ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಕಟ್ಟಡ ತ್ಯಾಜ್ಯ; ಸ್ಥಳದಲ್ಲೇ ಸಂಗ್ರಹ

ಬಹುವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗೆ ಬಿಎಸ್‌ಡಬ್ಲ್ಯುಎಂಎಲ್‌ ಪರಿಹಾರ
Published : 3 ಆಗಸ್ಟ್ 2024, 0:30 IST
Last Updated : 3 ಆಗಸ್ಟ್ 2024, 0:30 IST
ಫಾಲೋ ಮಾಡಿ
Comments

ಬೆಂಗಳೂರು: ನಗರದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿಯ ಸಮಸ್ಯೆ ನಿವಾರಿಸಲು ಬೆಂಗಳೂರು  ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್‌ (ಬಿಎಸ್‌ಡಬ್ಲ್ಯುಎಂಎಲ್‌) ನಿರ್ಧರಿಸಿದ್ದು, ಕಟ್ಟಡ ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳದಿಂದಲೇ (ಡೋರ್‌ ಟು ಡೋರ್‌) ಸಂಗ್ರಹಿಸುವ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.

ರಸ್ತೆಗಳು ಹಾಗೂ ತೆರೆದ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಹಾಗೂ ಭಗ್ನಾವಶೇಷಗಳ (ಸಿ ಆ್ಯಂಡ್‌ ಡಿ) ತ್ಯಾಜ್ಯವನ್ನು ಅನಧಿಕೃತವಾಗಿ ವಿಲೇವಾರಿ ಮಾಡುತ್ತಿರುವುದನ್ನು ನಿಯಂತ್ರಿಸುವುದು ಬಿಬಿಎಂಪಿಗೆ ಸವಾಲಾಗಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಿಎಸ್‌ಡಬ್ಲ್ಯುಎಂಎಲ್‌ ವತಿಯಿಂದ ಸಾರ್ವಜನಿಕ–ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಯೋಜನೆ ರೂಪಿಸಲಾಗಿದೆ.

ಬಿಎಸ್‌ಡಬ್ಲ್ಯುಎಂಎಲ್‌ ಈ ಯೋಜನೆಯಲ್ಲಿ ಯಾವುದೇ ರೀತಿಯ ಹಣವನ್ನು ವಿನಿಯೋಗಿಸುವುದಿಲ್ಲ.
ಈ ಸೌಲಭ್ಯವನ್ನು ಬಳಸಿಕೊಳ್ಳುವ ಸಾರ್ವಜನಿಕರು ಪಾವತಿಸುವ ಶುಲ್ಕದಲ್ಲಿ ಸಾಗಾಣಿಕೆ ಗುತ್ತಿಗೆದಾರರಿಗೆ ಟೆಂಡರ್‌ನಲ್ಲಿ ಬಿಡ್‌ ಮಾಡಲಾದ ದರಕ್ಕೆ ಅನುಗುಣವಾಗಿ ಟಿಪ್ಪಿಂಗ್‌ ಶುಲ್ಕವನ್ನು ನೀಡುತ್ತದೆ. ಕಟ್ಟಡ ತ್ಯಾಜ್ಯವನ್ನು ಸಂಗ್ರಹಿಸುವ ಗುತ್ತಿಗೆದಾರರು ಎರಡನೇ ವರ್ಗಾವಣೆ ಕೇಂದ್ರಕ್ಕೆ ಅದನ್ನು ವರ್ಗಾಯಿಸಿ, ಅಲ್ಲಿಂದ ದೊಡ್ಡ ಟ್ರಕ್‌ಗಳ ಮೂಲಕ ನಗರದ ನಾಲ್ಕು ಭಾಗಗಳಲ್ಲಿ ಸ್ಥಾಪಿಸುವ  ಸಂಸ್ಕರಣೆ ಘಟಕಕ್ಕೆ ಸಾಗಿಸುತ್ತಾರೆ. ಆ ಬಳಿಕ ವಿಲೇವಾರಿ ಮಾಡಲಾಗುತ್ತದೆ.

ವಿಧಾನಸಭೆ ಕ್ಷೇತ್ರಕ್ಕೊಂದು ಪ್ರಾಥಮಿಕ, ಎರಡನೇ ಹಂತದ ವರ್ಗಾವಣೆ ಕೇಂದ್ರ (ಟ್ರಾನ್ಸ್‌ಫರ್‌ ಸ್ಟೇಷನ್‌) ಸ್ಥಾಪಿಸಲಾಗುತ್ತದೆ. ಪ್ರತಿ ಕೇಂದ್ರಕ್ಕೆ ಸುಮಾರು ಅರ್ಧ ಎಕರೆ ಜಮೀನು ಅಗತ್ಯವಿದೆ. ಪಾಲಿಕೆಯಲ್ಲಿ ಲಭ್ಯವಿರುವ ಜಾಗವನ್ನು ಇದಕ್ಕಾಗಿ ನೀಡಲಾಗುತ್ತದೆ. ಜಮೀನು ಲಭ್ಯವಿಲ್ಲದಿದ್ದರೆ ಗುತ್ತಿಗೆದಾರರು ಬಾಡಿಗೆಗೆ ಜಾಗವನ್ನು ಪಡೆದುಕೊಳ್ಳಬಹುದು.

ವರ್ಗಾವಣೆ ಕೇಂದ್ರಗಳಲ್ಲಿನ ಮೂಲಸೌಕರ್ಯ, ಯಂತ್ರೋಪಕರಣಗಳನ್ನು ಗುತ್ತಿಗೆದಾರರೇ ಅಳವಡಿಸಿಕೊಳ್ಳಲಿದ್ದಾರೆ. ಈ ಕೇಂದ್ರಗಳಿಂದ 20 ಟನ್‌ ಸಾಮರ್ಥ್ಯದ ಟ್ರಕ್‌ಗಳಿಂದ ಕಟ್ಟಡ ತ್ಯಾಜ್ಯವನ್ನು ಸಂಸ್ಕರಣಾ ಘಟಕಗಳಿಗೆ ರವಾನಿಸಲಾಗುತ್ತದೆ.

ಬನ್ನೇರುಘಟ್ಟ ಪ್ರದೇಶದಲ್ಲಿ ಎರಡು, ಕುಂಬಳಗೋಡು, ಯರಪ್ಪನ ಪಾಳ್ಯನಲ್ಲಿ ತಲಾ 500 ಟನ್‌ ಸಾಮರ್ಥ್ಯದ ಸಂಸ್ಕರಣೆ ಘಟಕ ಹಾಗೂ ಉಲ್ಲಾಳುವಿನಲ್ಲಿ 1,000 ಟನ್‌ ಸಾಮರ್ಥ್ಯದ ಸಂಸ್ಕರಣೆ ಘಟಕವನ್ನು ಸ್ಥಾಪಿಸಲು ಆಲೋಚಿಸಲಾಗಿದೆ. ಕ್ವಾರಿ ಹಾಗೂ ಇತರೆ ಪ್ರದೇಶಗಳನ್ನು ಈ ಘಟಕಗಳಿಗೆ ನೀಡಲಾಗುತ್ತಿದೆ.

ಸಾಗಣೆ ಸೌಲಭ್ಯ: ‘ಕಣ್ಣೂರು ಹಾಗೂ ಚಿಕ್ಕಜಾಲದಲ್ಲಿರುವ 1,750 ಟನ್‌ ಸಂಸ್ಕರಣಾ ಘಟಕಕ್ಕೆ ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಲೂ ಬಿಎಸ್‌ಡಬ್ಲ್ಯುಎಂಎಲ್‌ ಗುತ್ತಿಗೆದಾರರನ್ನು ನಿಯೋಜಿಸುತ್ತಿದೆ. ಪ್ರಾಥಮಿಕ ಹಾಗೂ ಎರಡನೇ  ವರ್ಗಾವಣೆ ಕೇಂದ್ರಗಳಿಂದ ಕಟ್ಟಡ ತ್ಯಾಜ್ಯವನ್ನು ಪ್ರತಿ ನಿತ್ಯ ಅವರು ಸಂಸ್ಕರಣಾ ಘಟಕಗಳಿಗೆ ವಿಲೇವಾರಿ ಮಾಡಬೇಕು. ಇದಕ್ಕೂ ಟಿಪ್ಪಿಂಗ್‌ ಶುಲ್ಕವನ್ನು ಮಾತ್ರ ನೀಡಲಾಗುತ್ತದೆ. ಅವರೇ ಸ್ಥಾಪಿಸುವ ಘಟಕಗಳ ವೆಚ್ಚ ಸುಮಾರು ₹54.83 ಕೋಟಿಯಷ್ಟಾಗಲಿದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಕಬಾಡೆ ತಿಳಿಸಿದರು.

ಶುಲ್ಕ ಪಾವತಿ ಆನ್‌ಲೈನ್‌: ಬಸವರಾಜ್‌

‘ಕಟ್ಟಡ ತ್ಯಾಜ್ಯವನ್ನು ವಿಲೇವಾರಿ ಮಾಡಲು ನಾಗರಿಕರು ಪಾಲಿಕೆ ಒದಗಿಸುವ ದೂರವಾಣಿಗೆ ಕರೆ ಮಾಡಬೇಕು. ಗುತ್ತಿಗೆದಾರರು ಸ್ಥಳಕ್ಕೆ ಬಂದು ಅದರ ತೂಕ ನಿರ್ಧರಿಸುತ್ತಾರೆ. ಅದರಂತೆ ಆನ್‌ಲೈನ್‌ ಅಥವಾ ಚಲನ್‌ ಮೂಲಕ ನಾಗರಿಕರು ಪಾಲಿಕೆಗೆ ಶುಲ್ಕ ಪಾವತಿ ಮಾಡಿದ ಮೇಲೆ, ಗುತ್ತಿಗೆದಾರರು ಕಟ್ಟಡ ತ್ಯಾಜ್ಯವನ್ನು ಕೊಂಡೊಯ್ಯುತ್ತಾರೆ. 20 ಟನ್‌ವರೆಗೆ ಈ ಸೌಲಭ್ಯ ಲಭ್ಯವಿರಲಿದ್ದು, ಹೆಚ್ಚಿನ ಕಟ್ಟಡ ತ್ಯಾಜ್ಯ ವಿಲೇವಾರಿಗೆ ವರ್ಗಾವಣೆ ಕೇಂದ್ರದಲ್ಲೇ ಅವಕಾಶ ಮಾಡಿಕೊಡಲಾಗುತ್ತದೆ’ ಎಂದು ಬಿಎಸ್‌ಡಬ್ಲ್ಯು
ಎಂಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ ಕಬಾಡೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT