ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಅರ್ಜಿ ಸ್ವೀಕಾರಕ್ಕೆ ನಕಾರ, ಬೆಸ್ಕಾಂ ಎಇಇ ಅಮಾನತು

Published 6 ಮಾರ್ಚ್ 2024, 15:31 IST
Last Updated 6 ಮಾರ್ಚ್ 2024, 15:31 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್‌ ಸಂಪರ್ಕದ ಆರ್‌.ಆರ್‌. ಸಂಖ್ಯೆಗಳನ್ನು ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಯ ಹೆಸರಿಗೆ ವರ್ಗಾಯಿಸಲು ಕೋರಿರುವ ಅರ್ಜಿ ಸ್ವೀಕರಿಸಲು ನಿರಾಕರಿಸಿದ ಬೆಸ್ಕಾಂ ಆರನೇ ಪೂರ್ವ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಶಂಕರಪ್ಪ ಕೆ.ಎಂ. ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಹೋಟೆಲ್‌ ಲೀಲಾ ವೆಂಚರ್‌ ಲಿಮಿಟೆಡ್‌ ಹೆಸರಿನಲ್ಲಿದ್ದ ಎರಡು ಆರ್‌.ಆರ್‌. ಸಂಖ್ಯೆಗಳನ್ನು ಶ್ಲಾಷ್‌ ಬೆಂಗಳೂರು ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಹೆಸರಿಗೆ ವರ್ಗಾವಣೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಲು ಶ್ಲಾಷ್‌ ಕಂಪನಿಯ ಪ್ರತಿನಿಧಿಗಳು 2023ರ ಡಿಸೆಂಬರ್‌ 9ರಿಂದ 2024ರ ಮಾರ್ಚ್‌ 1ರವರೆಗೆ ಏಳು ಬಾರಿ ಬೆಸ್ಕಾಂ ಎಇಇ ಕಚೇರಿಗೆ ಭೇಟಿ ನೀಡಿದ್ದರು. ಆದರೆ, ಅವರ ಕೋರಿಕೆಯನ್ನು ತಿರಸ್ಕರಿಸಿದ್ದ ಶಂಕರಪ್ಪ, ಅರ್ಜಿ ಸ್ವೀಕರಿಸದಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಅವರಿಗೆ ಶ್ಲಾಷ್‌ ಬೆಂಗಳೂರು ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಮಂಗಳವಾರ ದೂರು ನೀಡಿತ್ತು. ಪ್ರಕರಣದ ಕುರಿತು ಬೆಸ್ಕಾಂ ಕೇಂದ್ರ ಕಚೇರಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.

‘ದೂರುದಾರರ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಎಇಇ, ಅರ್ಜಿ ತಿರಸ್ಕರಿಸಿರುವ ಬಗ್ಗೆಯೂ ಹಿಂಬರಹ ನೀಡಿರಲಿಲ್ಲ. ಗ್ರಾಹಕರು ಪದೇ ಪದೇ ಕಚೇರಿಗೆ ಅಲೆದಾಡುವಂತೆ ಮಾಡಿದ್ದರು. ಗ್ರಾಹಕರ ಅರ್ಜಿ ಸ್ವೀಕರಿಸದಂತೆ ಟಪಾಲು ಶಾಖೆ ಸಿಬ್ಬಂದಿಗೆ ಆದೇಶ ನೀಡಿರುವುದು ಕಂಡುಬಂದಿದೆ’ ಎಂದು ಶಂಕರಪ್ಪ ಅವರನ್ನು ಅಮಾನತು ಮಾಡಿ ಬುಧವಾರ ಹೊರಡಿಸಿರುವ ಆದೇಶದಲ್ಲಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

‘ಕರ್ನಾಟಕ ರಾಜ್ಯದಲ್ಲಿನ ವಿತರಣಾ ಪರವಾನಗಿದಾರರ ವಿದ್ಯುತ್‌ ಸರಬರಾಜು ಷರತ್ತುಗಳ ಸೆಕ್ಷನ್‌ 6 ರ ಪ್ರಕಾರ, ಗ್ರಾಹಕರ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿದಾಗ, ಆ ಅರ್ಜಿಯನ್ನು ಮತ್ತು ಅದರೊಂದಿಗೆ ಸಲ್ಲಿಸಿರುವ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಿ, ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಪ್ರಕರಣದಲ್ಲಿ ನಿಯಮ ಪಾಲಿಸದೇ ಗ್ರಾಹಕರಿಗೆ ತೊಂದರೆ ನೀಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿರುತ್ತದೆ’ ಎಂದು ಹೇಳಿದ್ದಾರೆ.

ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸದೇ, ತೊಂದರೆ ನೀಡುವ ಮೂಲಕ ಕರ್ತವ್ಯಲೋಪ ಎಸಗಿರುವ ಆರೋಪದಡಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಶಂಕರಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT