ಶುಕ್ರವಾರ, ಸೆಪ್ಟೆಂಬರ್ 17, 2021
23 °C

ಯಡಿಯೂರಪ್ಪ ಮನೆಗೆ ಶಾಸಕರ ದಂಡು; ಸಚಿವ ಸ್ಥಾನಕ್ಕಾಗಿ ಬಿಎಸ್‌ವೈ ಸುತ್ತ ಗಿರಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಲು ಕೆಲವು ಶಾಸಕರು ದೆಹಲಿಗೆ ಹೋಗಿದ್ದರೆ, ಇನ್ನು ಕೆಲವು ಶಾಸಕರು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸುತ್ತ ಗಿರಕಿ ಹೊಡೆಯಲಾರಂಭಿಸಿದ್ದಾರೆ.

ಮಂತ್ರಿ ಮಂಡಲ ವಿಸ್ತರಣೆಗೆ ಸಂಬಂಧಿಸಿದಂತೆ ಬೊಮ್ಮಾಯಿ ದೆಹಲಿಗೆ ಹೋಗಿರುವ ಬೆನ್ನಲ್ಲೇ ಸೋಮವಾರ ಬೆಳಗ್ಗಿನಿಂದಲೇ ಹಲವು ಶಾಸಕರು ಯಡಿಯೂರಪ್ಪ ಅವರನ್ನು ಕಾವೇರಿಯಲ್ಲಿ ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಲಾರಂಭಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಭೇಟಿಯಾದ ಪ್ರಮುಖ ಶಾಸಕರೆಂದರೆ ಎಸ್‌.ಆರ್‌.ವಿಶ್ವನಾಥ್, ಪ್ರೀತಂಗೌಡ, ಮಸಾಲೆ ಜಯರಾಂ, ಎಂ.ಪಿ.ಕುಮಾರಸ್ವಾಮಿ, ಆರಗ ಜ್ಞಾನೇಂದ್ರ, ದೊಡ್ಡನಗೌಡ ಪಾಟೀಲ, ವಿಧಾನಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್, ಕುಮಾರಸ್ವಾಮಿ, ದೊಡ್ಡನಗೌಡ ಪಾಟೀಲ ಮುಂತಾದವರು ತಮ್ಮ ಬೆಂಬಲಿಗರ ಜತೆಯೇ ಯಡಿಯೂರಪ್ಪ ಅವರ ಮನೆಗೆ ಬಂದಿದ್ದರು. ಆದರೆ, ಯಡಿಯೂರಪ್ಪ ಅವರು ಯಾವುದೇ ಭರವಸೆ ನೀಡದೇ ವರಿಷ್ಠರ ನಿರ್ಧಾರವೇ ಅಂತಿಮ, ನೋಡೋಣ ಎಂದಷ್ಟೇ ಹೇಳಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೆಲವು ಸ್ವಾಮೀಜಿಗಳು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ. ಎಂಟಿಬಿ ನಾಗರಾಜ್ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಶಾಸಕ ನೆಹರೂ ಓಲೇಕಾರ್‌ ಅವರ ಬೆಂಬಲಿಗರು ಯಡಿಯೂರಪ್ಪ ಮನೆಯ ಮುಂದೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಘೋಷಣೆ ಕೂಗಿದರು.

ಇನ್ನೂ ಸಾಕಷ್ಟು ಶಾಸಕರು ಸಚಿವ ಸ್ಥಾನಕ್ಕೆ ಒತ್ತಡ ಹೇರಲು ಬೆಂಗಳೂರಿಗೆ ಬರುತ್ತಿದ್ದಾರೆ. ಜಿ.ಎಚ್‌.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮಾ, ಗೂಳಿಹಟ್ಟಿ ಶೇಖರ್‌ ಸಚಿವ ಸ್ಥಾನಕ್ಕಾಗಿ ತಮ್ಮದೇ ಆದ ರೀತಿಯಲ್ಲಿ  ಒತ್ತಡ ಹೇರುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು