ಬೆಂಗಳೂರು: ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ಬಳಿ ಲಾರಿಯ ಚಕ್ರ ತಲೆ ಮೇಲೆ ಹರಿದು ಅನುಷಾ (29) ಎಂಬುವವರು ಸ್ಥಳದಲ್ಲೇ ಮೃತ ಪಟ್ಟಿದ್ದು, ಅಪಘಾತ ದಿಂದ ರೊಚ್ಚಿಗೆದ್ದ ಜನ ಲಾರಿ ಮೇಲೆ ಕಲ್ಲು ತೂರಾಟ ನಡೆಸಿದರು.
ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
‘ಮಂಡ್ಯ ಜಿಲ್ಲೆಯ ಅನುಷಾ, ನಗರದ ಅತ್ತಿಗುಪ್ಪೆಯಲ್ಲಿರುವ ಪ್ಲೈವುಡ್ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡು ತ್ತಿದ್ದರು. ಭಾನುವಾರ ರಜೆ ಇದ್ದಿದ್ದರಿಂದ, ತಾಯಿ ವನಜಾಕ್ಷಿ ಹಾಗೂ 7 ವರ್ಷದ ಮಗನ ಜೊತೆ ರಾಜರಾಜೇಶ್ವರಿನಗರದ ಗೋಪಾಲನ್ ಆರ್ಕೇಡ್ ಮಾಲ್‌ಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಬ್ಯಾಟರಾ ಯನಪುರ ಸಂಚಾರ ಪೊಲೀಸರು ತಿಳಿಸಿದರು.
‘ಅಪಘಾತದಲ್ಲಿ ವನಜಾಕ್ಷಿ ಅವರ ಕಾಲುಗಳ ಮೇಲೆ ಲಾರಿ ಚಕ್ರ ಹರಿದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗನಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಹೇಳಿದರು.
ದ್ವಿಚಕ್ರ ವಾಹನಕ್ಕೆ ಗುದ್ದಿ ಬಸ್‌ಗೆ ಡಿಕ್ಕಿ: ಅನುಷಾ ಅವರು ದೀಪಾಂಜಲಿನಗರ ಕಡೆಯಿಂದ ನಾಯಂಡಹಳ್ಳಿ ಜಂಕ್ಷನ್ ಮೂಲಕ ರಾಜರಾಜೇಶ್ವರಿನಗರ ಕಡೆ ಹೊರಟಿದ್ದರು.
‘ಮಧ್ಯಾಹ್ನ 2.45ರ ಸುಮಾರಿಗೆ ನಾಯಂಡಹಳ್ಳಿ ಮೇಲ್ಸೇತುವೆ ಇಳಿಯು ತ್ತಿದ್ದಂತೆ ಪಂತರಪಾಳ್ಯ ಬಳಿ ಅತೀ ವೇಗವಾಗಿ ಬಂದಿದ್ದ ಲಾರಿ ದ್ವಿಚಕ್ರ ವಾಹನಕ್ಕೆ ಗುದ್ದಿತ್ತು. ಈ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ ಮಗ ರಸ್ತೆಬದಿಗೆ ಬಿದ್ದಿದ್ದ. ಅನುಷಾ ಹಾಗೂ ವನಜಾಕ್ಷಿ ರಸ್ತೆ ಮೇಲೆ ಬಿದ್ದಿದ್ದರು. ಅನುಷಾ ತಲೆ ಮೇಲೆ ಹರಿದು ಹೋಗಿದ್ದ ಲಾರಿಯ ಚಕ್ರ, ವನಜಾಕ್ಷಿ ಕಾಲಿನ ಮೇಲೂ ಹರಿದಿತ್ತು. ತಲೆ ಭಾಗ ಛಿದ್ರವಾಗಿ ಅನುಷಾ ಮೃತಪಟ್ಟರು. ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಚಾಲಕ, ಅವಸರದಲ್ಲಿ ಲಾರಿ ಚಲಾಯಿಸಿ ಎದುರಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದ್ದ. ಸ್ಥಳದಲ್ಲಿ ಲಾರಿ ನಿಂತುಕೊಂಡಿತ್ತು. ಜನ ಸೇರುತ್ತಿದ್ದಂತೆ ಚಾಲಕ ಓಡಿಹೋಗಿದ್ದಾನೆ.
ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೂ ಗಾಯಗಳಾಗಿವೆ’ ಎಂದರು. ‘ಲಾರಿಯಲ್ಲಿ ಸಿಮೆಂಟ್ ಚೀಲಗಳನ್ನು ಸಾಗಿಸಲಾಗುತ್ತಿತ್ತು. ಲಾರಿ ಜಪ್ತಿ ಮಾಡಲಾಗಿದೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ, ಆತನಿಗೆ ಶೋಧ ನಡೆದಿದೆ’ ಎಂದು ತಿಳಿಸಿದರು.
ಪ್ರತಿಭಟನೆ, ದಟ್ಟಣೆ: ಸ್ಥಳದಲ್ಲಿ ಸೇರಿದ್ದ ಜನ, ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಲಾರಿ ಮೇಲೆ ಕಲ್ಲು ತೂರಾಟ ನಡೆಸಿದರು.
‘ನಾಯಂಡಹಳ್ಳಿ ಜಂಕ್ಷನ್ ರಸ್ತೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಾಹನಗಳ ವೇಗಕ್ಕೆ ಮಿತಿ ಇಲ್ಲದಂತಾಗಿದೆ. ಜಂಕ್ಷನ್ ಸುಧಾರಣೆಗೆ ಮನವಿ ಸಲ್ಲಿಸಿದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ಸ್ಥಳೀಯರು ಆರೋಪಿಸಿದರು.
ಪ್ರತಿಭಟನೆಯಿಂದಾಗಿ ಮೈಸೂರು ರಸ್ತೆಯಲ್ಲಿ ವಿಪರೀತ ದಟ್ಟಣೆ ಉಂಟಾಗಿ, ಎರಡು ಗಂಟೆಗಳವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ಬಂದ ಪೊಲೀಸರು, ಪ್ರತಿಭಟನಕಾರರ ಮೇಲೆ ಲಾರಿ ಪ್ರಹಾರ ನಡೆಸಿ ಚದುರಿಸಿದರು.
‘
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.