ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ದರ ವಿರೋಧಿಸಿ ‘ಬೈಕ್ ತಳ್ಳು’ ಪ್ರತಿಭಟನೆ

Last Updated 23 ಡಿಸೆಂಬರ್ 2020, 20:26 IST
ಅಕ್ಷರ ಗಾತ್ರ

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಹಾಗೂ ಅವುಗಳ ಮೇಲಿನ ರಾಜ್ಯದ ತೆರಿಗೆ ಇಳಿಸುವಂತೆ ಒತ್ತಾಯಿಸಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಮೌರ್ಯ ವೃತ್ತದಲ್ಲಿ‘ಬೈಕ್‌ ತಳ್ಳು’ ಎಂಬ ಪ್ರತಿಭಟನೆಯನ್ನು ಬುಧವಾರ ನಡೆಸಿದರು.

‘ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ನಿರ್ಧಾರಗಳಿಂದ ಯಾರ ಮನೆಯೂ ಉದ್ಧಾರವಾಗಿಲ್ಲ. ಎಲ್ಲ ಹಂತದಲ್ಲೂ ಜನಸಾಮಾನ್ಯರ ಕತ್ತು ಹಿಸುಕಿ, ಕೊಲ್ಲಲಾಗುತ್ತಿದೆ. ಪೆಟ್ರೋಲ್ ಬೆಲೆ ಹೆಚ್ಚಳ ಮಾಡಿ, ಜನರ ದೋಚುತ್ತಿದ್ದಾರೆ’ ಎಂದುಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

‘ಕಳೆದ ವರ್ಷ ಇದೇ ಹೊತ್ತಿನಲ್ಲಿ ಕಚ್ಚಾತೈಲದ ಬೆಲೆ 62 ಡಾಲರ್ ಇತ್ತು. ಈಗ 40 ಡಾಲರ್‌ಗೆ ಇಳಿದಿದೆ. ಆದರೂ, ಪೆಟ್ರೋಲ್ ಬೆಲೆ ಲೀಟರ್‌ಗೆ ₹86 ದಾಟಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿಯವರು ‘ತಿನ್ನಲ್ಲ, ತಿನ್ನಲು ಬಿಡುವುದಿಲ್ಲ’ ಎಂದು ಭಜನೆ ಮಾಡುತ್ತಿದ್ದಾರೆ. ಪ್ರಗತಿ ಸಾಧಿಸಿ ಮುಂದಕ್ಕೆ ಹೋಗುತ್ತಿದ್ದ ದೇಶವನ್ನು ಮೋದಿ- ಅಂಬಾನಿ, ಅದಾನಿ ಜೋಡಿ ಹಿಂದಕ್ಕೆ ತಳ್ಳುತ್ತಿದೆ’ಎಂದು ಟೀಕಿಸಿದರು.

‘ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಪೆಟ್ರೋಲ್‌ ಅನ್ನು ₹40ಕ್ಕೆ ನೀಡಬಹುದು ಎಂದು ಬಹಿರಂಗವಾಗಿ ಹೇಳಿದ್ದಾರೆ. ಕಚ್ಚಾ ತೈಲ ಸಂಸ್ಕರಿಸಲು ಕೇವಲ ₹30 ಖರ್ಚಾಗುತ್ತದೆ ಎಂದಿದ್ದಾರೆ. ಈಗಿನ ಪರಿಸ್ಥಿತಿ ನೋಡಿದರೆ, ಸರ್ಕಾರಕ್ಕೂ ಕಳ್ಳನಿಗೂ ಏನು ವ್ಯತ್ಯಾಸ?’ ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರವೂ ಜನರ ನೆರವಿಗೆ ನಿಲ್ಲದೆ, ತನ್ನ ಪಾಲಿನ ತೆರಿಗೆ ಹೆಚ್ಚಳ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನಾದರೂ ಇಳಿಸಬೇಕು’ ಎಂದು ಆಗ್ರಹಿಸಿದರು.

ಪಕ್ಷದ ಸಹ ಸಂಚಾಲಕ ವಿಜಯ್ ಶರ್ಮ, ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಉಪಾಧ್ಯಕ್ಷ ಸುರೇಶ್ ರಾಥೋಡ್, ನಾಗಣ್ಣ, ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಫಣಿರಾಜ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT