ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಘಾತ|ಹಸು ಚಿತ್ರದ ಸುಳಿವು; ಚಕ್ರಕ್ಕೆ ಅಂಟಿದ್ದ ರಕ್ತದ ಕಲೆ–ಮಾಂಸ,ಆರೋಪಿಗಳು ಸೆರೆ

Published 27 ಮೇ 2024, 15:28 IST
Last Updated 27 ಮೇ 2024, 15:28 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯದ ತೂಬಿನಕೆರೆಯ ವಾಹನದ ಚಾಲಕ ಸುನೀಲ್ ಮತ್ತು ಮಾಲೀಕ ಸಂದೀಪ್ ಬಂಧಿತರು.

‘ನಾಗರಬಾವಿಯ ಹೊರವರ್ತುಲ ರಸ್ತೆಯಲ್ಲಿ ಜನವರಿ 14ರಂದು ಅಪಘಾತ ಸಂಭವಿಸಿತ್ತು. ಬೈಕ್ ಸವಾರ ನೇಪಾಳದ ದಿನೇಶ್ ಎಂಬುವವರು ಮೃತಪಟ್ಟಿದ್ದರು. ಅಪಘಾತಕ್ಕೆ ಕಾರಣವಾಗಿದ್ದ ಸುನೀಲ್‌, ವಾಹನ ಸಮೇತ ಪರಾರಿಯಾಗಿದ್ದ. ತನಿಖೆ ಕೈಗೊಂಡು ಸುನೀಲ್ ಹಾಗೂ ವಾಹನದ ಮಾಲೀಕನನ್ನು ಮಂಡ್ಯದಲ್ಲಿ ಸೆರೆ ಹಿಡಿದು ನಗರಕ್ಕೆ ಕರೆತರಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಚಾಲಕ ಸುನೀಲ್, ಮದ್ಯ ಕುಡಿದು ಟ್ರಕ್‌ ಚಲಾಯಿಸುತ್ತಿದ್ದ. ವಾಹನದಲ್ಲಿ ಮಾಲೀಕ ಸಂದೀಪ್ ಸಹ ಇದ್ದ. ದಿನೇಶ್ ಹಾಗೂ ಸ್ನೇಹಿತ ಟಿಕಾರಾಜ್‌, ಬೈಕ್‌ನಲ್ಲಿ ಹೊರಟಿದ್ದರು. ಟಿಕಾರಾಜ್ ಸಹ ಮದ್ಯ ಕುಡಿದಿದ್ದ. ಈತನೇ ಬೈಕ್ ಚಲಾಯಿಸುತ್ತಿದ್ದ’ ಎಂದು ತಿಳಿಸಿದರು.

‘ಟಿಕಾರಾಜ್ ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿದ್ದ. ಮಾಳಗಾಳ ಮೇಲ್ಸೇತುವೆ ಬಳಿ ಬೈಕ್ ಉರುಳಿಬಿದ್ದಿತ್ತು. ಟಿಕಾರಾಜ್ ಮೇಲ್ಸೇತುವೆಯಿಂದ ಕೆಳಗಿನ ರಸ್ತೆಗೆ ಬಿದ್ದಿದ್ದ. ಹಿಂಬದಿ ಸವಾರ ದಿನೇಶ್ ಅವರು ಮೇಲ್ಸೇತುವೆಯ ರಸ್ತೆಯಲ್ಲಿಯೇ ಬಿದ್ದಿದ್ದರು.’

‘ಇದೇ ಮಾರ್ಗವಾಗಿ ಸುನೀಲ್, ಟ್ರಕ್‌ ಚಲಾಯಿಸಿಕೊಂಡು ಹೊರಟಿದ್ದ. ರಸ್ತೆ ಮೇಲಿದ್ದ ದಿನೇಶ್ ಅವರ ಮೇಲೆಯೇ ವಾಹನ ಚಲಾಯಿಸಿದ್ದ. ಚಕ್ರ ಹರಿದು ದಿನೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತದ ಬಳಿಕ ಆರೋಪಿಗಳು ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದರು’ ಎಂದು ಹೇಳಿದರು.

ಹಸು ಚಿತ್ರದ ಸುಳಿವು: ‘ಮದ್ಯ ಕುಡಿದು ವಾಹನ ಚಲಾಯಿಸಿ ದಿನೇಶ್ ಸಾವಿಗೆ ಕಾರಣವಾದ ಆರೋಪದಡಿ ಸ್ನೇಹಿತ ಟಿಕಾರಾಜ್‌ನನ್ನು ಬಂಧಿಸಲಾಗಿತ್ತು. ಆದರೆ, ಸುನೀಲ್ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಅಪಘಾತ ನಡೆದ ಸ್ಥಳ ಹಾಗೂ ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ವಾಹನದ ಮೇಲೆ ಹಸು ಚಿತ್ರವಿರುವುದು ಗಮನಕ್ಕೆ ಬಂದಿತ್ತು’ ಎಂದು ತಿಳಿಸಿದರು.

‘ಹಸುವಿನ ಚಿತ್ರವಿರುವ ವಾಹನದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿ, ನೋಂದಣಿ ಸಂಖ್ಯೆ ಪತ್ತೆ ಮಾಡಲಾಯಿತು. ಮಂಡ್ಯದ ತೂಬಿನಕೆರೆಯ ಕೈಗಾರಿಕಾ ಪ್ರದೇಶದಲ್ಲಿರುವ ಪಂಚಮುಖಿ ಫೀ‌ಡ್ಸ್ ಕಂಪನಿಗೆ ಸೇರಿದ್ದ ವಾಹನವೆಂಬುದು ತಿಳಿಯಿತು. ಕಂಪನಿಗೆ ಹೋಗಿ ವಿಚಾರಿಸಿದಾಗ, ಚಾಲಕ ಸುನೀಲ್ ಸಿಕ್ಕಿಬಿದ್ದ. ಮಾಲೀಕನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡ’ ಎಂದು ಹೇಳಿದರು.

ಸಂದೀಪ್

ಸಂದೀಪ್

ಚಕ್ರಕ್ಕೆ ಅಂಟಿದ್ದ ರಕ್ತದ ಕಲೆ ಮಾಂಸದ ತುಂಡು

‘ಅಪಘಾತ ನಂತರ ಮಂಡ್ಯದ ತೂಬಿನಕೆರೆಯ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಗೆ ಹೋಗಿದ್ದ ಸುನೀಲ್ ಅಲ್ಲಿಯೇ ವಾಹನ ನಿಲ್ಲಿಸಿ ಹೋಗಿದ್ದ. ಅದಾದ ನಂತರ ಯಾವುದೇ ಕಡೆಯೂ ವಾಹನ ಕೊಂಡೊಯ್ದಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ವಾಹನ ಜಪ್ತಿ ಮಾಡಿ ಚಕ್ರಗಳನ್ನು ಪರಿಶೀಲಿಸಲಾಗಿತ್ತು. ಚಕ್ರಕ್ಕೆ ರಕ್ತದ ಕಲೆಗಳು ಹಾಗೂ ಮಾಂಸದ ತುಂಡುಗಳು ಅಂಟಿಕೊಂಡಿದ್ದು ಕಂಡುಬಂತು. ವಿಧಿ ವಿಜ್ಞಾನ ಪ್ರಯೋಗಾಲಯದ ಮೂಲಕ ಪರೀಕ್ಷಿಸಿದಾಗ ದಿನೇಶ್ ಅವರದ್ದೇ ರಕ್ತದ ಕಲೆ ಹಾಗೂ ಮಾಂಸದ ತುಂಡುಗಳು ಎಂಬುದು ದೃಢಪಟ್ಟಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT