ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ವೃದ್ಧೆ ಮೃತದೇಹ ತುಂಡರಿಸಿ ಡ್ರಮ್‌ನಲ್ಲಿಟ್ಟ ಹಂತಕ

ಕೆ.ಆರ್. ಪುರದ ನಿಸರ್ಗ ಬಡಾವಣೆಯಲ್ಲಿ ಘಟನೆ | ಮಗಳ ಜೊತೆ ವಾಸವಿದ್ದ ಸರೋಜಮ್ಮ
Published 25 ಫೆಬ್ರುವರಿ 2024, 22:30 IST
Last Updated 25 ಫೆಬ್ರುವರಿ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್. ಪುರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ವೃದ್ಧೆಯೊಬ್ಬರನ್ನು ಹತ್ಯೆ ಮಾಡಲಾಗಿದ್ದು, ಮೃತದೇಹವನ್ನು ತುಂಡರಿಸಿ ಡ್ರಮ್‌ನಲ್ಲಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

‘ನಿಸರ್ಗ ಲೇಔಟ್‌ನ ಸರೋಜಮ್ಮ (78) ಮೃತರು. ಇವರು ವಾಸವಿದ್ದ ಮನೆಯಿಂದ ಭಾನುವಾರ ದುರ್ವಾಸನೆ ಬರುತ್ತಿತ್ತು. ಅನುಮಾನಗೊಂಡ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಮನೆಗೆ ಹೋಗಿ ಪರಿಶೀಲಿಸಿದಾಗ, ಡ್ರಮ್‌ನಲ್ಲಿ ಮೃತದೇಹ ಪತ್ತೆಯಾಗಿದೆ’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್ ಗುಣಾರೆ ‘ಪ್ರಜಾವಾಣಿ‘ಗೆ ತಿಳಿಸಿದರು.

ಮೃತದೇಹ ತುಂಡರಿಸಿರುವ ಆರೋಪಿಗಳು: ‘ಸರೋಜಮ್ಮ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗ, ಪ್ರತ್ಯೇಕವಾಗಿ ವಾಸವಿದ್ದಾರೆ. ಮಗಳ ಜೊತೆ ಸರೋಜಮ್ಮ ನೆಲೆಸಿದ್ದರು. ಇವರ ಕೊಲೆಗೆ ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದು ಪೊಲೀಸರು ಹೇಳಿದರು.

‘ಸರೋಜಮ್ಮ ಅವರನ್ನು ಎರಡು ದಿನಗಳ ಹಿಂದೆಯೇ ಕೊಲೆ ಮಾಡಿರುವ ಸಂಶಯವಿದೆ. ಕೊಲೆ ನಂತರ, ಮೃತದೇಹವನ್ನು ತುಂಡರಿಸಿ ಡ್ರಮ್‌ನಲ್ಲಿ ತುಂಬಿಟ್ಟಿರುವ ಅನುಮಾನವಿದೆ. ಪರಿಚಯಸ್ಥರೇ ಕೃತ್ಯ ಎಸಗಿರುವ ಮಾಹಿತಿ ಇದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ತಿಳಿಸಿದರು.

ಡ್ರಮ್‌ ಸಮೇತ ಆಸ್ಪತ್ರೆಗೆ ಸಾಗಣೆ: ‘ಮೃತದೇಹವನ್ನು ಹಲವು ಭಾಗಗಳಾಗಿ ತುಂಡರಿಸಿ ಡ್ರಮ್‌ನಲ್ಲಿಡಲಾಗಿದೆ. ಹೀಗಾಗಿ, ಡ್ರಮ್‌ ಸಮೇತ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ವರದಿ ಬಂದ ನಂತರ ಸಾವಿನ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದರು.

‘ಆಸ್ತಿ ಹಾಗೂ ಕೌಟುಂಬಿಕ ವಿಚಾರಕ್ಕೆ ಕೊಲೆ ನಡೆದಿರುವ ಬಗ್ಗೆ ಸಂಶಯವಿದೆ. ಮಗಳು ಹಾಗೂ ಮಗನನ್ನೂ ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ಹೇಳಿದರು.

ಜನರಿಗೆ ಆತಂಕ: ವೃದ್ಧೆಯ ಮೃತದೇಹವನ್ನು ತುಂಡರಿಸಿ ಡ್ರಮ್‌ನಲ್ಲಿಟ್ಟಿದ್ದ ಮಾಹಿತಿ ತಿಳಿದ ಹತ್ತಿರದ ನಿವಾಸಿಗಳು ಮನೆ ಎದುರು ಜಮಾಯಿಸಿದ್ದರು.

‘ವೃದ್ಧೆಯನ್ನು ಅಮನುಷವಾಗಿ ಕೊಲೆ ಮಾಡಲಾಗಿದೆ. ಇದರಿಂದ ನಾವೆಲ್ಲರೂ ಆತಂಕಗೊಂಡಿದ್ದೇವೆ. ಆರೋಪಿಗಳನ್ನು ಪೊಲೀಸರು ತ್ವರಿತವಾಗಿ ಬಂಧಿಸಬೇಕು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT