ಬೆಂಗಳೂರು: ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ದೌರ್ಜನ್ಯ ನಡೆಸುತ್ತಿರುವ ಆಟೊ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬೈಕ್ ಟ್ಯಾಕ್ಸಿ ಚಾಲಕರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಬೈಕ್ ಟ್ಯಾಕ್ಸಿ ಚಾಲಕರ ಸಂಘದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಆಟೊ ಚಾಲಕರ ಕಿರುಕುಳದ ವಿರುದ್ಧ ಘೋಷಣೆ ಕೂಗಿದರು.
‘ಜೀವನೋಪಾಯಕ್ಕೆ ಬೈಕ್ ಟ್ಯಾಕ್ಸಿ ಆಧಾರವಾಗಿದೆ. ಆದರೆ, ಆಟೊ ಚಾಲಕರು ನಮ್ಮನ್ನು ಅಲ್ಲಲ್ಲಿ ಅಡ್ಡಗಟ್ಟಿ ಥಳಿಸುತ್ತಿದ್ದಾರೆ. ಭಯದ ನಡುವೆ ಜೀವನ ಸಾಗಿಸುವಂತಾಗಿದೆ’ ಎಂದು ಹೇಳಿದರು.
ಆಟೊ ಪ್ರಯಾಣ ದರ ದುಬಾರಿ ಆಗಿರುವುದರಿಂದ ಜನ ಬೈಕ್ ಟ್ಯಾಕ್ಸಿಗೆ ಒಲವು ತೋರುತ್ತಿದ್ದಾರೆ. ಪ್ರಯಾಣಕ್ಕೆ ಯಾವ ವಾಹನ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಜನರಿಗೆ ಬಿಟ್ಟ ವಿಚಾರ. ಆದರೆ, ನಾವು ಆಟೊ ಚಾಲಕರಿಗೆ ಹೆದರಿ ವೃತ್ತಿ ನಡೆಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
‘ನಮ್ಮ ಮೇಲೆ ದೌರ್ಜನ್ಯ ನಡೆಸುವ ಆಟೊ ಚಾಲಕರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಕ್ರಮ ಕೈಗೊಳ್ಳದಿದ್ದರೆ ಮತ್ತೆ ಧರಣಿ ನಡೆಸಲಾಗುವುದು’ ಎಂದು ಬೈಕ್ ಟ್ಯಾಕ್ಸಿ ಸಂಘದ ಅಧ್ಯಕ್ಷ ಆದಿ ನಾರಾಯಣ ತಿಳಿಸಿದರು.