ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅವ್ಯವಸ್ಥೆಯ ಆಗರಗಳಾದ ತಾಲ್ಲೂಕು ಕಚೇರಿಗಳು

* ಲೋಕಾಯುಕ್ತ ದಾಳಿಯಲ್ಲಿ ಬಹಿರಂಗ * ಮಧ್ಯವರ್ತಿಗಳ ಹಾವಳಿ– ಅಧಿಕಾರಿಗಳ ಗೈರು
ಪ್ರಜ್ವಲ್ ಡಿಸೋಜ
Published 4 ಫೆಬ್ರುವರಿ 2024, 23:42 IST
Last Updated 4 ಫೆಬ್ರುವರಿ 2024, 23:42 IST
ಅಕ್ಷರ ಗಾತ್ರ

ಬೆಂಗಳೂರು: ಅನುಮತಿ ಇಲ್ಲದೇ ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗುವುದು, ಭಾರಿ ಸಂಖ್ಯೆಯ ಕಡತಗಳ ಬಾಕಿ, ಕಡತ ನಿರ್ವಹಣೆಯಲ್ಲಿ ಲೋಪ, ಮಧ್ಯವರ್ತಿಗಳ ಹಾವಳಿ ಸೇರಿದಂತೆ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ತಾಲ್ಲೂಕು ಕಚೇರಿಗಳು ಅವ್ಯವಸ್ಥೆಯ ಆಗರಗಳಾಗಿವೆ ಎಂಬುದನ್ನು ಲೋಕಾಯುಕ್ತದ ಅಧಿಕಾರಿಗಳ ತಪಾಸಣಾ ವರದಿ ಬಹಿರಂಗಪಡಿಸಿದೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂಬತ್ತು ತಾಲ್ಲೂಕು ಕಚೇರಿಗಳ ಮೇಲೆ ಜನವರಿ 20ರಂದು ಏಕಕಾಲಕ್ಕೆ ದಾಳಿ ಮಾಡಿದ್ದ ಲೋಕಾಯುಕ್ತದ ಪೊಲೀಸ್‌ ಹಾಗೂ ನ್ಯಾಯಾಂಗ ವಿಭಾಗಗಳ ಅಧಿಕಾರಿಗಳು ಶೋಧ ನಡೆಸಿದ್ದರು. ಬೆಂಗಳೂರು ನಗರ ಜಿಲ್ಲೆಯ ಐದು ತಾಲ್ಲೂಕು ಕಚೇರಿಗಳಲ್ಲಿ ಕಂಡುಬಂದ ಅಂಶಗಳ ಕುರಿತು ತನಿಖಾ ತಂಡಗಳು ಸಲ್ಲಿಸಿರುವ ಪ್ರಾಥಮಿಕ ವರದಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಯಲಹಂಕ ತಾಲ್ಲೂಕು ಕಚೇರಿಯಲ್ಲಿ 43 ಅಧಿಕಾರಿಗಳು, ಸಿಬ್ಬಂದಿ ಅನುಮತಿ ಇಲ್ಲದೇ ಹೊರ ಹೋಗಿದ್ದರು. ಅವರು ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವುದು ಪತ್ತೆಯಾಗಿದೆ. ಅಲ್ಲಿ 44 ಕಡತಗಳು ಒಂದರಿಂದ ನಾಲ್ಕು ತಿಂಗಳವರೆಗೆ ಬಾಕಿ ಇದ್ದರೆ, 16 ಕಡತಗಳು ಹಲವು ತಿಂಗಳಿಂದ ವಿಲೇವಾರಿ ಆಗದಿರುವುದು ಕಂಡುಬಂದಿದೆ’ ಎಂಬ ಉಲ್ಲೇಖ ವರದಿಯಲ್ಲಿದೆ.

‘2023ರ ಜುಲೈ 15ಕ್ಕೂ ಮೊದಲು ಸ್ವೀಕರಿಸಿದ್ದ ಅರ್ಜಿಗಳ ಸ್ವೀಕೃತಿಗೆ ಸಂಬಂಧಿಸಿದ ಕಡತವೇ ನಾಪತ್ತೆಯಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ಇನ್ನೂ ಎಫ್‌ಐಆರ್‌ ದಾಖಲಿಸಿಲ್ಲ. ಜುಲೈ 15ರ ನಂತರ ಅರ್ಜಿಗಳ ಸ್ವೀಕೃತಿಗೆ ಸಂಬಂಧಿಸಿದ ಮಾಹಿತಿಯನ್ನೂ ಸಮರ್ಪಕವಾಗಿ ದಾಖಲಿಸಿಲ್ಲ’ ಎಂದು ತನಿಖಾ ತಂಡ ಹೇಳಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕು ಕಚೇರಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ 1,281 ಅರ್ಜಿಗಳನ್ನು ವಿಲೇವಾರಿ ಮಾಡದೇ ಬಾಕಿ ಉಳಿಸಿಕೊಳ್ಳಲಾಗಿದೆ. ಕಚೇರಿಯಲ್ಲಿದ್ದ 31 ಅಧಿಕಾರಿಗಳು, ಸಿಬ್ಬಂದಿ ಪೈಕಿ 19 ಮಂದಿ ಮಾತ್ರ ನಗದು ಘೋಷಿಸಿಕೊಂಡಿದ್ದರು.

ಮಧ್ಯವರ್ತಿಗಳ ಹಾವಳಿ: ಆನೇಕಲ್‌ ತಾಲ್ಲೂಕು ಕಚೇರಿಯಲ್ಲಿ ಮಧ್ಯವರ್ತಿಗಳು ಇದ್ದರು. ಅವರು ಮೊಬೈಲ್‌ ಬಳಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದದು ಪತ್ತೆಯಾಗಿದೆ. ತಹಶೀಲ್ದಾರ್‌ ಹೆಸರೇ ಹಾಜರಾತಿ ಕಡತದಲ್ಲಿ ಇರಲಿಲ್ಲ. ಗ್ರೇಡ್‌–2 ತಹಶೀಲ್ದಾರ್‌ ಜನವರಿ ತಿಂಗಳಲ್ಲಿ 20ವರೆಗೂ ಹಾಜರಾತಿ ಕಡತಕ್ಕೆ ಸಹಿ ಮಾಡಿಲ್ಲ. ಕೆಲವು ಅಧಿಕಾರಿಗಳು, ಸಿಬ್ಬಂದಿಯೂ ಸಹಿ ಮಾಡಿರಲಿಲ್ಲ ಎಂದು ವರದಿ ಹೇಳಿದೆ.

2023ರ ಡಿಸೆಂಬರ್‌ ಅಂತ್ಯಕ್ಕೆ 3,119 ಅರ್ಜಿಗಳು ತಾಲ್ಲೂಕು ಕಚೇರಿಯಲ್ಲಿ ಬಾಕಿ ಇದ್ದವು. ಈ ಸಂಬಂಧ ನೋಟಿಸ್‌ ಕೂಡ ನೀಡದಿರುವುದು ಕಂಡುಬಂದಿದೆ ಎಂದು ತನಿಖಾ ತಂಡ ತಿಳಿಸಿದೆ.

ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿಯಲ್ಲಿ ಪಹಣಿ ತಿದ್ದುಪಡಿಗೆ ಸಂಬಂಧಿಸಿದ 530 ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದವು. ಕೆಲವು ಅರ್ಜಿಗಳು ಮೂರರಿಂದ ಆರು ತಿಂಗಳ ಹಿಂದಿನವು. 2023ರ ಜುಲೈ 18ರಂದು ಸಲ್ಲಿಕೆಯಾಗಿದ್ದ ಅರ್ಜಿ ಕೂಡ ಬಾಕಿ ಇದೆ ಎಂಬ ಉಲ್ಲೇಖ ವರದಿಯಲ್ಲಿದೆ.

ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆಗೆ ತೆರಳಿದ್ದ ಅವಧಿಯಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ಗ್ರೇಡ್‌–2 ತಹಶೀಲ್ದಾರ್‌ ಕಚೇರಿಯಲ್ಲಿ ಇರಲಿಲ್ಲ. ‘ಮೂವ್‌ಮೆಂಟ್‌ ವಹಿ’ಯಲ್ಲಿ ಈ ಬಗ್ಗೆ ಉಲ್ಲೇಖವಿರಲಿಲ್ಲ. ಹಲವು ಸಿಬ್ಬಂದಿ ಹಾಜರಾತಿ ಕಡತಕ್ಕೆ ಸಹಿ ಮಾಡಿರಲಿಲ್ಲ, ನಗದನ್ನೂ ಘೋಷಿಸಿಕೊಂಡಿರಲಿಲ್ಲ ಎಂದು ತನಿಖಾ ತಂಡ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT