ಮಂಗಳವಾರ, ಜೂನ್ 15, 2021
20 °C
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ

ಗಲಭೆಕೋರರಿಂದ ನಷ್ಟ ವಸೂಲು: ಕ್ಲೇಮ್ ಕಮಿಷನರ್ ನೇಮಿಸುವಂತೆ ಹೈಕೋರ್ಟ್‌ಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಲಭೆ ಸಂಭವಿಸಿದ ಕೆ.ಜಿ ಹಳ್ಳಿ ಮತ್ತು ಡಿ.ಜೆ. ಹಳ್ಳಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸ್‌ ಮಹಜರು ನಡೆಸಿರುವುದು–ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆ.ಜಿ ಹಳ್ಳಿ ಮತ್ತು ಡಿ.ಜೆ. ಹಳ್ಳಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಸಂಭವಿಸಿದ ಗಲಭೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳಿಗೆ ಉಂಟಾಗಿರುವ ಹಾನಿಯನ್ನು ಗಲಭೆಕೋರರಿಂದ ವಸೂಲು ಮಾಡುವ ಬಗ್ಗೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿ, ಸುಪ್ರೀಂ ಕೋರ್ಟ್‌ ಆದೇಶದಂತೆ ಕ್ಲೇಮ್ ಕಮಿಷನರ್ ನೇಮಿಸುವಂತೆ ಕೋರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಗಲಭೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಕೈಗೊಂಡಿರುವ ಕಠಿಣ ಕ್ರಮಗಳ ಕುರಿತು ಪೊಲೀಸ್‌ ಅಧಿಕಾರಿಗಳು ಮುಖ್ಯಮಂತ್ರಿಗೆ ಮಾಹಿತಿ ನೀಡಿದರು. ಅಲ್ಲದೆ, ಈ ಪ್ರಕರಣಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಳವಡಿಸಿರುವುದರ ಬಗ್ಗೆ ತಿಳಿಸಲಾಯಿತು.

ಪ್ರಕರಣ ತನಿಖೆಯನ್ನು ತ್ವರಿತವಾಗಿ ಕೈಗೊಳ್ಳಲು ವಿಶೇಷ ತನಿಖಾ ತಂಡ ರಚಿಸಲಾಗಿದೆ. ಈಗಾಗಲೇ ದಾಖಲಾಗಿರುವ ಅಪರಾಧ ಪ್ರಕರಣಗಳ ತ್ವರಿತ ಹಾಗೂ ಪರಿಣಾಮಕಾರಿ ವಿಚಾರಣೆಗೆ ಅನುವಾಗುವಂತೆ ಮೂರು ಸದಸ್ಯರನ್ನು ಒಳಗೊಂಡ ವಿಶೇಷ ಅಭಿಯೋಜಕರ ತಂಡ ರಚಿಸಲು ಕೂಡಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಗಲಭೆಕೋರರ ವಿರುದ್ಧ 42 ಎಫ್‌ಐಆರ್‌

ಅಲ್ಲದೆ, ಗಲಭೆ ಪ್ರಕರಣಗಳಲ್ಲಿ ಬಂಧಿತ ಅಪರಾಧಿಗಳಿಗೆ ಸಂಬಂಧಪಟ್ಟಂತೆ ಅಗತ್ಯ ಬಿದ್ದರೆ ಗೂಂಡಾ ಕಾಯ್ದೆಯಡಿ ಬಂಧಿಸಿ ಕ್ರಮ ಕೈಗೊಳ್ಳಲು ಕೂಡಾ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವಡಗಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್, ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್ ಸೂದ್, ಗುಪ್ತವಾರ್ತೆ ವಿಭಾಗದ ಎಡಿಜಿಪಿ ಬಿ. ದಯಾನಂದ, ಪೊಲೀಸ್‌ ಕಮಿಷನರ್‌, ಕಮಲ್‍ಪಂತ್, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಮರ ಕುಮಾರ್ ಪಾಂಡೆ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು