ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಉಪನಗರ ರೈಲು ಯೋಜನೆ: ಪ್ರಧಾನಿ ಶೀಘ್ರ ಶಂಕುಸ್ಥಾಪನೆ

ಬೆಂಗಳೂರು ಉಪನಗರ ರೈಲು ಯೋಜನೆಯ ಕಾಮಗಾರಿ 3 ತಿಂಗಳಲ್ಲಿ ಆರಂಭ
Last Updated 24 ಜೂನ್ 2021, 20:50 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ ಕಾಮಗಾರಿಗೆ ಮೂರು ತಿಂಗಳಲ್ಲಿ ಚಾಲನೆ ನೀಡಲಿದ್ದು, ಇದರ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದ ಕಂಟೋನ್ಮೆಂಟ್‌ ನಿಲ್ದಾಣದಿಂದ ಹೀಲಲಿಗೆ ನಡುವೆ ಸಂಚರಿಸಿ ಬೆಂಗಳೂರು ಉಪನಗರ ರೈಲು ಯೋಜನೆ ಮತ್ತು ರೈಲ್ವೆ ಮಾರ್ಗ ದ್ವಿಪಥ ಯೋಜನೆಗಳ ಪ್ರಗತಿ ಪರಿಶೀಲನೆ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಬೆಂಗಳೂರು ನಗರದ ಹೊರವಲಯದ ಉಪನಗರಗಳು ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಾರಿಗೆ ಸಂಪರ್ಕ ಸುಲಭವಾಗಲಿದೆ. ನಗರದ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯೂ ಇದೆ ಎಂದು ಹೇಳಿದರು.

ಈ ಯೋಜನೆಯ ವೆಚ್ಚ ₹15,767 ಕೋಟಿ ಆಗಲಿದ್ದು ಕೇಂದ್ರ, ರಾಜ್ಯ ಮತ್ತು ಬಾಹ್ಯ ಹಣಕಾಸು ಸಂಸ್ಥೆಗಳ ಮೂಲಕ 20:20:60 ಅನುಪಾತದಲ್ಲಿ ಇದಕ್ಕೆ ಬಂಡವಾಳ ತೊಡಗಿಸಲಾಗುವುದು. 2020–21 ನೇ ಸಾಲಿಗೆ ರಾಜ್ಯ ಸರ್ಕಾರ ₹400 ಕೋಟಿ ಈ ಯೋಜನೆಗೆ ಮೀಸಲಿಟ್ಟಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರದ ರೈಲ್ವೆ ಸಚಿವಾಲಯದ ಜಂಟಿ ಮಾಲೀಕತ್ವದ ಕೆ-ರೈಡ್ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ಬೈಯ್ಯಪ್ಪನಹಳ್ಳಿ–ರಾಜಾನುಕುಂಟೆ ಮತ್ತು ಯಶವಂತಪುರ– ಹೊಸೂರು ರಸ್ತೆ ಸಂಪರ್ಕಿಸುವ ರೈಲ್ವೆ ಮಾರ್ಗಗಳ ದ್ವಿಪಥ ಕೆಲಸಕ್ಕಾಗಿ 2020–21 ನೇ ಸಾಲಿಗೆ ₹65 ಕೋಟಿ ಅನುದಾನ ಒದಗಿಸಲಾಗಿದೆ. ಕಾಲಮಿತಿಯಲ್ಲಿ ಅಂದರೆ 2023 ಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಕೇಂದ್ರದಲ್ಲಿ ಬಿಜೆಪಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದು ಏನು ಮಾಡುತ್ತಿದೆ ಎಂದು ಕಾಂಗ್ರೆಸ್‌ ಪಕ್ಷ ಟೀಕೆ ಮಾಡುತ್ತಿದೆ. ಇಲ್ಲಿಗೆ ಬಂದು ಆಗುತ್ತಿರುವ ಕೆಲಸಗಳನ್ನು ನೋಡಲಿ, ಇವು ಕೇಂದ್ರದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಯೋಜನೆಗಳು ಎಂದರು.

ನಾಲ್ಕು ಕಾರಿಡಾರ್‌ಗಳ ಯೋಜನೆ

ಒಟ್ಟು 148 ಕಿ.ಮೀ ಉದ್ದದ ಈ ಯೋಜನೆ ನಾಲ್ಕು ಕಾರಿಡಾರ್‌ಗಳನ್ನು ಹೊಂದಿದೆ. ಕೆ.ಎಸ್‌.ಆರ್‌ ಬೆಂಗಳೂರು ನಗರ– ದೇವನಹಳ್ಳಿ(ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ) ಇದರ ಉದ್ದ 41.40 ಕಿ.ಮೀ. ಬೈಯಪ್ಪನಹಳ್ಳಿ–ಚಿಕ್ಕಬಾಣಾವರ(25 ಕಿ.ಮೀ), ಕೆಂಗೇರಿ– ವೈಟ್‌ಫೀಲ್ಡ್‌(35.52 ಕಿ.ಮೀ), ಹೀಲಲಿಗೆ(ಚಂದಾಪುರ)– ರಾಜಾನುಕುಂಟೆ(46.24 ಕಿ.ಮೀ). ಈ ಪೈಕಿ ಬೈಯಪ್ಪನಹಳ್ಳಿ–ಚಿಕ್ಕಬಾಣಾವರ ಮತ್ತು ಹೀಲಲಿಗೆ(ಚಂದಾಪುರ)–ರಾಜಾನುಕುಂಟೆ ಕಾರಿಡಾರ್‌ಗಳ ಕಾಮಗಾರಿಯನ್ನು ಮೊದಲಿಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ದ್ವಿಪಥ ಮಾರ್ಗ: ₹ 499 ಕೋಟಿ

ಬೈಯಪ್ಪನಹಳ್ಳಿ- ಹೊಸೂರು ನಡುವಿನ 48 ಕಿ.ಮೀ. ರೈಲು ಮಾರ್ಗ ದ್ವಿಪಥ ಯೋಜನೆಯನ್ನು ₹ 499 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ₹ 250 ಕೋಟಿ ವೆಚ್ಚ ಭರಿಸಲಿದೆ ಎಂದು ಅವರು ವಿವರಿಸಿದರು.

2020- 21ರಲ್ಲಿ ರಾಜ್ಯ ಸರ್ಕಾರವು ಇದಕ್ಕಾಗಿ ₹65 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಯೋಜನೆಯು 2020ರ ಅಕ್ಟೋಬರ್‌ನಲ್ಲಿ ಪ್ರಾರಂಭವಾಗಿದ್ದು, 2023ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಯಡಿಯೂರಪ್ಪ ಹೇಳಿದರು.

ಯಶವಂತಪುರ- ಚನ್ನಸಂದ್ರ ನಡುವಣ 22 ಕಿ.ಮೀ. ಮಾರ್ಗದ ದ್ವಿಪಥ ಯೋಜನೆಗೆ ಒಟ್ಟು ₹ 315 ಕೋಟಿ ವೆಚ್ಚವಾಗಲಿದ್ದು, ರಾಜ್ಯ ₹157 ಕೋಟಿ ಭರಿಸಲಿದೆ. ಕಳೆದ ಆರ್ಥಿಕ ವರ್ಷ ₹35 ಕೋಟಿ ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT