ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಪಕ್ಷಿ ಪ್ರೇಮಿಗಳ ವಿರೋಧ: ₹200 ದಂಡದ ಫಲಕ ತೆರವು

Published 6 ಏಪ್ರಿಲ್ 2024, 13:59 IST
Last Updated 6 ಏಪ್ರಿಲ್ 2024, 13:59 IST
ಅಕ್ಷರ ಗಾತ್ರ

ಬೆಂಗಳೂರು: ‘ಪಾರಿವಾಳಗಳಿಗೆ ಆಹಾರ ಹಾಕಿದ್ದಲ್ಲಿ ₹ 200 ದಂಡ ವಿಧಿಸಲಾಗುವುದು’ ಎಂಬ ನಿಯಮಕ್ಕೆ ಪಕ್ಷಿ ಪ್ರೇಮಿಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಕಾಮಗಾರಿ ಸ್ಥಳದಲ್ಲಿದ್ದ ದಂಡದ ಫಲಕವನ್ನು ತೆರವು ಮಾಡಲಾಗಿದೆ.

ರೇಸ್‌ಕೋರ್ಸ್ ರಸ್ತೆಯ (ರೆಬಲ್ ಸ್ಟಾರ್ ಎಂ.ಎಚ್. ಅಂಬರೀಷ್ ರಸ್ತೆ) ಜಂಕ್ಷನ್‌ನಲ್ಲಿ ಹಲವು ವರ್ಷಗಳಿಂದ ಪಾರಿವಾಳಗಳು ಬಂದು ಕೂರುತ್ತಿವೆ. ನಿತ್ಯವೂ ಜಂಕ್ಷನ್‌ಗೆ ಬರುವ ಹಲವರು, ಪಾರಿವಾಳಗಳಿಗೆ ಆಹಾರ ಹಾಕಿ ನೀರಿಡುತ್ತಿದ್ದಾರೆ.

ಇದೇ ಜಂಕ್ಷನ್‌ ಅಭಿವೃದ್ಧಿಗೆ ಹಲವು ತಿಂಗಳಿನಿಂದ ಕಾಮಗಾರಿ ಶುರುವಾಗಿದೆ. ಜಂಕ್ಷನ್ ಸೌಂದರ್ಯಕ್ಕೆ ಧಕ್ಕೆ ತರಬಹುದೆಂಬ ಕಾರಣಕ್ಕೆ ಗುತ್ತಿಗೆದಾರ, ಪಾರಿವಾಳಗಳು ಬರದಂತೆ ತಡೆಯಲು ಯೋಚಿಸಿದ್ದರು. ಪಾರಿವಾಳಗಳಿಗೆ ಆಹಾರ ಹಾಕದಂತೆ ಜನರಿಗೆ ಎಚ್ಚರಿಸಿದ್ದರು. ‘ಇಲ್ಲಿ ಪಾರಿವಾಳಗಳಿಗೆ ಆಹಾರ ಹಾಕಬೇಡಿ. ಹಾಕಿದ್ದಲ್ಲಿ ₹200 ದಂಡ ವಿಧಿಸಲಾಗುವುದು’ ಎಂಬ ಫಲಕಗಳನ್ನೂ ನೇತು ಹಾಕಿದ್ದರು.

ಯಾವುದೇ ಅಧಿಕಾರಿ ಸಹಿ ಇಲ್ಲದೇ ದಂಡದ ಬಗ್ಗೆ ಅನಧಿಕೃತವಾಗಿ ಫಲಕ ನಿಲ್ಲಿಸಿದ್ದಕ್ಕೆ ಪಕ್ಷಿಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಬಗ್ಗೆ ‘ಪ್ರಜಾವಾಣಿ’ಯ ಮಾರ್ಚ್ 23ರ ಸಂಚಿಕೆಯಲ್ಲಿ ‘ಪಾರಿವಾಳಕ್ಕೆ ಆಹಾರ ಹಾಕಿದ್ರೆ ₹ 200 ದಂಡ’ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ಇದರಿಂದ ಎಚ್ಚೆತ್ತ ಗುತ್ತಿಗೆದಾರ, ಫಲಕವನ್ನು ತೆರವು ಮಾಡಿದ್ದಾರೆ.

ದಂಡಕ್ಕೆ ಹೆದರಿದ್ದ ಕೆಲವರು, ಜಂಕ್ಷನ್‌ ಸಮೀಪದಲ್ಲಿರುವ ವಾಹನಗಳ ಪಾರ್ಕಿಂಗ್ ಜಾಗದಲ್ಲಿ ಆಹಾರ ಹಾಕುತ್ತಿದ್ದಾರೆ. ಹೀಗಾಗಿ, ಈ ಸ್ಥಳದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾರಿವಾಳಗಳು ಕೂರುತ್ತಿವೆ. 

‘ಜಂಕ್ಷನ್‌ನಲ್ಲಿ ಪಾರಿವಾಳಗಳ ಗುಂಪು ಸದಾ ಇರುತ್ತದೆ. ಆಟೊ ಚಾಲಕರು, ಬೈಕ್ ಸವಾರರು, ವೃದ್ಧರು, ಮಕ್ಕಳು ಆಹಾರ ತಂದು ಹಾಕುತ್ತಾರೆ. ಇದು ಒಳ್ಳೆಯ ಕೆಲಸ. ಆದರೆ, ಆಹಾರ ಹಾಕಿದವರಿಗೆ ದಂಡ ವಿಧಿಸುವುದಾಗಿ ಫಲಕ ಹಾಕಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ, ಫಲಕ ತೆಗೆದಿದ್ದಾರೆ’ ಎಂದು ಆಟೊ ಚಾಲಕರೊಬ್ಬರು ಹೇಳಿದರು.

ಜಂಕ್ಷನ್‌ನಲ್ಲಿ ಈ ಹಿಂದೆ ಹಾಕಿದ್ದ ದಂಡದ ಫಲಕ
ಜಂಕ್ಷನ್‌ನಲ್ಲಿ ಈ ಹಿಂದೆ ಹಾಕಿದ್ದ ದಂಡದ ಫಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT