ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮುಖಂಡ ಆತ್ಮಹತ್ಯೆ: ಹೃದಯಾಘಾತ ನಾಟಕ, ಅರ್ಧ ಸುಟ್ಟಿರುವ ವೇಲ್ ಪತ್ತೆ

ಅರ್ಧ ಸುಟ್ಟಿರುವ ವೇಲ್ ಪತ್ತೆ: ಪತ್ನಿ ಮೇಲೂ ಅನುಮಾನ
Last Updated 27 ಮೇ 2022, 3:55 IST
ಅಕ್ಷರ ಗಾತ್ರ

ಬೆಂಗಳೂರು: ಹೆರೋಹಳ್ಳಿ ವಾರ್ಡ್‌ನ ಬಿಜೆಪಿ ಮುಖಂಡ ಬಿ.ಪಿ. ಅನಂತರಾಜು (46) ಆತ್ಮಹತ್ಯೆ ಪ್ರಕರಣದ ತನಿಖೆ ಮುಂದುವರಿದಿದ್ದು, ಅವರು ನೇಣು ಹಾಕಿಕೊಳ್ಳಲು ಬಳಸಿದ್ದರು ಎನ್ನಲಾದ ವೇಲ್ ಅರ್ಧ ಸುಟ್ಟಿರುವ ಸ್ಥಿತಿಯಲ್ಲಿ ಪೊಲೀಸರಿಗೆ ಸಿಕ್ಕಿದೆ.

‘ಹನಿಟ್ರ್ಯಾಪ್‌ ಜಾಲಕ್ಕೆ ಸಿಲುಕಿ ಪತಿಅನಂತರಾಜು ಮೇ 12ರಂದು ಸಂಜೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂಬುದಾಗಿ ಪತ್ನಿ ಸುಮಾ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಕೆ.ಆರ್.ಪುರ ನಿವಾಸಿ ರೇಖಾ ಹಾಗೂ ಇತರರನ್ನು ಬಂಧಿಸಿದ್ದರು.

‘ಅನಂತರಾಜು ಸಾವಿಗೆ ಪತ್ನಿ ಸುಮಾ ಕಾರಣ’ ಎಂಬುದಾಗಿ ಬಂಧಿತ ಆರೋಪಿಗಳು ಹೇಳಿಕೆ ನೀಡಿದ್ದರಿಂದ, ಪ್ರಕರಣ ಹೊಸ ಆಯಾಮ ಪಡೆದುಕೊಂಡಿದೆ. ಪತ್ನಿ ಮೇಲೂ ಅನುಮಾನ ವ್ಯಕ್ತಪಡಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಹೃದಯಾಘಾತ ನಾಟಕ: ‘ಮನೆಯ ಕೊಠಡಿಯೊಳಗೆ ಹೋಗಿದ್ದ ಅನಂತರಾಜು, ಹಲವು ಗಂಟೆಯಾದರೂ ಬಾಗಿಲು ತೆರೆದಿರಲಿಲ್ಲ. ಮಗಳು ಹೋಗಿ ಬಾಗಿಲು ಬಡಿದರೂ ಪ್ರತಿಕ್ರಿಯಿಸಿರಲಿಲ್ಲ. ನಕಲಿ ಕೀ ಬಳಸಿ ಕೊಠಡಿ ಬಾಗಿಲು ತೆರೆದಾಗ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತಿಯ ಮೃತದೇಹ ಕಂಡಿತು’ ಎಂಬುದಾಗಿ ಪತ್ನಿ ಸುಮಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು, ‘ಮೃತದೇಹವನ್ನು ಇಳಿಸಿದ್ದ ಪತ್ನಿ ಹಾಗೂ ಇತರರು, ಆತ್ಮಹತ್ಯೆ ವಿಷಯ ಮುಚ್ಚಿಡಲು ಯತ್ನಿಸಿದ್ದರು. ಹೃದಯಾಘಾತವಾಗಿರುವುದಾಗಿ ಸ್ಥಳೀಯರಿಗೆ ಹೇಳಿದ್ದರು. ನಂತರ, ಮೃತದೇಹವನ್ನು ಸಮೀಪದ ನರ್ಸಿಂಗ್ಹೋಮ್‌ಗೆ ತೆಗೆದುಕೊಂಡು ಹೋಗಿದ್ದರು. ತಪಾಸಣೆ ನಡೆಸಿದ್ದ ವೈದ್ಯರು, ಗಂಟೆಗೂ ಮುನ್ನವೇ ಅನಂತರಾಜು ಮೃತಪಟ್ಟಿರುವುದಾಗಿ ತಿಳಿಸಿದ್ದರು. ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಆಸ್ಪತ್ರೆಯವರೇ ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಅನಂತರಾಜು ಮೃತರಾದ ದಿನ ಯಾರೊಬ್ಬರೂ ದೂರು ನೀಡಿರಲಿಲ್ಲ. ಆಸ್ಪತ್ರೆ ಮಾಹಿತಿ ಆಧರಿಸಿ ಪೊಲೀಸರೇ ಮಾಹಿತಿ ಕಲೆಹಾಕುತ್ತಿದ್ದರು. ಮೂರು ದಿನಗಳ ನಂತರ ಪತ್ನಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಇದು ಸಹ ಅನುಮಾನಕ್ಕೆ ಕಾರಣವಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ವೇಲ್‌ ಸುಡುವಂತೆ ಸೂಚನೆ: ‘ಅನಂತರಾಜು ನೇಣು ಹಾಕಿಕೊಳ್ಳಲು ಬಳಸಿದ್ದರು ಎನ್ನಲಾದ ವೇಲ್‌ ಅನ್ನು ಕೆಲಸಗಾರರಿಗೆ ನೀಡಿದ್ದ ಸುಮಾ, ಸುಟ್ಟು ಹಾಕುವಂತೆ ಹೇಳಿದ್ದರು’ ಎಂದು ಪೊಲೀಸ್ ಮೂಲಗಳು ವಿವರಿಸಿವೆ.

‘ಕೆಲಸಗಾರ, ನಿರ್ಜನ ಪ್ರದೇಶವೊಂದರಲ್ಲಿ ವೇಲ್ ಸುಟ್ಟು ಬಂದಿದ್ದ. ಮಳೆ ಬಂದಿದ್ದರಿಂದ, ಅರ್ಧ ವೇಲ್ ಮಾತ್ರಸುಟ್ಟಿತ್ತು. ಉಳಿದ ಅರ್ಧ ವೇಲ್ ಪತ್ತೆ ಮಾಡಿ, ಪರೀಕ್ಷೆಗೆಂದು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದೂ ಮೂಲಗಳು ಹೇಳಿವೆ.

*

ಅನಂತರಾಜು ಸಾವಿನ ಬಗ್ಗೆ ಅನುಮಾನವಿದೆ. ಮರಣೋತ್ತರ ಪರೀಕ್ಷೆ, ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದ ಬಳಿಕವೇ ನಿಖರ ಮಾಹಿತಿ ತಿಳಿಯಲಿದೆ.
–ಸಂಜೀವ್ ಪಾಟೀಲ, ಪಶ್ಚಿಮ ವಿಭಾಗದ ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT