ಶನಿವಾರ, ಅಕ್ಟೋಬರ್ 1, 2022
20 °C
ಕಾರು ಖರೀದಿಸಿ 20 ದಿನದಲ್ಲೇ ಅವಘಡ | ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆಯಲ್ಲಿ ಪ್ರಕರಣ

ನೈಸ್ ರಸ್ತೆಯಲ್ಲಿ ಅಪಘಾತ: ಕಾರಿನಲ್ಲಿದ್ದ ಯುವತಿ ಸಾವು

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯ ನೈಸ್‌ ರಸ್ತೆಯಲ್ಲಿ ಕಾರು ಹಾಗೂ ಕಂಟೇನರ್ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಸುಶ್ಮಿತಾ (19) ಎಂಬುವರು ಮೃತಪಟ್ಟಿದ್ದಾರೆ.

‘ಮಂಡ್ಯದ ಸುಶ್ಮಿತಾ, ಬೆಂಗಳೂರಿನ ಬೊಮ್ಮನಹಳ್ಳಿ ಬಳಿಯ ಮಂಗಮ್ಮನಪಾಳ್ಯದಲ್ಲಿ ನೆಲೆಸಿದ್ದರು. ಪಿಯುಸಿ ಮುಗಿಸಿ ಕಂಪ್ಯೂಟರ್ ಕೋರ್ಸ್ ಮಾಡುತ್ತಿದ್ದರು. ದೇವರ ಕಾರ್ಯಕ್ಕೆಂದು ಇತ್ತೀಚೆಗೆ ಮಂಡ್ಯಕ್ಕೆ ಹೋಗಿದ್ದ ಸುಶ್ಮಿತಾ ಹಾಗೂ ಕುಟುಂಬದವರು, ಮಂಗಳವಾರ ನಸುಕಿನಲ್ಲಿ ಬೆಂಗಳೂರಿಗೆ ವಾಪಸು ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.

‘ಕಾರಿನ ಚಾಲಕ ಅಭಿಷೇಕ್ ತೀವ್ರ ಗಾಯಗೊಂಡಿದ್ದು, ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ್ದ ಜಯಮ್ಮ (60), ಯಶವಂತ್ (14), ಸರಸ್ವತಮ್ಮ (37) ಸಹ ಗಾಯಗೊಂಡಿದ್ದು, ಕಾವೇರಿ ಆಸ್ಪತ್ರೆಯಲ್ಲಿದ್ದಾರೆ’ ಎಂದು ತಿಳಿಸಿದರು.

20 ದಿನಗಳ ಹಿಂದೆಯಷ್ಟೇ ಕಾರು ಖರೀದಿ

‘ಮಂಡ್ಯದ ಅಭಿಷೇಕ್, 20 ದಿನಗಳ ಹಿಂದೆಯಷ್ಟೇ ಹೊಸ ಕಾರು ಖರೀದಿಸಿದ್ದರು. ಅದನ್ನು ಬೆಂಗಳೂರಿನಲ್ಲಿದ್ದ ಕಂಪನಿಗೆ ಬಾಡಿಗೆ ನೀಡುವುದಕ್ಕಾಗಿ ಸೋಮವಾರ ತಡರಾತ್ರಿ ಬೆಂಗಳೂರಿಗೆ ಬರುತ್ತಿದ್ದರು. ಸಂಬಂಧಿಕರೇ ಆಗಿದ್ದ ಸುಶ್ಮಿತಾ ಹಾಗೂ ಕುಟುಂಬದವರು ಸಹ ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಅಭಿಷೇಕ್ ಅತಿ ವೇಗವಾಗಿ ಕಾರು ಚಲಾಯಿಸಿದ್ದರು. ನೈಸ್ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ್ದ ಕಾರು, ಎದುರಿಗೆ ಹೊರಟಿದ್ದ ಕಂಟೇನರ್ ವಾಹನಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದಿತ್ತು. ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಸುಶ್ಮಿತಾ ಸ್ಥಳದಲ್ಲೇ ಮೃತಪಟ್ಟರು. ಉಳಿದ ಗಾಯಾಳುಗಳನ್ನು ದಾರಿಹೋಕರು ಹಾಗೂ ಸ್ಥಳೀಯರೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ’ ಎಂದು ತಿಳಿಸಿದರು.

‘ಕಾರು ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅವರ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು