ಬೆಂಗಳೂರು: ಸಂವಿಧಾನದ ಮಹತ್ವವನ್ನು ತಿಳಿದುಕೊಂಡು ನೂರಾರು ವಿದ್ಯಾರ್ಥಿಗಳು, ಯುವಜನರು ‘ಸಂವಿಧಾನ’ದ ಕಡೆಗೆ ದಿಟ್ಟ ಹೆಜ್ಜೆ ಇಟ್ಟರು. ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯ ರಸ್ತೆಗಳಲ್ಲಿ ಸಾಗಿ ಅರಿವಿನ ಬೆಳಕು ಪಸರಿಸಿದರು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹವು ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸಹಯೋಗ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಸಹಕಾರದಲ್ಲಿ ‘ಸಂವಿಧಾನವೇ ಬೆಳಕು–ಹೆಜ್ಜೆಯಿಡು ಬೆಂಗಳೂರು’ ಅಭಿಯಾನದಡಿ ಶುಕ್ರವಾರ ಹಮ್ಮಿಕೊಂಡಿದ್ದ ‘ಸಂವಿಧಾನ’ ಕುರಿತ ವಿಚಾರ ಸಂಕಿರಣ ಹಾಗೂ ವಾಕಥಾನ್ ಇದಕ್ಕೆ ಸಾಕ್ಷಿಯಾಯಿತು.

ಬೆಳಿಗ್ಗೆಯೇ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಜ್ಞಾನಭಾರತಿ ಆವರಣದಲ್ಲಿರುವ ವೆಂಕಟಗಿರಿ ಗೌಡ ಸಭಾಂಗಣದಲ್ಲಿ ಬಂದು ಸೇರಿದರು. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಎಚ್. ಕಾಂತರಾಜ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಎಸ್.ಎಂ. ಜಯಕರ, ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಆಡಿದ ಸಂವಿಧಾನದ ಬಗೆಗಿನ ನುಡಿಗಳನ್ನು ಆಲಿಸಿದರು.

‘ಸಂವಿಧಾನವೇ ಬೆಳಕು– ಹೆಜ್ಜೆಯಿಡು ಬೆಂಗಳೂರು’ ಸಂವಿಧಾನ ನಡಿಗೆಯಲ್ಲಿ ಉತ್ಸಾಹದಿಂದ ಹೆಜ್ಜೆ ಹಾಕಿದರು. ಹಸಿರು ಹೊದ್ದಿರುವ, ಜ್ಞಾನ ದೀವಿಗೆಯ ಬೆಳಕು ಚೆಲ್ಲುವ ವಿಶ್ವವಿದ್ಯಾಲಯದ ವಾತಾವರಣದಲ್ಲಿ ಸಂವಿಧಾನದ ಜಾಗೃತಿಯ ಕಂಪು ಹರಡಿದರು. ವಾಕಥಾನ್ ಮುಗಿಸಿ ಬಂದವರಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಎಚ್. ಕಾಂತರಾಜ ಮಾತನಾಡಿ, ‘ಯಾವ ಹಕ್ಕುಗಳು ಇಲ್ಲದೇ ಸಮಾಜದಲ್ಲಿ ಸಹಜವಾಗಿ ಜೀವನ ಮಾಡಲು ಸಾಧ್ಯವಿಲ್ಲವೋ, ಅವು ಮೂಲಭೂತ ಹಕ್ಕುಗಳು. ಎಲ್ಲರಿಗೂ ಎಲ್ಲ ಸ್ವಾತಂತ್ರ್ಯಗಳು ಇರಬೇಕು. ಆದರೆ, ಅದು ಇನ್ನೊಬ್ಬರಿಗೆ ತೊಂದರೆಯನ್ನುಂಟು ಮಾಡ ಬಾರದು ಎಂಬುದೇ ಸಂವಿಧಾನದ ತತ್ವ’ ಎಂದು ಹೇಳಿದರು.

‘ಈ ದೇಶ ಕೆಲವರಿಗಷ್ಟೇ ಸೇರಿದ್ದಲ್ಲ, ಅದು ಎಲ್ಲರಿಗೂ ಸೇರಿದ್ದು ಎಂದು ಹೇಳಿದ ಕಾರಣಕ್ಕೆ ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಲಾಯಿತು. ಇದೇ ಆಶಯವನ್ನು ಡಾ. ಬಿ.ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನ ಹೊಂದಿದೆ. ಎಲ್ಲ ಕಾನೂನುಗಳ ತಾಯಿ ನಮ್ಮ ಸಂವಿಧಾನ. ಸಂವಿಧಾನಕ್ಕೆ ವಿರುದ್ಧವಾಗಿ ವಿಧಾನ ಸಭೆಯಲ್ಲಾಗಲಿ, ಸಂಸತ್ತಿನಲ್ಲಾಗಲಿ ಶಾಸನಗಳನ್ನು ಮಾಡಲು ಸಾಧ್ಯವಿಲ್ಲ. ಸಂವಿಧಾನದ ಚೌಕಟ್ಟು ಮೀರಿ ಕಾನೂನು ಮಾಡಿದರೆ ಅದನ್ನು ಪ್ರಶ್ನಿಸಿ ನ್ಯಾಯ ಪಡೆಯಲು ನ್ಯಾಯಾಂಗ ವ್ಯವಸ್ಥೆ ಇದೆ’ ಎಂದು ತಿಳಿಸಿದರು.

‘ದೇಶದಲ್ಲಿ ಅನೇಕ ಪರಿವರ್ತನೆಗಳಿಗೆ ಸಂವಿಧಾನ ಕಾರಣವಾಗಿದೆ. ಮತದಾನದ ಹಕ್ಕಿನ ಮೂಲಕ ನಮಗೆ ಬೇಕಾದವರನ್ನು ಆಯ್ಕೆ ಮಾಡುವ, ಸಂವಿಧಾನಕ್ಕೆ ವಿರುದ್ಧವಾಗಿರುವ ಸರ್ಕಾರಗಳನ್ನು ಸೋಲಿಸುವ ಅವಕಾಶ ಸಿಕ್ಕಿದೆ. ಅದು ಪರಿಣಾಮಕಾರಿಯಾಗಿ ಮಾಡಿಲ್ಲ ಅಂದರೆ ಹಕ್ಕು ಚಲಾಯಿಸುವಲ್ಲಿ ಸೋತಂತಾಗುತ್ತದೆ. ಮತದಾನದ ಹಕ್ಕು ಒಂದು ವರ. ಅದನ್ನು ಸರಿಯಾಗಿ ಬಳಸದೇ ಇದ್ದರೆ ಅದುವೇ ಶಾಪವಾಗಲಿದೆ’ ಎಂದು ಕಾಂತರಾಜ ಎಚ್ಚರಿಸಿದರು.

‘ಜಾತಿ, ಧರ್ಮಗಳ ಹೆಸರಲ್ಲಿ ಆಗುವ ತಾರತಮ್ಯಗಳು ಇನ್ನೂ ಕಡಿಮೆಯಾಗಿಲ್ಲ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂಬ ಆಶಯ ಈಡೇರಿಲ್ಲ. ಇದೇ ರೀತಿ ಇನ್ನೂ ಅನೇಕ ಕಾರ್ಯಗಳು ಕಾರ್ಯಗತಗೊಂಡಿಲ್ಲ. ಇದಕ್ಕೆ ಕಾರಣ ಏನು ಎಂದು ಪತ್ತೆ ಹಚ್ಚಿ ಸರಿಪಡಿಸಬೇಕು. ಸಂವಿಧಾನ ನೀಡಿರುವ ಸೌಲಭ್ಯಗಳನ್ನು ಪಡೆಯಬೇಕು. ಸಿಗದೇ ಇದ್ದರೆ ಅದಕ್ಕೆ ಹೋರಾಟ ಮಾಡಬೇಕು. ಹೋರಾಟ ಮಾಡಬೇಕಿದ್ದರೆ ಸಂವಿಧಾನದ ಅರಿವು ಇರಬೇಕು. ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ, ರಾಜಕೀಯ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ತತ್ವದಡಿ ಮುನ್ನಡೆಯಬೇಕು’ ಎಂದು ಸಲಹೆ ನೀಡಿದರು.

ಕುಲಪತಿ ಎಸ್.ಎಂ. ಜಯಕರ ಮಾತನಾಡಿ ‘ಇಂದು ಸಂವಿಧಾನದ ನಡಿಗೆ ಎಂದು ಹೆಜ್ಜೆ ಹಾಕಿದ್ದೇವೆ. ಇದು ಇಲ್ಲಿಗೆ ನಿಲ್ಲಬಾರದು. ನಮ್ಮ ಜೀವನವೇ ಸಂವಿಧಾನದ ಕಡೆಗೆ ಸಾಗಬೇಕು. ಸಂವಿಧಾನಕ್ಕೆ ಬದ್ಧವಾಗಿ ಬದುಕಬೇಕು’ ಎಂದು ಪ್ರತಿಪಾದಿಸಿದರು.

ಪತ್ರಿಕಾರಂಗದಲ್ಲಿ ಮೌಲ್ಯಗಳೊಂದಿಗೆ ವಿಶಿಷ್ಟ ಹೆಸರು ಮಾಡಿರುವ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ಸಂವಿಧಾನದ ಅರಿವು ಮೂಡಿಸಲು ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೀವನದಲ್ಲಿ ಯಾವ ಗ್ರಂಥ ಓದದೇ ಇದ್ದರೂ ಸಂವಿಧಾನ ಗ್ರಂಥವನ್ನು ಎಲ್ಲರೂ ಓದಿ ತಿಳಿದುಕೊಳ್ಳಬೇಕು. ಸಂವಿಧಾನವು ಜ್ಞಾನಿಗಳಿಗೆ, ವಕೀಲರಿಗೆ ಸಂಬಂಧಿಸಿದ್ದು ಎಂಬ ಭಾವನೆಯಿಂದ ಹೊರಬಂದು ಎಲ್ಲರೂ ಅರಿವು ಮೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟಡ್ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಕಿರಣ್ ಸುಂದರರಾಜನ್ ಉಪಸ್ಥಿತರಿದ್ದರು.

‘ಸಂವಿಧಾನ ಒಪ್ಪಿಕೊಳ್ಳದವರಿಂದಲೇ ತೊಂದರೆ’

‘ಎರಡು ರೀತಿಯ ಜನರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಒಂದು ನಮ್ಮ ಸಂವಿಧಾನದ ಬಗ್ಗೆ ಏನೂ ಅರಿವಿಲ್ಲದೇ ಇರುವವರು ಇನ್ನೊಂದು ಸಂವಿಧಾನದ ಬಗ್ಗೆ ಎಲ್ಲಾ ಗೊತ್ತಿದ್ದು ಒಪ್ಪಿಕೊಳ್ಳದೇ ಇರುವವರು. ಮೊದಲನೇ ವರ್ಗಕ್ಕೆ ಸಂವಿಧಾನದ ಜಾಗೃತಿ ಮೂಡಿಸುವ ಮೂಲಕ ಸರಿಪಡಿಸಬಹುದು. ಎರಡನೇ ವರ್ಗದಿಂದಲೇ ತೊಂದರೆಯಾಗುತ್ತಿದ್ದು ಹಾಗಾಗದಂತೆ ನೋಡಿಕೊಳ್ಳಬೇಕು’ ಎಂದು ಎಚ್. ಕಾಂತರಾಜ ಪ್ರತಿಪಾದಿಸಿದರು.

‘ಸಾಮಾಜಿಕ ನ್ಯಾಯದ ಬಗ್ಗೆ ನಮ್ಮ ಸಂವಿಧಾನದಲ್ಲಿ ಇರುವಷ್ಟು ಅಂಶಗಳು ಮತ್ಯಾವ ದೇಶದ ಸಂವಿಧಾನದಲ್ಲೂ ಇಲ್ಲ. ಪೀಠಿಕೆಯ ಆಶಯ ಮೂಲಭೂತ ಹಕ್ಕುಗಳ ಆಶಯ ಹಾಗೂ ಮೂಲಭೂತ ತತ್ವಗಳ ಆಶಯವೂ ಅದೇ ಆಗಿದೆ. ಇದರ ಜೊತೆಗೆ ನಮ್ಮ ಕರ್ತವ್ಯಗಳೇನು ಎಂಬುದನ್ನು ತಿಳಿಸುವ ಮೂಲಕ ಜವಾಬ್ದಾರಿಯನ್ನೂ ಸಂವಿಧಾನ ತಿಳಿಸಿದೆ’ ಎಂದು ವಿವರಿಸಿದರು. ‘ಭಾರತದ ಸಂವಿಧಾನ 6–7 ವರ್ಷ ಉಳಿಯಲ್ಲ ಎಂದು ವಿಲಿಯಂ ಐವರ್ ಜೆನ್ನಿಂಗ್ಸ್ನಂಥ ತಜ್ಞರು ಅಭಿಪ್ರಾಯಪಟ್ಟಿದ್ದರು. 77 ವರ್ಷಗಳ ಬಳಿಕವೂ ನಮ್ಮ ಸಂವಿಧಾನ ಉಳಿದಿದೆ. ಪ್ರತಿಯೊಬ್ಬರ ಪ್ರಗತಿಯನ್ನು ಬಯಸುವ ಕಲ್ಯಾಣ ರಾಜ್ಯವೇ ಸಂವಿಧಾನದ ಉದ್ದೇಶ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.