖೆಗಳಿಂದ ಕೆರೆ, ಕಾಲುವೆ ಒತ್ತುವರಿ

ಆರ್‌. ಮಂಜುನಾಥ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಪೂರ್ವ ಭಾಗ ಜಲಾವೃತವಾಗಲು ಕಾರಣವಾಗಿರುವ ರಾಜಕಾಲುವೆಗಳ ಒತ್ತುವರಿಯಲ್ಲಿ ಬಿಡಿಎ, ಬಿಬಿಎಂಪಿ, ಬಿಎಂಟಿಸಿಗಳ ಪಾತ್ರ ಹೆಚ್ಚಿದೆ. ಅಲ್ಲದೆ, ಕೋರಮಂಗಲ– ಚಲ್ಲಘಟ್ಟ ವ್ಯಾಲಿಯ ಬೃಹತ್‌ ಚಲ್ಲಘಟ್ಟ ಕೆರೆಯನ್ನು ಸುಳಿವಿಲ್ಲದಂತೆಯೇ ಮಾಡಿ ಅದರ ಮೇಲೆ ಗಾಲ್ಫ್‌ ಕೋರ್ಸ್‌ ಕಟ್ಟಿರುವುದು ಕೂಡ ಮಳೆನೀರು ಐಟಿ ಕಾರಿಡಾರ್‌ ಹಾಗೂ ಬಡಾವಣೆಗಳಿಗೆ ನುಗ್ಗಲು ಪ್ರಮುಖ ಕಾರಣ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಡಾವಣೆ, ಕಟ್ಟಡ ಎಂದು ರಾಜಕಾಲುವೆ ಹಾಗೂ ಕೆರೆ ಪ್ರದೇಶವನ್ನು ಬೆಂಗಳೂರು ಪೂರ್ವ ವಲಯದಲ್ಲಿ ಅತಿಹೆಚ್ಚು ಒತ್ತುವರಿ ಮಾಡಿಕೊಂಡಿದೆ. ಇದೆಲ್ಲ ಒತ್ತುವರಿ ಎಂದು ಅಧಿಕೃತವಾಗಿ ಬಿಬಿಎಂಪಿ ದಾಖಲೆಗಳೇ ಹೇಳುತ್ತಿದ್ದರೂ ತೆರವು ಮಾಡಲು ಯಾವ ಅಧಿಕಾರಿಗಳೂ ಮುಂದಾಗುತ್ತಿಲ್ಲ. 20–25 ವರ್ಷದಿಂದ ಇಷ್ಟೆಲ್ಲ ಒತ್ತುವರಿಯಾಗಿದ್ದರೂ, ಹಿಂದೆ ಅಧಿಕಾರ ನಡೆಸಿದ ಪಕ್ಷವಾಗಲಿ, ಈಗ ಅಧಿಕಾರ ನಡೆಸುವವರು ಸರ್ಕಾರದ ಇಲಾಖೆಗಳಿಂದಲೇ ನಡೆದಿರುವ ಒತ್ತುವರಿ ತೆರವಿನ ಬಗ್ಗೆ ಮಾತನಾಡದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಧರ್ಮಾಂಬುಧಿ ಕೆರೆ ಒತ್ತುವರಿ ಮಾಡಿಕೊಂಡು ನಿಲ್ದಾಣ ಕಟ್ಟಿಕೊಂಡು ನಗರದ ಕೆರೆಗಳ ಒತ್ತುವರಿಗೆ ಮುನ್ನುಡಿ ಬರೆದ ಅಂದಿನ ಬಿಟಿಎಸ್‌, ಸಿ.ವಿ. ರಾಮನ್‌ನಗರದ ಬಿನ್ನಮಂಗಲದಲ್ಲಿ 15 ಗುಂಟೆ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಬಿಎಂಟಿಎಸ್ ಬಸ್‌ ಡಿಪೊ ನಿರ್ಮಿಸಿದೆ.

ಒಣಗಿರುವ ಕೆರೆ, ವರ್ಷಗಳಿಂದ ನೀರು ಹರಿದಿಲ್ಲದ ಕಾಲುವೆ ಎಂದು ಹೇಳಿ ಬಿಡಿಎ, ಬಿಬಿಎಂಪಿ ಅಧಿಕಾರಿಗಳು ಅವುಗಳ ಮೇಲೆಯೇ ಬಡಾವಣೆ, ಕಟ್ಟಡಗಳನ್ನು ಕಟ್ಟಲು ಕಾನೂನು ಮಾರ್ಪಡಿಸಿಕೊಂಡಿದ್ದಾರೆ. ಈ ರೀತಿ ಕಾನೂನು ಬದಲಿಸಿಕೊಳ್ಳಬಹುದು ಎಂದರೆ ಅದು ಎಲ್ಲ ರೀತಿಯ ಒತ್ತುವರಿಗಳಿಗೂ ಅನ್ವಯಿಸಬೇಕು. ಅಧಿಕಾರಿಗಳು ಐಷಾರಾಮಿ ಬದುಕಿಗೆ ಒಂದು ಕಾನೂನು, ಸಾರ್ವಜನಿಕರಿಗೆ ಒಂದು ಕಾನೂನು ಏಕೆ ಎಂಬುದು ಪರಿಸರ ಕಾರ್ಯಕರ್ತರ ಪ್ರಶ್ನೆಯಾಗಿದೆ.

ಅಧಿಕಾರಿಗಳು ಈಗಲಾದರೂ ಉಪಕಾರ ಮಾಡಲಿ...

ಚಲ್ಲಘಟ್ಟದಂತಹ ಅತ್ಯಂತ ದೊಡ್ಡ ಕೆರೆಗೆ ಹರಿಯುವ ನೀರಿನ ಕಾಲುವೆಯನ್ನು ಮುಚ್ಚಿ, 112 ಎಕರೆ ಕೆರೆಯನ್ನೇ ಒಣಗಿದ ಪ್ರದೇಶ ಎಂದು ಪ್ರತಿಪಾದಿಸಿ ಗಾಲ್ಫ್‌ ಕೋರ್ಸ್‌ ಮಾಡಿಕೊಂಡಿರುವುದರಿಂದ ಮಹದೇವಪುರ ವಲಯದಲ್ಲಿ ಬಡಾವಣೆಗಳು, ಐಟಿ ಕಾರಿಡಾರ್‌ಗಳು ನೀರಿನಲ್ಲಿ ಮುಳುಗಲು ಕಾರಣ. ಚಲ್ಲಘಟ್ಟ ಕೆರೆಯನ್ನು ವ್ಯವಸ್ಥಿತವಾಗಿ ಒಣಗಿಸಿ ಅದನ್ನು ಕಬಳಿಸಲಾಗಿದೆ. ಇದರಿಂದ ಬೃಹತ್‌ ಪ್ರಮಾಣದಲ್ಲಿ ಮಳೆ ನೀರನ್ನು ಹಿಡಿದುಕೊಳ್ಳಬೇಕಿದ್ದ ಕೆರೆ ಇಲ್ಲದ್ದರಿಂದ ಬೆಳ್ಳಂದೂರು ಕೆರೆಗೆ ಈ ನೀರೆಲ್ಲ ಹೋಗಿ ಅಲ್ಲಿಂದ ಬಡಾವಣೆಗಳಿಗೆ ಹರಿದಿದೆ. ಸಣ್ಣಪುಟ್ಟ ಮನೆಗಳನ್ನು ಒಡೆಯುವ ಅಧಿಕಾರಿಗಳು ಬಿಡಿಎ, ಗಾಲ್ಫ್‌ ಕೋರ್ಸ್, ಬಿಬಿಎಂಪಿಯಂತಹ ಸರ್ಕಾರದ ಇಲಾಖೆಗಳ ಒತ್ತುವರಿಯನ್ನು ಮೊದಲು ತೆರವು ಮಾಡಲಿ. ಅತ್ಯಂತ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಸೇರಿಕೊಂಡಿರುವ ಗಾಲ್ಫ್‌ ಕೋರ್ಸ್‌ ಈಗಲಾದರೂ ಕಟ್ಟಡವನ್ನು ಉಳಿಸಿಕೊಂಡು ಮಳೆನೀರನ್ನು ಹಿಡಿದಿಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟರೆ ಬೃಹತ್‌ ಉಪಕಾರ ಮಾಡಿಕೊಟ್ಟಂತಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಯೋಚಿಸಲಿ ಎಂದು ಫ್ರೆಂಡ್ಸ್‌ ಆಫ್‌ ಲೇಕ್‌ನ ರಾಮ್‌ಪ್ರಸಾದ್‌ ಆಗ್ರಹಿಸಿದರು.

ಚಲ್ಲಘಟ್ಟ ಕೆರೆ ಮೇಲೆ ಗಾಲ್ಫ್‌ ಕೋರ್ಸ್‌

ರಾಜಕಾಲುವೆ ಒತ್ತುವರಿ ಎಲ್ಲೆಡೆ ಆಗಿದೆ. ಇದಕ್ಕೆ ಅಧಿಕಾರಿಗಳೇ ಅನುವು ಮಾಡಿದ್ದಾರೆ. ಬಿಡಿಎ ಅಧಿಕಾರಿಗಳೇ ಒತ್ತುವರಿಗೆ ಮೊದಲ ಕಾರಣ. ಇದು ಒಂದು ಸರ್ಕಾರದ್ದಲ್ಲ. 30 ವರ್ಷಗಳಿಂದ ನಡೆದ ಐಟಿ ಕಾರಿಡಾರ್‌ಗಳ ಬೆಳವಣಿಗೆ, ಕಟ್ಟಡಗಳಿಗೆ ಅನುವು ಮಾಡಿಕೊಟ್ಟಿರುವುದು ಇಂದಿನ ಪ್ರವಾಹದಂತಹ ಪರಿಸ್ಥಿತಿಗೆ ಕಾರಣ. ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಬಹುತೇಕ ಎಲ್ಲ ಅಧಿಕಾರಿಗಳು ಕೆರೆಗಳನ್ನು ಅತಿಕ್ರಮಣ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಬಡಾವಣೆಗಳಲ್ಲಿ ರಾಜಕಾಲುವೆ ಮಾರ್ಪಾಟು ಮಾಡಿಕೊಳ್ಳುವ ಸಂದರ್ಭದಲ್ಲಿ ಯಾರು ಕ್ರಮ ಕೈಗೊಳ್ಳಲಿಲ್ಲ. ಕುಂಟೆಗಳನ್ನು ಮುಚ್ಚಿ ಕಟ್ಟಡ, ಬಡಾವಣೆಗಳನ್ನು ಕಟ್ಟಲಾಗಿದೆ. ಇವು ನೀರು ಹಿಡಿದಿಟ್ಟುಕೊಳ್ಳುವ ಪ್ರಮುಖ ತಾಣಗಳಾಗಿದ್ದವು. ಲಕ್ಷ್ಮಣರಾವ್‌, ಎ.ಟಿ. ರಾಮಸ್ವಾಮಿ, ಕೋಳಿವಾಡ ಸಮಿತಿ ವರದಿಗಳಂತೆ ಯಾರೂ ಕ್ರಮ ಕೈಗೊಂಡಿಲ್ಲ. ಚಲ್ಲಘಟ್ಟ ಎಂಬ ಬೃಹತ್‌ ಕೆರೆಯನ್ನು ದೊಡ್ಡ ಅಧಿಕಾರಿಗಳೇ ಮುಚ್ಚಿಹಾಕಿ ಅಕ್ರಮವಾಗಿ ಗಾಲ್ಫ್‌ ಕೋರ್ಸ್‌ ಮಾಡಿಕೊಂಡಿದ್ದಾರೆ. ರಿಯಲ್‌ ಎಸ್ಟೇಟ್‌ನಲ್ಲಿ ತೊಡಗಿರುವ ಶಾಸಕರು ಇದಕ್ಕೆಲ್ಲ ಕುಮ್ಮಕ್ಕು ನೀಡಿದ್ದಾರೆ. ಚಲ್ಲಘಟ್ಟದಂತಹ ಬೃಹತ್‌ ಕೆರೆಯನ್ನು ಮುಚ್ಚಿದ್ದರಿಂದ ಮುಂದಿನ ಭಾಗದಲ್ಲಿ ಜಲಾವೃತಕ್ಕೆ ಪ್ರಮುಖ ಕಾರಣ ಎಂದು ವರ್ತೂರಿನಲ್ಲಿರುವ ಪರಿಸರ ಕಾರ್ಯಕರ್ತ ಜಗದೀಶ ರೆಡ್ಡಿ ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು