ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ‘ಶುಭ್ರ ಬೆಂಗಳೂರು’ ಹಣ: ಚರ್ಚೆಗೆ ಗ್ರಾಸವಾದ ಸರ್ಕಾರದ ಆದೇಶ

ಮಹದೇವಪುರ ಕ್ಷೇತ್ರದ ರಸ್ತೆ
Last Updated 2 ಜನವರಿ 2022, 20:22 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ‍ಪರಿಹಾರ ಕಂಡುಕೊಳ್ಳಲು ಪ್ರಕಟಿಸಿದ್ದ ‘ಶುಭ್ರ ಬೆಂಗಳೂರು’ ಯೋಜನೆಯ ₹19 ಕೋಟಿ ಮೊತ್ತವನ್ನು ಮಹದೇವಪುರ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಬಳಕೆ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಅಧಿಕಾರಿಗಳ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಮಿಟ್ಟಗಾನಹಳ್ಳಿ ಹಾಗೂ ಕಣ್ಣೂರಿನ ಸುತ್ತಮುತ್ತಲಿನ ಪ್ರದೇಶಗಳ ರಸ್ತೆಗಳ ಅಭಿವೃದ್ಧಿಗೆ ಈ ಮೊತ್ತ ವಿನಿಯೋಗಿಸಲು ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದೆ. ಒಟ್ಟು 17 ಕಡೆ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಇದಕ್ಕಾಗಿ ಬಿಬಿಎಂಪಿ ಅಲ್ಪಾವಧಿ ಟೆಂಡರ್‌ ಕರೆದಿದೆ.

ನಗರದ ಅಭಿವೃದ್ಧಿ ಕಾಮಗಾರಿಗಳಿಗಾಗಿ ರಾಜ್ಯ ಸರ್ಕಾರವು 2019ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ ‍‍ಪ‍್ರಕಟಿಸಿ, ₹8,015 ಕೋಟಿ ಅನುದಾನ ಒದಗಿಸಿತು. ಈ ಕ್ರಿಯಾಯೋಜನೆಯಲ್ಲಿ ಕಸ ನಿರ್ವಹಣೆಗೆ ₹584.35 ಕೋಟಿ ಮೀಸಲಿಡಲಾಯಿತು. ಇದರಲ್ಲಿ ಕಸ ವಿಲೇವಾರಿ ಸ್ಥಳಗಳ ಪ್ರದೇಶಾಭಿವೃದ್ಧಿ ಕಾಮಗಾರಿಗೆ ₹528.85 ಕೋಟಿ ಹಂಚಿಕೆ ಮಾಡಲಾಯಿತು. ಹೀಗಾಗಿ, ಕಸ ವಿಲೇವಾರಿ ಕಾಮಗಾರಿಗಳಿಗೆ ₹55.50 ಕೋಟಿಯಷ್ಟೇ ಉಳಿಯಿತು.

ಈ ನಡುವೆ, ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಪಾಲಿಕೆ ವಿಫಲವಾಗಿದ್ದು, ಪಾಲಿಕೆ ಆಡಳಿತವನ್ನು ಸೂಪರ್‌ಸೀಡ್‌ ಮಾಡಲು ತಿಂಗಳಲ್ಲಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ 2019ರಲ್ಲಿ ನಿರ್ದೇಶನ ನೀಡಿತು. ಇದರ ಬೆನ್ನಲ್ಲೇ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಕಸ ಸಮಸ್ಯೆ ನಿವಾರಿಸಲು ಶಾಶ್ವತ ಕ್ರಮಗಳನ್ನು ಕೈಗೊಳ್ಳುವುದಾಗಿ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದರು. ಬಳಿಕ ಪಾಲಿಕೆಯ ಆಯುಕ್ತರು ಕಸ ವಿಲೇವಾರಿ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿದರು. ಅದರ ಬೆನ್ನಲ್ಲೇ, ₹999 ಕೋಟಿ ಮೊತ್ತದ ‘ಶುಭ್ರ ಬೆಂಗಳೂರು’ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿತು. ಕಸ ಸಂಸ್ಕರಣಾ ಘಟಕಗಳು, ಭೂಭರ್ತಿ ಘಟಕಗಳು ಹಾಗೂ ಕಸ ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯಲು ಮಾರ್ಷಲ್‌ಗಳ ನೇಮಕ ಮತ್ತು ಕಸ ವಿಲೇವಾರಿ ಮೇಲೆ ನಿಗಾ ಇರಿಸಲು ಯಂತ್ರಗಳ ಖರೀದಿಯೂ (₹19 ಕೋಟಿ) ಇದರಲ್ಲಿ ಸೇರಿದೆ. ಹೈಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಹೇಳಿರುವ ಕಾಮಗಾರಿಗಳಿಗೆ ಅಗತ್ಯ ಅನುದಾನವನ್ನು ನೀಡಲಾಗಿದ್ದು, ಪಾಲಿಕೆಯು ಆದ್ಯತೆ ಮೇರೆಗೆ ಈ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿತು.

ಶಾಸಕರಿಂದ ₹150 ಕೋಟಿ ಅನುದಾನ ಬೇಡಿಕೆ: ಮಿಟ್ಟಹಾನಹಳ್ಳಿ ಭೂಭರ್ತಿ ಘಟಕ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ ₹150 ಕೋಟಿ ಅನುದಾನ ನೀಡುವಂತೆ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರು 2021ರ ಆಗಸ್ಟ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ‘ಮಾರ್ಷಲ್‌ಗಳ ನೇಮಕವು ನಿರ್ವಹಣೆ ಕಾಮಗಾರಿಯಾಗಿದ್ದು, ಅದನ್ನು ಪಾಲಿಕೆಯ ಅನುದಾನದಲ್ಲಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ, ₹19 ಕೋಟಿ ಅನುದಾನವನ್ನು ಮಿಟ್ಟಗಾನಹಳ್ಳಿ ಹಾಗೂ ಕಣ್ಣೂರಿನ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗೆ ಒದಗಿಸಬೇಕು’ ಎಂದು ಪಾಲಿಕೆಯು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತು. ಇದಕ್ಕೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ಸೂಚಿಸಿದೆ.

‘ಹೈಕೋರ್ಟ್‌ ಎಚ್ಚರಿಕೆಗೆ ಮಣಿದು ಶುಭ್ರ ಬೆಂಗಳೂರು ಯೋಜನೆ ಪ್ರಕಟಿಸಲಾಯಿತು. ನಗರದಲ್ಲಿ ಈಗಲೂ ಕಸ ವಿಲೇವಾರಿ ಸಮಸ್ಯೆ ಇದೆ. ಆ ಯೋಜನೆಯ ಹಣವನ್ನು ಕಸ ವಿಲೇವಾರಿಗೇ ಬಳಸಬೇಕಿತ್ತು. ಜನಪ್ರತಿನಿಧಿಗಳ ಒತ್ತಡದಿಂದ ಅದನ್ನು ರಸ್ತೆಗಳ ಅಭಿವೃದ್ಧಿಗೆ ಬಳಸುತ್ತಿರುವುದು ಸರಿಯಲ್ಲ’ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT