ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನದನಿ | ಬೆಂಗಳೂರು: ಕುಂದು–ಕೊರತೆ

Published 6 ಮೇ 2024, 0:11 IST
Last Updated 6 ಮೇ 2024, 0:11 IST
ಅಕ್ಷರ ಗಾತ್ರ

‘ಗಾಂಧಿ ಪಾರ್ಕ್‌ನಲ್ಲಿ ಕಸದ ರಾಶಿ’

ಉತ್ತರಹಳ್ಳಿ ಮುಖ್ಯರಸ್ತೆಯ ಕೆಎಸ್‌ಆರ್‌ಟಿಸಿ ಲೇಔಟ್‌ನಲ್ಲಿರುವ ಗಾಂಧಿ ಪಾರ್ಕ್‌ ಕಸದ ರಾಶಿಯಿಂದ ಗಬ್ಬು ನಾರುತ್ತಿದೆ. ನಿರ್ವಹಣಾ ಕೊರತೆಯಿಂದ ಉದ್ಯಾನ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಈ ಮೊದಲು ಉದ್ಯಾನದ ಸುತ್ತಲೂ ಕಬ್ಬಿಣದ ಬೇಲಿಗಳನ್ನು ಅಳವಡಿಸಲಾಗಿತ್ತು. ಉದ್ಯಾನದ ಒಳಗಡೆ ಕೊಳವೆ ಬಾವಿ ಕೊರೆಯುವ ವೇಳೆ ಕಬ್ಬಿಣದ ಬೇಲಿಗಳನ್ನು ತೆಗೆದು, ಪಕ್ಕದಲ್ಲಿ ಇಡಲಾಗಿತ್ತು. ಆ ಬೇಲಿಗಳು ಈಗ ಕಣ್ಮರೆಯಾಗಿವೆ. ಬಿಬಿಎಂಪಿ ಕೂಡ ಈ ಬಗ್ಗೆ ಗಮನಹರಿಸಿಲ್ಲ. ಈ ಉದ್ಯಾನದಲ್ಲಿನ ಕಲ್ಲಿನ ಆಸನಗಳು ಮದ್ಯವ್ಯಸನಿಗಳಿಗೆ ಸಹಕಾರಿಯಾಗಿದೆ. ಮದ್ಯದ ಬಾಟಲಿ, ಪ್ಲಾಸ್ಟಿಕ್ ಲೋಟಗಳನ್ನು ಎಲ್ಲೆಂದರೆಲ್ಲಿ ಕಾಣಬಹುದಾಗಿದೆ. ವಿವಾಹ ಸೇರಿ ವಿವಿಧ ಶುಭ ಸಮಾರಂಭಗಳಲ್ಲಿ ಬಳಸಲಾಗುವ ತೆಂಗಿನ ಗರಿಗಳನ್ನೂ ಉದ್ಯಾನದ ಬಳಿಯೇ ಹಾಕಲಾಗುತ್ತಿದೆ. ಇಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕವಿದೆ. ತ್ಯಾಜ್ಯಗಳನ್ನು ಇಲ್ಲಿ ಹಾಕುತ್ತಿರುವುದರಿಂದ ನೀರನ್ನು ಹಿಡಿಯಲೂ ಸಮಸ್ಯೆ ಆಗುತ್ತಿದೆ. ಆದ್ದರಿಂದ ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ಕ್ರಮಕೈಗೊಳ್ಳಬೇಕು. 

-ಮೂರ್ತಿ, ‌ಕೆಎಸ್‌ಆರ್‌ಟಿಸಿ ಲೇಔಟ್

‘ಗುಂಡಿಗಳಿಂದ ಕೂಡಿದ ರಸ್ತೆ’

ನ್ಯೂ ಬಿಇಎಲ್ ರಸ್ತೆಯಲ್ಲಿರುವ ಮಯೂರಿ ಹೋಟೆಲ್ ಸಿಗ್ನಲ್‌ನಿಂದ ಇಸ್ರೊ ಕಡೆಗೆ ಹೋಗುವ ರಸ್ತೆ ಸಂಪೂರ್ಣ ಕಿತ್ತುಹೋಗಿ, ಗುಂಡಿಗಳಿಂದ ಕೂಡಿದೆ. ನೆಲದಡಿಯಲ್ಲಿ ಕೇಬಲ್‌ ಅಳವಡಿಸುವವರು ರಸ್ತೆಯನ್ನು ಅಗೆದಿದ್ದರು. ಸರಿಯಾಗಿ ಮುಚ್ಚದಿದ್ದರಿಂದ ರಸ್ತೆ ಒಂದು ಭಾಗವು ಸಂಪೂರ್ಣ ಕಿತ್ತುಹೋಗಿದೆ. ಇದರಿಂದಾಗಿ ವಾಹನ ಸಂಚಾರ ದುಸ್ತರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕಡೆಗೆ ಗಮನ ಹರಿಸುವ ಗೋಜಿಗೆ ಹೋಗಿಲ್ಲ. ಈಗಲಾದರೂ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.

-ಬಂದಗಾರ್ ಶಿವಾಜಿ, ನ್ಯೂ ಬಿಇಎಲ್ ರಸ್ತೆ

ಮಯೂರಿ ಹೋಟೆಲ್ ಸಿಗ್ನಲ್‌ನಿಂದ ಇಸ್ರೊ ಕಡೆಗೆ ಹೋಗುವ ರಸ್ತೆ ಕಿತ್ತು ಹೋಗಿರುವುದು
ಮಯೂರಿ ಹೋಟೆಲ್ ಸಿಗ್ನಲ್‌ನಿಂದ ಇಸ್ರೊ ಕಡೆಗೆ ಹೋಗುವ ರಸ್ತೆ ಕಿತ್ತು ಹೋಗಿರುವುದು

‘ರಸ್ತೆಯ ಪಕ್ಕದಲ್ಲಿ ಕಸದ ರಾಶಿ’

ದಾಸರಹಳ್ಳಿ ವಿಧಾನಸಭೆ ವ್ಯಾಪ್ತಿಯ ಚಿಕ್ಕಬಾಣಾವರದ ರಸ್ತೆ ಬದಿಯಲ್ಲಿ ಹಲವು ದಿನಗಳಿಂದ ಕಸದ ರಾಶಿ ಹಾಗೇ ಉಳಿದಿದೆ. ಅಧಿಕಾರಿಗಳಿಗೆ ದೂರು ನೀಡಿದರೂ ಈ ಬಗ್ಗೆ ಕ್ರಮಕೈಗೊಂಡಿಲ್ಲ. ಇದರಿಂದಾಗಿ ರಸ್ತೆಯು ಕಸದ ತೊಟ್ಟಿಯಾಗಿ ಪರಿಣಮಿಸಿದೆ. ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗದ ರೀತಿಯಲ್ಲಿ ಕಸ ಸುರಿಯಲಾಗುತ್ತಿದೆ. ಇವು ಕ್ರಮೇಣ ಕೊಳೆತು ದುರ್ನಾತ ಬೀರುತ್ತವೆ. ಇದರಿಂದ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡೇ ಸಾಗುವ ಪರಿಸ್ಥಿತಿ ಇದೆ. ರಸ್ತೆಯಲ್ಲೆಲ್ಲ ತ್ಯಾಜ್ಯ ಹರಡಿ, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ರಸ್ತೆ ಬದಿಯ ಚರಂಡಿಯನ್ನೂ ಸ್ವಚ್ಛಗೊಳಿಸಬೇಕಿದೆ. ಇಲ್ಲಿ ಕಸ ಹಾಕದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

-ಚನ್ನಿಗಪ್ಪಗೌಡ, ಗಣಪತಿನಗರ

ಚಿಕ್ಕಬಾಣಾವರದ ರಸ್ತೆ ಬದಿಯಲ್ಲಿ ಕಸದ ರಾಶಿ ಹಾಕಿರುವುದು
ಚಿಕ್ಕಬಾಣಾವರದ ರಸ್ತೆ ಬದಿಯಲ್ಲಿ ಕಸದ ರಾಶಿ ಹಾಕಿರುವುದು

‘ಮಳೆಗೆ ಕಿತ್ತುಹೋದ ರಸ್ತೆ’ 

ಕಳಪೆ ಕಾಮಗಾರಿಯಿಂದಾಗಿ ಮಳೆಗೆ ನಗರದ ರಸ್ತೆಗಳು ಕಿತ್ತು ಹೋಗುತ್ತಿವೆ. ಕೇವಲ 15 ನಿಮಿಷಗಳು ಸುರಿದ ಮೊದಲ ಮಳೆಗೆ ನಾಗರಬಾವಿಯ 80 ಅಡಿ ರಸ್ತೆ ಕಿತ್ತು ಹೋಗಿದೆ. ಈ ರಸ್ತೆಯನ್ನು ಹೊಸದಾಗಿ ನಿರ್ಮಿಸಲಾಗಿತ್ತು. ಮಳೆಗಾಲ ಪ್ರಾರಂಭವಾಗುವ ಮೊದಲೇ ಈ ಪರಿಸ್ಥಿತಿಯಾದರೆ ಮುಂದೇನು? ಕಿತ್ತು ಹೋದ ರಸ್ತೆಯ ಕಲ್ಲು, ಮಣ್ಣುಗಳು ಚರಂಡಿ ಸೇರಿವೆ. ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಕ್ರಮವಹಿಸಬೇಕು. 

-ಕುಮಾರ್, ನಾಗರಬಾವಿ

ನಾಗರಬಾವಿಯ 80 ಅಡಿ ರಸ್ತೆ ಕಿತ್ತು ಹೋಗಿರುವುದು
ನಾಗರಬಾವಿಯ 80 ಅಡಿ ರಸ್ತೆ ಕಿತ್ತು ಹೋಗಿರುವುದು

‘ಪಾದಚಾರಿ ಮಾರ್ಗ ಸ್ವಚ್ಛಗೊಳಿಸಿ’

ಇಂದಿರಾನಗರದಿಂದ ಈಜಿಪುರಕ್ಕೆ ಸಾಗುವ ಹೊರವರ್ತುಲ ರಸ್ತೆಯ ಪಾದಚಾರಿ ಮಾರ್ಗದುದ್ದಕ್ಕೂ ಕಸ ಹಾಕಲಾಗಿದೆ. ಇದನ್ನು ವಿಲೇವಾರಿ ಮಾಡದಿದ್ದರಿಂದ ಕಸದ ರಾಶಿ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಇದರಿಂದಾಗಿ ಪಾದಚಾರಿ ಮಾರ್ಗದಲ್ಲಿ ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಈ ಕಸವು ಗಾಳಿಗೆ ರಸ್ತೆಗಳಿಗೆ ಬರುತ್ತಿದೆ. ಮಳೆ ಬಂದಲ್ಲಿ ಇನ್ನಷ್ಟು ಸಮಸ್ಯೆಯಾಗುತ್ತದೆ. ಪಾದಚಾರಿ ಮಾರ್ಗದಲ್ಲಿ ಕಸ ಹಾಕದಂತೆ ಹಾಗೂ ಈಗ ಇರುವ ಕಸದ ವಿಲೇವಾರಿಗೆ ತುರ್ತಾಗಿ ಕ್ರಮಕೈಗೊಳ್ಳಬೇಕು.  

-ನೀತು, ಸ್ಥಳೀಯ ನಿವಾಸಿ

ಇಂದಿರಾನಗರದಿಂದ ಈಜಿಪುರಕ್ಕೆ ಸಾಗುವ ಹೊರವರ್ತುಲ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಕಸ ಹಾಕಿರುವುದು
ಇಂದಿರಾನಗರದಿಂದ ಈಜಿಪುರಕ್ಕೆ ಸಾಗುವ ಹೊರವರ್ತುಲ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಕಸ ಹಾಕಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT