ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Cafe Blast | ಆರೋಪಿ ಜೊತೆ ಶಂಕಿತರಿಗೆ ನಂಟು

ಬೆಂಗಳೂರು ಸ್ಫೋಟ: ಕೇಂದ್ರ ಕಾರಾಗೃಹದಲ್ಲಿ ಸಂದರ್ಶಕರ ಮಾಹಿತಿ ಸಂಗ್ರಹ
Published 4 ಮಾರ್ಚ್ 2024, 0:23 IST
Last Updated 4 ಮಾರ್ಚ್ 2024, 0:23 IST
ಅಕ್ಷರ ಗಾತ್ರ

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಬೆಂಗಳೂರಿನ ಪರಪ್ಪನ  ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಶಂಕಿತ ಉಗ್ರರ ಚಲನವಲನ ಹಾಗೂ ಅವರನ್ನು ಜೈಲಿನಲ್ಲಿ ಭೇಟಿಯಾಗಿದ್ದ ಸಂದರ್ಶಕರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಮಂಗಳೂರಿನ ನಾಗುರಿಯಲ್ಲಿ 2022ರ ನ. 19ರಂದು ನಡೆದಿದ್ದ ಕುಕ್ಕರ್ ಬಾಂಬ್‌ ಸ್ಫೋಟ ಹಾಗೂ ತಮಿಳುನಾಡಿನ ಕೊಯಮತ್ತೂರು ಕೊಟ್ಟಾಯ್ ಈಶ್ವರ ದೇವಸ್ಥಾನ ಬಳಿ 2022ರಲ್ಲಿ ನಡೆದಿದ್ದ ಕಾರು ಬಾಂಬ್ ಸ್ಫೋಟಕ್ಕೂ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಾಮ್ಯತೆ ಇರುವ ಬಗ್ಗೆ ತನಿಖಾ ತಂಡಗಳು ಅನುಮಾನ ವ್ಯಕ್ತಪಡಿಸಿವೆ.

ಕೆಫೆ ಸ್ಥಳದಲ್ಲಿ ಸಿಕ್ಕಿರುವ ಬಾಂಬ್ ಅವಶೇಷಗಳನ್ನು ಸಂಗ್ರಹಿಸಿರುವ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಪ್ರಾಥಮಿಕ ವರದಿಯನ್ನು ತನಿಖಾ ತಂಡಗಳ ಜೊತೆ ಹಂಚಿಕೊಂಡಿದ್ದಾರೆ. ಈ ಹಿಂದೆ ನಡೆದ ಸ್ಫೋಟ ಪ್ರಕರಣದ ತನಿಖೆ ಕೈಗೊಂಡಿದ್ದ ಅಧಿಕಾರಿಗಳು, ಪ್ರಾಥಮಿಕ ವರದಿ ಪರಿಶೀಲಿಸಿದ್ದಾರೆ. ‘ಹಳೆ ಬಾಂಬ್ ಸ್ಫೋಟ ಪ್ರಕರಣಕ್ಕೂ ಕೆಫೆ ಪ್ರಕರಣಗೂ ಸಾಮ್ಯ ಇದೆ’ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಜೈಲಿನಲ್ಲಿರುವ ಉಗ್ರರ ಬಗ್ಗೆ ಪರಿಶೀಲನೆ:

ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರೀಕ್, ಈತನಿಗೆ ಸಹಕಾರ ನೀಡಿದ್ದ ಶಂಕಿತ ಉಗ್ರರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಶಂಕಿತ ಉಗ್ರರು ಸಹ ಇದೇ ಜೈಲಿನಲ್ಲಿದ್ದಾರೆ. ಇವರೆಲ್ಲರ ಬಗ್ಗೆ ತನಿಖಾ ತಂಡಗಳು ಮಾಹಿತಿ ಕಲೆಹಾಕುತ್ತಿವೆ.

‘ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇರಿಸಿದ್ದ ಆರೋಪಿಗೂ, ಜೈಲಿನಲ್ಲಿರುವ ಶಂಕಿತ ಉಗ್ರರಿಗೂ ನಂಟಿರುವ ಬಗ್ಗೆ ಅನುಮಾನವಿದೆ. ಇದೇ ಆಯಾಮದಲ್ಲಿ ವಿಶೇಷ ತಂಡದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜೈಲಿನಲ್ಲಿರುವ ಶಂಕಿತ ಉಗ್ರರನ್ನು ಸಂದರ್ಶಕರ ರೂಪದಲ್ಲಿ ಯಾರೆಲ್ಲ ಭೇಟಿಯಾಗಿದ್ದಾರೆ? ಶಂಕಿತರನ್ನು ನ್ಯಾಯಾಲಯಕ್ಕೆ ಕರೆದೊಯ್ದು ವಾಪಸು ಕರೆತರುವ ಪೊಲೀಸರು ಯಾರು? ನ್ಯಾಯಾಲಯಕ್ಕೆ ಹೋಗಿ ಬರುವ ಸಂದರ್ಭದಲ್ಲಿ ಯಾರಾದರೂ ಭೇಟಿಯಾಗಿದ್ದಾರೆಯೇ ಎಂಬಿತ್ಯಾದಿ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಇಬ್ಬರ ತೀವ್ರ ವಿಚಾರಣೆ:

ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳು ಹಾಗೂ ಕೆಲ ತಾಂತ್ರಿಕ ಸುಳಿವು ಆಧರಿಸಿ ಇಬ್ಬರನ್ನು ತನಿಖಾ ತಂಡಗಳು ವಶಕ್ಕೆ ಪಡೆದಿವೆ. ಅವರಿಬ್ಬರನ್ನೂ ತನಿಖಾ ತಂಡದ ಅಧಿಕಾರಿಗಳು ಭಾನುವಾರ ತೀವ್ರ ವಿಚಾರಣೆಗೆ ಒಳಪಡಿಸಿದ್ದರೆಂದು ಗೊತ್ತಾಗಿದೆ.

‘ಬಾಂಬ್ ಸ್ಫೋಟದ ಬಗ್ಗೆ ಎಂಟು ಪ್ರತ್ಯೇಕ ತಂಡಗಳು ತನಿಖೆ ನಡೆಸುತ್ತಿವೆ. ಪ್ರತಿಯೊಂದು ತಂಡಗಳು ಹೊಸ ಹೊಸ ಮಾಹಿತಿ ಕಲೆಹಾಕುತ್ತಿವೆ. ಮಾಹಿತಿ ಆಧರಿಸಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಕೆಲವರನ್ನು ಅವರಿದ್ದ ಸ್ಥಳಕ್ಕೆ ಹೋಗಿ ಮಾತನಾಡಿಸಲಾಗುತ್ತಿದೆ. ಕೆಲವರನ್ನು ಕಚೇರಿಗೆ ಕರೆತಂದು ವಿಚಾರಣೆ ಮಾಡಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಕೆಫೆಯಲ್ಲಿ ಮಹಜರು:

ಸ್ಫೋಟ ಪ್ರಕರಣದ ತನಿಖಾಧಿಕಾರಿ ನೇತೃತ್ವದಲ್ಲಿ ರಾಮೇಶ್ವರ ಕೆಫೆಯಲ್ಲಿ ಭಾನುವಾರ ಮಹಜರು ಪ್ರಕ್ರಿಯೆ ನಡೆಯಿತು.

ಕೆಫೆಗೆ ಭೇಟಿ ನೀಡಿದ್ದ ತನಿಖಾಧಿಕಾರಿ ಹಾಗೂ ಸಿಬ್ಬಂದಿ, ವ್ಯವಸ್ಥಾಪಕ ಹಾಗೂ ಕೆಲಸಗಾರರ ಸಮ್ಮುಖದಲ್ಲಿ ಘಟನೆ ವಿವರ ದಾಖಲಿಸಿಕೊಂಡರು. ಕೆಫೆಗೆ ಬಂದಿದ್ದ ಶಂಕಿತನ ಚಲನವಲನಗಳ ಬಗ್ಗೆ ತನಿಖಾಧಿಕಾರಿ ಮಾಹಿತಿ ಪಡೆದರು. ಮಹಜರು ಪ್ರಕ್ರಿಯೆಯ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಕೊಂಡರು.

ತಮಿಳುನಾಡು ಪೊಲೀಸರ ಭೇಟಿ: ಕೊಯಮತ್ತೂರು ಕಾರು ಸ್ಫೋಟ ಪ್ರಕರಣದ ತನಿಖಾ ತಂಡದಲ್ಲಿದ್ದ ಪೊಲೀಸರು, ದಿ ರಾಮೇಶ್ವರಂ ಕೆಫೆಗೆ ಭಾನುವಾರ ಭೇಟಿ ನೀಡಿದರು. ಬಾಂಬ್ ನಿಷ್ಕ್ರಿಯ ದಳದ ಸಮೇತ ಬಂದಿದ್ದ ಪೊಲೀಸರು, ಸ್ಫೋಟ ಸಂಭವಿಸಿದ್ದ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.

ಕೆಫೆಯಲ್ಲಿ ಮಾರ್ಚ್ 1ರಂದು ನಡೆದ ಬಾಂಬ್ ಸ್ಫೋಟದ ಬಗ್ಗೆ ಎಚ್‌ಎಎಲ್‌ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ. ಇದರ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ. ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಹಾಗೂ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (ರಾ) ಅಧಿಕಾರಿಗಳು ಸಹ ತನಿಖೆಯಲ್ಲಿ ಭಾಗಿಯಾಗಿದ್ದಾರೆ.

‘ಸ್ಫೋಟ ಸಂಚು ವಿಫಲಗೊಳಿಸಿದ್ದ ಎನ್‌ಐಎ’

ಐಎಸ್ (ಇಸ್ಲಾಮಿಕ್‌ ಸ್ಟೇಟ್‌) ಭಯೋತ್ಪಾದನಾ ಸಂಘಟನೆ ಜೊತೆ ಒಡನಾಟವಿಟ್ಟುಕೊಂಡು ರಾಜ್ಯದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಬಳ್ಳಾರಿ ಹಾಗೂ ಬೆಂಗಳೂರಿನ ವ್ಯಕ್ತಿಗಳು ಸೇರಿ ಹಲವರನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಇತ್ತೀಚೆಗೆ ಬಂಧಿಸಿದ್ದರು. ಈ ಪ್ರಕರಣದ ಬಗ್ಗೆಯೂ ತನಿಖಾ ತಂಡಗಳು ಇದೀಗ ಮಾಹಿತಿ ಕಲೆಹಾಕುತ್ತಿವೆ. ‘ಬಳ್ಳಾರಿ ಬೆಂಗಳೂರು ಸೇರಿದಂತೆ ದೇಶದ 19 ಸ್ಥಳಗಳಲ್ಲಿ ಎನ್‌ಐಎ ವಿಶೇಷ ಕಾರ್ಯಾಚರಣೆ ನಡೆಸಿತ್ತು. ಬಳ್ಳಾರಿಯ ಮಿನಾಜ್ ಅಲಿಯಾಸ್ ಮೊಹಮ್ಮದ್ ಸುಲೈಮಾನ್ ಸೈಯದ್ ಸಮೀರ್ ಬೆಂಗಳೂರಿನ ಮೊಹಮ್ಮದ್ ಮುನಿರುದ್ದಿನ್ ಸೈಯದ್ ಸಮೀವುಲ್ಲಾ ಮೊಹಮ್ಮದ್ ಮುಜಮ್ಮಿಲ್‌ ಮುಂಬೈನ ಅನಸ್ ಇಕ್ಬಾಲ್ ಶೇಖ್ ದೆಹಲಿಯ ಶಿಯಾನ್ ರಹಮಾನ್ ಅಲಿಯಾಸ್ ಹುಸೇನ್ ಜಾರ್ಖಂಡ್‌ನ ಮೊಹಮ್ಮದ್ ಶಹಬಾಜ್ ಅಲಿಯಾಸ್ ಜುಲ್ಫಿಕರ್ ಅಲಿಯಾಸ್ ಗುಡ್ಡುನನ್ನು ಸೆರೆ ಹಿಡಿದಿತ್ತು. ಕಚ್ಚಾ ಬಾಂಬ್ ತಯಾರಿಸಲು ಸಂಗ್ರಹಿಸಿಟ್ಟಿದ್ದ ಸಲ್ಫರ್ ಪೊಟ್ಯಾಶಿಯಂ ನೈಟ್ರೇಟ್ ಗನ್ ಪೌಡರ್ ಇದ್ದಿಲು ಎಥೆನಾಲ್ ಚೂಪಾದ ಆಯುಧಗಳು ಎಲೆಕ್ಟ್ರಾನಿಕ್ ಉಪಕರಣಗಳು ಸ್ಮಾರ್ಟ್ ವಾಚ್‌ಗಳು ನಗದು ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಶಾರೀಕ್ ಮನೆಯಲ್ಲಿದ್ದ ಸಾಮಗ್ರಿಗೆ ಹೋಲಿಕೆ: ಅಲ್‌ ಹಿಂದ್ ಶಂಕೆ

‘ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್‌ನ ಮೈಸೂರಿನ ಮನೆಯಲ್ಲಿ ನಟ್‌ ಬೋಲ್ಟ್‌ಗಳು ಮೊಬೈಲ್ ಸರ್ಕಿಟ್‌ಗಳು ಬ್ಯಾಟರಿ ಮೆಕ್ಯಾನಿಕಲ್ ಟೈಮರ್ ಮೊಬೈಲ್ ಡಿಸ್‌ಪ್ಲೇ ಟೈಮರ್ ಸಿಮ್ ಕಾರ್ಡ್‌ಗಳು ಶಾರೀಕ್ ಮನೆಯಲ್ಲಿ ಸಿಕ್ಕಿದ್ದವು. ಕೆಫೆ ಸ್ಥಳದಲ್ಲೂ ಬ್ಯಾಟರಿ ಟೈಮರ್ ನಟ್ ಬೋಲ್ಟ್‌ ಹಾಗೂ ಟೈಮರ್ ಸಿಕ್ಕಿದ್ದವು. ಇದರಲ್ಲಿ ಕೆಲ ವಸ್ತುಗಳು ಕೆಫೆ ಸ್ಫೋಟದ ಅವಶೇಷಗಳಿಗೆ ಹೋಲಿಕೆಯಾಗುತ್ತಿವೆ’ ಎಂದು ತಿಳಿಸಿವೆ. ‘ತಮಿಳುನಾಡು ಹಾಗೂ ಕರ್ನಾಟಕದಲ್ಲಿ ‘ಅಲ್‌ ಹಿಂದ್’ ಹೆಸರಿನಲ್ಲಿ ಸಂಘಟಿತರಾಗಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದ ಮೂವರ ವಿರುದ್ಧ ಎನ್‌ಐಎ ಅಧಿಕಾರಿಗಳು ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದೇ ಅಲ್‌ ಹಿಂದ್ ತಂಡದ ಮೇಲೆಯೂ ಅನುಮಾನವಿದೆ’ ಎಂದು ಹೇಳಿವೆ.

‘ಸುಳಿವು ಪತ್ತೆ: ಆರೋಪಿ ಬಂಧನ ಶೀಘ್ರ’

‘ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಬಗ್ಗೆ ಕೆಲ ಸುಳಿವುಗಳು ಲಭ್ಯವಾಗಿದ್ದು ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು. ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘ಬಾಂಬ್ ಸ್ಫೋಟ ಪ್ರಕರಣದ ತನಿಖೆ ಪ್ರಗತಿ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ’ ಎಂದರು. ‘ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಎನ್‌ಎಸ್‌ಜಿ (ರಾಷ್ಟ್ರೀಯ ಭದ್ರತಾ ಸಿಬ್ಬಂದಿ) ಅಧಿಕಾರಿಗಳು ತಮ್ಮದೇ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡು ಆರೋಪಿಯನ್ನು ಪತ್ತೆ ಹಚ್ಚುತ್ತೇವೆ. ನಗರದ ಜನತೆ ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT