ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾನಕಿ’-‘ಊರ್ಮಿಳೆ’ಯ ಕುಶಲೋಪರಿ

Last Updated 19 ಡಿಸೆಂಬರ್ 2021, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ಬರಹ ಮತ್ತು ನನ್ನ ನಡುವೆ ಅಂತರ ಬೇಕಿತ್ತು ಹಾಗೂ ಉದ್ಯೋಗದ ಕಾರಣಕ್ಕೆ ನಿಜವಾದ ಹೆಸರನ್ನು ಅಡಗಿಸಬೇಕಾದ ಅನಿವಾರ್ಯ ಇತ್ತು ಈ ಕಾರಣಗಳಿಂದಾಗಿ ‘ಜಾನಕಿ’ ಹೆಸರಿನಲ್ಲಿ ಸಾಹಿತ್ಯ ರಚನೆ ಮಾಡಿದೆ’ ಎಂದು ಪತ್ರಕರ್ತ ಜೋಗಿ ಹೇಳಿದರು.

‘ಓದುಗರು ಕೃತಿಗಳಲ್ಲಿ ಲೇಖಕರನ್ನು ಹುಡುಕುವ ಪ್ರಯತ್ನ ಮಾಡುತ್ತಾರೆ. 'ಊರ್ಮಿಳೆ' ಹೆಸರು ನನ್ನ ನಿಜವಾದ ಗುರುತನ್ನು ಮರೆಮಾಚಲು ಸಹಕಾರಿಯಾಯಿತು’ ಎಂದು ಪತ್ರಕರ್ತ ಜಿ.ಎನ್. ಮೋಹನ್ ತಿಳಿಸಿದರು.

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಭಾನುವಾರ ನಡೆದ ‘ಕಥೆಯೆಂಬುದು ಆತ್ಮಕಥೆಯೂ ಹೌದು’ ಸಂವಾದ ಕಾರ್ಯಕ್ರಮದಲ್ಲಿ ಈ ಇಬ್ಬರು ತಮ್ಮ ಕ್ಯಾವ್ಯನಾಮದ ಸ್ವಾರಸ್ಯ ಬಿಚ್ಚಿಟ್ಟರು.

‘ಜಾನಕಿ’ ಹೆಸರಿನಿಂದಾಗಿ ನನಗೆ ಅನಾಮಿಕತೆ ಸಿಕ್ಕಿತು. ಅನಾಮಿಕತೆ ಒಬ್ಬ ಲೇಖಕನನ್ನು ಗಹನವಾಗಿ ನೋಡುವಂತೆ ಮಾಡುತ್ತದೆ. ನನ್ನ ‘ಕಾಡ ಬೆಳದಿಂಗಳು’ ಕಾದಂಬರಿ ಸಿನಿಮಾ ಆದಾಗ ಅದರಲ್ಲಿ ನಾನು ನಿರೂಪಕನಾಗಿರಲಿಲ್ಲ. ಅದು ನಿರ್ದೇಶಕನ ಆತ್ಮಕಥೆಯೂ ಆಯಿತು. ಹೀಗೆ ಒಂದೇ ಕೃತಿಯು ಹಲವರ ಆತ್ಮಕಥೆಯಾಗಲು ಸಾಧ್ಯವಿದೆ ಎಂದು ಜೋಗಿ ಅಭಿಪ್ರಾಯಪಟ್ಟರು.

‘ಯಾವ ಕೃತಿಯಲ್ಲಿ ಒಬ್ಬ ಲೇಖಕ ಸತ್ಯ ಹೇಳುತ್ತಾನೋ ಆ ಕೃತಿ ಓದುಗನನ್ನು ಬಹುಬೇಗ ತಲುಪುತ್ತದೆ’. ಎಂದರು.

‘ಮೊದಲು ನಾನು ಪ್ರಬಂಧಗಳನ್ನು ಬರೆದಿದ್ದೆ. ಅದು ಅನಂತರ ಪುಸ್ತಕವಾಗಿದೆ. ಈ ಬರಹಗಳನ್ನು ಪ್ರಕಟಣೆ ಮಾಡುವಾಗ ಪ್ರಕಾಶಕರು ಆತ್ಮಕಥನಾತ್ಮಕ ಬರಹಗಳು ಎಂದು ಉಲ್ಲೇಖಿಸಿದರು. ನಾನು ಎಲ್ಲೂ ಇವು ಆತ್ಮಕಥನಾತ್ಮಕ ಬರಹಗಳು ಎಂದು ಹೇಳಿರಲಿಲ್ಲ. ಆದರೂ ಈ ರೀತಿ ಉಲ್ಲೇಖಿಸಲು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿನ ಬರಹಗಳಲ್ಲಿ ಲೇಖಕನನ್ನು ಹೆಕ್ಕುವ ಪ್ರವೃತ್ತಿ ಕಾರಣ’ ಎಂದು ಜಿ.ಎನ್.ಮೋಹನ್ ಹೇಳಿದರು.

ಬೇರೆ ಹೆಸರಲ್ಲಿ ಬರೆದಾಗ ಮತ್ತು ನನ್ನದೇ ಹೆಸರಲ್ಲಿ ಬರೆದಾಗ ಓದುಗರಿಗೆ ಭಿನ್ನರೀತಿಯ ಓದುಗಳು ಸಿಗುತ್ತವೆ. ಬರಹ ಮತ್ತು ಬರಹಗಾರನ ನಡುವೆ ಬಹಳ ತೆಳುವಾದ ಗೆರೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT