ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಒ.ಸಿ. ಆಧರಿಸಿ ಸಂಪರ್ಕ; ಕರ್ತವ್ಯಲೋಪವೆಸಗಿದವರ ವಿರುದ್ಧ ಕ್ರಮಕ್ಕೆ ಮೀನಮೇಷ

ಕರ್ತವ್ಯಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮೀನಮೇಷ
Last Updated 20 ನವೆಂಬರ್ 2020, 3:07 IST
ಅಕ್ಷರ ಗಾತ್ರ

ಬೆಂಗಳೂರು: ಬಹುಮಹಡಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ಪಡೆದಿದ್ದರೆ ಮಾತ್ರ ಅವುಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ನೀಡಬಹುದು. ಆದರೂ ಬೆಸ್ಕಾಂನ ಕೆಲವು ಅಧಿಕಾರಿಗಳು ಇಂತಹ ಕಟ್ಟಡಗಳಿಗೆ ನಕಲಿ ಒ.ಸಿ ಆಧಾರದಲ್ಲಿ ಶಾಶ್ವತ ವಿದ್ಯುತ್‌ ಸಂಪರ್ಕ ನೀಡುತ್ತಿದ್ದಾರೆ. ಕರ್ತವ್ಯಲೋಪವನ್ನು ಪುರಾವೆ ಸಮೇತ ತೋರಿಸಿ ಕೊಟ್ಟರೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಬೆಸ್ಕಾಂ ಕ್ರಮ ಕೈಗೊಳ್ಳುತ್ತಿಲ್ಲ.

800 ಚ.ಮೀ ವಿಸ್ತೀರ್ಣಕ್ಕಿಂತ ದೊಡ್ಡ ಕಟ್ಟಡಗಳ ಮಾಲೀಕರು ಒ.ಸಿ ಹಾಜರುಪಡಿಸದಿದ್ದರೆ ಅಂತಹ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಕರ್ನಾಟಕ ವಿದ್ಯುತ್‌ ನಿಯಂತ್ರಣ ಮಂಡಳಿ 2017ರ ಡಿಸೆಂಬರ್‌ನಲ್ಲಿ ಸ್ಪಷ್ಟ ಸೂಚನೆ ನೀಡಿದೆ. ಆದರೂ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ. ಕೆಲವೆಡೆ ಅಧಿಕಾರಿಗಳೇ ಶಾಮೀಲಾಗಿ ನಕಲಿ ಒ.ಸಿ. ಸೃಷ್ಟಿಸಿ ವಿದ್ಯುತ್‌ ಸಂಪರ್ಕ ನೀಡುತ್ತಿದ್ದಾರೆ ಎಂಬ ದೂರುಗಳಿವೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ಈ ಅಕ್ರಮದ ಬಗ್ಗೆ ಬೆಸ್ಕಾಂನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳ ಕರ್ತವ್ಯಲೋಪ ಸಾಬೀತಾದ ಬಳಿಕವೂ ಕನಿಷ್ಠ ಪಕ್ಷ ಅವರನ್ನು ಅಮಾನತು ಮಾಡುವ ಧೈರ್ಯವನ್ನು ಬೆಸ್ಕಾಂ ಪ್ರದರ್ಶಿಸುತ್ತಿಲ್ಲ’ ಎಂದು ದೂರುತ್ತಾರೆ ಈ ನಿಯಮದ ಜಾರಿಗಾಗಿ ಹೋರಾಟ ನಡೆಸುತ್ತಿರುವ ಟಾಟಾನಗರದ ಬಿ.ಮುನೇಗೌಡ. ಬೆಸ್ಕಾಂ ಅಧಿಕಾರಿಗಳು ನಕಲಿ ಒ.ಸಿ. ನೀಡಿರುವ ಬಗ್ಗೆ ದಾಖಲೆಗಳ ಸಮೇತ ಅವರು ಮುಖ್ಯಮಂತ್ರಿ, ಕೆಇಆರ್‌ಸಿ, ಎಸಿಬಿಗೆ ದೂರು ನೀಡಿದ್ದಾರೆ.

‘ಬಹುಮಹಡಿ ಕಟ್ಟಡಕ್ಕೆ ಒ.ಸಿ ಪಡೆಯುವಾಗ ಮಾಲೀಕರು ಬಿಬಿಎಂಪಿಗೆ ಭಾರಿ ಶುಲ್ಕ ಪಾವತಿಸಬೇಕಾಗುತ್ತದೆ.
ಇದನ್ನು ತಪ್ಪಿಸಲು ಕೆಲವರು ಅಡ್ಡ ದಾರಿ ಹಿಡಿಯುತ್ತಾರೆ. ನಕಲಿ ಒ.ಸಿ ಸೃಷ್ಟಿಸಿ ವಿದ್ಯುತ್‌ ಸಂಪರ್ಕ ಪಡೆಯುತ್ತಾರೆ. ಗ್ರಾಹಕರು ಒದಗಿಸಿದ ಒ.ಸಿ. ಅಸಲಿಯೋ ನಕಲಿಯೋ ಎಂದು ಪರಿಶೀಲಿಸಬೇಕಾದುದು ಬೆಸ್ಕಾಂ ಎಇಇಗಳ ಜವಾಬ್ದಾರಿ.
ಆದರೆ, ಅವರು ಒ.ಸಿ.ಯ ಅಸಲಿಯತ್ತನ್ನು ಪರಿಶೀಲಿಸುವುದೇ ಇಲ್ಲ. ಲಂಚ ಪಡೆದು ವಿದ್ಯುತ್‌ ಸಂಪರ್ಕ ನೀಡುತ್ತಾರೆ’ ಎಂದು ಅವರು ದೂರಿದರು.

‘ಬೆಂಗಳೂರು ಉತ್ತರ ವೃತ್ತದ ವ್ಯಾಪ್ತಿಯ ಸಿ–9 ಉಪವಿಭಾಗದ ವ್ಯಾಪ್ತಿಯ ವಿದ್ಯಾರಣ್ಯಪುರದ ತಿಂಡ್ಲು ಗ್ರಾಮದಲ್ಲಿ ಶಶಾಂಕ್‌ ಕನ್‌ಸ್ಟ್ರಕ್ಷನ್ಸ್‌ ಸಂಸ್ಥೆಯ ಬಹುಮಹಡಿ ಕಟ್ಟಡವೊಂದಕ್ಕೆ ವಿದ್ಯುತ್‌ ಸಂಪರ್ಕ ನೀಡಿದರು. ಈ ಕಟ್ಟಡಕ್ಕೆ ಒ.ಸಿ. ನೀಡಿರುವ ವಿವರವನ್ನು ನಾನು ಮಾಹಿತಿ ಹಕ್ಕಿನಡಿ ಬಿಬಿಎಂಪಿಯಲ್ಲಿ ಕೇಳಿದ್ದೆ. ಆಗ ಈ ಕಟ್ಟಡಕ್ಕೆ ಒ.ಸಿ.ಯನ್ನೇ ನೀಡಿಲ್ಲ ಎಂದು ಗೊತ್ತಾಯಿತು. ಈ ವಿಚಾರವನ್ನು ಗಮನಕ್ಕೆ ತಂದ ಬಳಿಕವೂ ಬೆಸ್ಕಾಂ ಎಇಇ ಬಸವರಾಜಯ್ಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

’ನಕಲಿ ಒ.ಸಿ. ಆಧಾರದಲ್ಲಿ ಸಂಪರ್ಕ ಪಡೆದಿದ್ದು ಗಮನಕ್ಕೆ ಬಂದ ತಕ್ಷಣ ಬಸವರಾಜಯ್ಯ ಅವರು ಕಟ್ಟಡದ ವಿದ್ಯುತ್‌ ಸಂಪರ್ಕ ಕಡಿತಗೊಳಿಸದೇ ನಿಯಮ ಉಲ್ಲಂಘಿಸಿದ್ದಾರೆ. ಅವರು ಹಿರಿಯ ಅಧಿಕಾರಿಗಳಿಂದಲೂ ಈ ಮಾಹಿತಿ ಮುಚ್ಚಿಟ್ಟಿದ್ದಾರೆ. ಅವರು ಬಿಲ್ಡರ್‌
ಗಳ ಜೊತೆ ಶಾಮೀಲಾಗಿರುವ ಸಾಧ್ಯತೆ ಇದೆ. ಇದರಿಂದ ಬೆಸ್ಕಾಂ ಜೊತೆಗೆ ಬಿಬಿಎಂಪಿಗೂ ನಷ್ಟ ಉಂಟಾಗಿದೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಈ ಪ್ರಕರಣದ ವಿಚಾರಣೆ ನಡೆಸಿದ್ದ ಬೆಸ್ಕಾಂ ಉತ್ತರ ವೃತ್ತದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಟಿ.ಎಸ್‌.ಚಂದನ್‌ ವರದಿ ನೀಡಿದ್ದರು.

‘ಹಿರಿಯ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಎಇಇ ನಡೆಸಿದ ಆರೋಪ ಸಾಬೀತಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳದಿರಲು ಕಾರಣವೇನು’ ಎಂದು ಪ್ರಶ್ನಿಸುತ್ತಾರೆ ಮುನೇಗೌಡ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ.ರಾಜೇಶ್‌ ಗೌಡ ಅವರಿಗೆ ಕರೆ ಮಾಡಿದರೂ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT