ಬುಧವಾರ, ಆಗಸ್ಟ್ 10, 2022
24 °C

ಚಿಕ್ಕಪೇಟೆಯಲ್ಲಿ ಮಾಲೀಕನ ಕೊಲೆ: ಗುಜರಾತ್‌ನಲ್ಲಿ ಸಿಕ್ಕಿಬಿದ್ದ ಆರೋಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿಕ್ಕಪೇಟೆಯಲ್ಲಿರುವ ‘ದೀಪಂ ಎಲೆಕ್ಟ್ರಿಕಲ್ಸ್‌’ ಮಳಿಗೆ ಮಾಲೀಕ ಜುಗರಾಜ್‌ ಜೈನ್‌ (74) ಅವರನ್ನು ಕೊಲೆ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಸಾಮಗ್ರಿ ಸಮೇತ ಪರಾರಿಯಾಗಿದ್ದ ಆರೋಪಿ ಬಿಜರಾಮ್  ಗುಜರಾತ್‌ನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

‘ರಾಜಸ್ಥಾನದ ಬಿಜರಾಮ್, ಕೆಲ ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದ. ಕೆಲಸ ಕೊಟ್ಟಿದ್ದ ಜುಗರಾಜ್ ಅವರನ್ನೇ ಮೇ 24ರಂದು ಕೊಲೆ ಮಾಡಿ ಪರಾರಿಯಾಗಿದ್ದ. ಈತನ ಬಗ್ಗೆ ಹೊರ ರಾಜ್ಯಗಳಿಗೆ ಫೋಟೊ ಸಮೇತ ಮಾಹಿತಿ ರವಾನಿಸಲಾಗಿತ್ತು’ ಎಂದು ಚಾಮರಾಜಪೇಟೆ ಪೊಲೀಸರು ಹೇಳಿದರು.

‘ಕೊಲೆ ಬಳಿಕ ರಾಜಸ್ಥಾನ್‌ಗೆ ಹೋಗಿದ್ದ ಆರೋಪಿ, ಕೆಲ ದಿನ ನೆಲೆಸಿದ್ದ. ಐಷಾರಾಮಿ ವಸ್ತುಗಳ ಖರೀದಿಗಾಗಿ ಸ್ವಲ್ಪ ಹಣ ಖರ್ಚು ಮಾಡಿದ್ದ. ಬೆಂಗಳೂರು ಪೊಲೀಸರು ತನ್ನನ್ನು ಹುಡುಕಿಕೊಂಡು ತನ್ನೂರಿಗೆ ಬರಬಹುದೆಂದು ತಿಳಿದು, ಅಲ್ಲಿಂದ ಗುಜರಾತ್‌ಗೆ ಹೊರಟಿದ್ದ. ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿದ್ದ ಸ್ಥಳೀಯ ಪೊಲೀಸರು, ಆರೋಪಿಯನ್ನು ತಡೆದು ಪರಿಶೀಲನೆ ನಡೆಸಿದ್ದರು. ಆತನ ಬಳಿ ನಗದು ಹಾಗೂ ಬೆಳ್ಳಿ ಸಾಮಗ್ರಿ ಪತ್ತೆಯಾಗಿದ್ದವು’ ಎಂದೂ ತಿಳಿಸಿದರು.

‘ವಶಕ್ಕೆ ಪಡೆದು ವಿಚಾರಿಸಿದಾಗ, ಬೆಂಗಳೂರಿನಲ್ಲಿ ಕೊಲೆ ಮಾಡಿರುವ ಸಂಗತಿಯನ್ನು ಆರೋಪಿ ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಗುಜರಾತ್ ಪೊಲೀಸರು ಮಾಹಿತಿ ನೀಡಿದ್ದು, ಶೀಘ್ರವೇ ಆರೋಪಿಯನ್ನು ಕಸ್ಟಡಿಗೆ ಪಡೆದು ಬೆಂಗಳೂರಿಗೆ ಕರೆತರಲಾಗುವುದು’ ಎಂದೂ ಹೇಳಿದರು.

ಸಂಚು ರೂಪಿಸಿ ಕೊಲೆ: ‘ಜುಗರಾಜ್ ಜೈನ್ ಅವರ ಕಿರಿಯ ಮಗ ಆನಂದ್‌ಕುಮಾರ್‌, ಮನೆ ಕೆಲಸಕ್ಕೆಂದು ಆರೋಪಿ ಬಿಜರಾಮ್‌ನನ್ನು ನೇಮಿಸಿಕೊಂಡಿದ್ದರು. ಆರೋಪಿಯೇ ಜುಗರಾಜ್‌ ಅವರನ್ನು ನಿತ್ಯವೂ ಮಳಿಗೆ ಕರೆದೊಯ್ದು, ವಾಪಸು ಕರೆದುಕೊಂಡು ಬರುತ್ತಿದ್ದ. ಜುಗರಾಜ್ ವಾಸವಿದ್ದ ಚಾಮರಾಜಪೇಟೆಯ ವಸತಿ ಸಮುಚ್ಚಯವೊಂದರ ನೆಲಮಹಡಿಯಲ್ಲೇ ಆರೋಪಿಗೆ ತಂಗಲು ಕೊಠಡಿ ನೀಡಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಜುಗರಾಜ್ ಅವರ ಮನೆಯಲ್ಲಿ ಬೆಳ್ಳಿ ಸಾಮಗ್ರಿ ಹಾಗೂ ನಗದು ಇರುವ ಸಂಗತಿ ಆರೋಪಿಗೆ ಗೊತ್ತಾಗಿತ್ತು. ಅವುಗಳನ್ನು ದೋಚಲು ಆರೋಪಿ ಸಂಚು ರೂಪಿಸಿದ್ದ. ಮೇ 23ರಂದು ಕುಟುಂಬಸ್ಥರೆಲ್ಲರೂ ಗೋವಾಗೆ ಹೋಗಿದ್ದರು. ಜುಗರಾಜ್ ಮಾತ್ರ ಮನೆಯಲ್ಲಿದ್ದರು. ಮೇ 24ರಂದು ಜುಗರಾಜ್‌ ಜೊತೆ ಮಳಿಗೆಗೆ ಹೋಗಿದ್ದ ಆರೋಪಿ, ರಾತ್ರಿ ಮಳಿಗೆ ಬಂದ್ ಮಾಡಿಕೊಂಡು ಮನೆಗೆ ವಾಪಸು ಬಂದಿದ್ದ.’

‘ಮನೆಯಲ್ಲಿ ಒಂಟಿಯಾಗಿದ್ದ ಜುಗರಾಜ್‌ ಅವರ ಕೈ–ಕಾಲು ಕಟ್ಟಿ ಹಾಕಿದ್ದ ಆರೋಪಿ, ಕಿರುಚಾಡದಂತೆ ಬಾಯಿಗೆ ಬಟ್ಟೆ ತುರುಕಿದ್ದ. ನಂತರ, ಹಲ್ಲೆ ಮಾಡಿ ಕೊಂದಿದ್ದ. ಮೃತದೇಹವನ್ನು ಸ್ನಾನದ ಕೋಣೆಯಲ್ಲಿರಿಸಿ ಪರಾರಿಯಾಗಿದ್ದ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು