ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಕಾರ್ಪೋರೇಟರ್ ರೇಖಾ ಹತ್ಯೆ: ಸಿ.ಸಿ.ಟಿ.ವಿ ತಿರುಗಿಸಿಟ್ಟಿದ್ದ ಆರೋಪಿಗಳು

Last Updated 24 ಜೂನ್ 2021, 21:24 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಕಾರ್ಪೋರೇಟರ್ರೇಖಾ ಕದಿರೇಶ್ ಅವರನ್ನು ಕಚೇರಿ ಎದುರೇ ಹತ್ಯೆ ಮಾಡಲು ಹಲವು ದಿನಗಳ ಹಿಂದೆಯೇ ಸಂಚು ರೂಪಿಸಿದ್ದ ಆರೋಪಿಗಳು, ತಮ್ಮ ಗುರುತು ಸಿಗಬಾರದೆಂದು ಕಚೇರಿಯ ಸಿ.ಸಿ.ಟಿ.ವಿ ಕ್ಯಾಮೆರಾವನ್ನು ತಿರುಗಿಸಿಟ್ಟಿದ್ದರು.

‘ಇಬ್ಬರು ಮಕ್ಕಳ ಜೊತೆ ವಾಸವಿದ್ದ ರೇಖಾ, ಕಚೇರಿಗೆ ನಿತ್ಯವೂ ಬಂದು ಹೋಗುತ್ತಿದ್ದರು. ದಿನಸಿ ಕಿಟ್ ವಿತರಣೆ, ಆಹಾರದ ಪೊಟ್ಟಣ ವಿತರಣೆ ಮಾಡುತ್ತಿದ್ದರು. ಕಚೇರಿಯೊಳಗೆ ಗುರುವಾರ ಬೆಳಿಗ್ಗೆ ಹೆಚ್ಚಿನ ಜನರಿದ್ದರು. ಅಲ್ಲಿ ಹತ್ಯೆ ಮಾಡಲು ಆಗುವುದಿಲ್ಲವೆಂದು ರೇಖಾ ಅವರನ್ನು ಆರೋಪಿ ಹೊರಗೆ ಕರೆದುಕೊಂಡು ಬಂದಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕಚೇರಿ ಬಳಿ ಹಾಗೂ ಸುತ್ತಮುತ್ತ 7 ಸಿ.ಸಿ.ಟಿ.ವಿ ಕ್ಯಾಮೆರಾಗಳಿವೆ. ಎಲ್ಲ ಕ್ಯಾಮೆರಾಗಳನ್ನು ಮೇಲಕ್ಕೆ ಮುಖ ಮಾಡಿ ತಿರುಗಿಸಿಡಲಾಗಿದೆ. ಅದು ನೇರವಾಗಿದ್ದರೆ, ಘಟನೆ ದೃಶ್ಯ ಸೆರೆಯಾಗುತ್ತಿತ್ತು. ಆರೋಪಿಗಳ ಸುಳಿವು ಬೇಗನೇ ಸಿಗುತ್ತಿತ್ತು’ ಎಂದೂ ಮೂಲಗಳು ತಿಳಿಸಿವೆ.

'ಆರೋಪಿಗಳು ಪರಾರಿಯಾಗಿರುವ ದೃಶ್ಯಗಳು ಕೆಲ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅವುಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದೂ ಹೇಳಿವೆ.

‘ಪತಿ ಕೊಂದವರಿಂದಲೇ ಪತ್ನಿ ಹತ್ಯೆ’

‘ರೇಖಾ ಅವರ ಹತ್ಯೆ ನೋವು ತಂದಿದೆ. ಕದಿರೇಶ್ ಅವರನ್ನು ಕೊಂದು ಜೈಲಿಗೆ ಹೋಗಿ ಬಂದವರೇ ಇದೀಗ ರೇಖಾ ಅವರನ್ನೂ ಹತ್ಯೆ ಮಾಡಿರುವ ಅನುಮಾನವಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೊಲೆ ಹಿಂದೆ ಕುಟುಂಬದವರ ಕೈವಾಡ ಇದೆಯೋ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪೊಲೀಸ್ ಕಮಿಷನರ್ ಜೊತೆ ಮಾತನಾಡಿ, 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿದ್ದಾರೆ’ ಎಂದರು.

‘ಆರೋಪಿಗಳಿಗೆ ಜಮೀರ್ ಬೆಂಬಲ’

‘ರೇಖಾ ಅವರು ವಾರ್ಡ್‌ನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದರು. ಐದಾರು ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದ್ದು, ವಾರ್ಡ್‌ನಲ್ಲಿ ರೇಖಾ ಅವರು ಗೆಲ್ಲುತ್ತಾರೆಂಬ ಕಾರಣಕ್ಕೆ ಈ ಹತ್ಯೆ ಮಾಡಲಾಗಿದೆ’ ಎಂದು ಬಿಜೆಪಿ ಮುಖಂಡ ಎನ್‌.ಆರ್‌. ರಮೇಶ್ ಆರೋಪಿಸಿದರು.

ಘಟನಾ ಸ್ಥಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕದಿರೇಶ್ ಹತ್ಯೆ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯಲಿಲ್ಲ. ಆರೋಪಿಗಳಿಗೆ ಶಾಸಕ ಜಮೀರ್ ಅಹಮ್ಮದ್ ಖಾನ್ ಬೆಂಬಲ ನೀಡಿದ್ದರು. ತನಿಖೆ ಸರಿಯಾಗಿ ನಡೆಯದ ಕಾರಣಕ್ಕೆ ಮತ್ತೊಂದು ಜೀವ ಹೋಗಿದೆ’ ಎಂದರು.

‘ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲ’

‘ರೇಖಾ ನನ್ನ ತಂಗಿ ಇದ್ದಂತೆ. ಕ್ಷೇತ್ರದಲ್ಲಿ ಯಾವುದೇ ಕಾರ್ಯಕ್ರಮವಾದರೂ ಅವರನ್ನು ಆಮಂತ್ರಿಸುತ್ತಿದ್ದೆ. ಅವರ ಕೊಲೆ ನನಗೆ ಆಘಾತವನ್ನುಂಟು ಮಾಡಿದೆ. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹತ್ಯೆ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷಿಸಬೇಕು’ ಎಂದು ಶಾಸಕ ಜಮೀರ್ ಅಹಮ್ಮದ್ ಖಾನ್ ಒತ್ತಾಯಿಸಿದರು.

ಆಸ್ಪತ್ರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೊಲೆಯಲ್ಲೂ ರಾಜಕೀಯ ಮಾಡಿ ನನ್ನ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಕೊಲೆ ಸಂಗತಿ ತಿಳಿದು ಆಸ್ಪತ್ರೆಗೆ ಬಂದಿದ್ದೇನೆ. ರೇಖಾ ಅವರ ಮಕ್ಕಳು ಅನಾಥರಾಗಿದ್ದಾರೆ. ಅವರನ್ನು ಕಾಪಾಡುವ ಕೆಲಸ ನಾನು ಮಾಡುತ್ತೇನೆ’ ಎಂದರು.

‘ಆರೋಪಿಗಳ ಶೀಘ್ರ ಬಂಧನ’

ಹಾವೇರಿ: ಬೆಂಗಳೂರಿನ ಮಾಜಿ‌ ಕಾರ್ಪೋರೇಟರ್‌ ಬಿಜೆಪಿಯ ರೇಖಾ ಕದಿರೇಶ್ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಅವರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅತಿ ಶೀಘ್ರದಲ್ಲಿ ಕೊಲೆ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT