ಭಾನುವಾರ, ನವೆಂಬರ್ 29, 2020
25 °C

ಬಿಜೆಪಿಯವರು ಗೋಡ್ಸೆ ವಂಶಸ್ಥರು: ಸಿದ್ದರಾಮಯ್ಯ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ದೇಶ ಪ್ರೇಮಕ್ಕೂ ಬಿಜೆಪಿಗೂ ಎಲ್ಲಿಂದ ಎಲ್ಲಿಯ ಸಂಬಂಧ? ಗಾಂಧಿ ಕೊಂದ ಗೋಡ್ಸೆ ವಂಶಸ್ಥರು ಇಂದು ದೇಶ ಪ್ರೇಮದ ಬಗ್ಗೆ ಮಾತನಾಡುತ್ತಾರೆ’ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಸರ್ದಾರ್‌ ವಲ್ಲಭಭಾಯಿ ಪಟೇಲರ ಜನ್ಮ ದಿನಾಚರಣೆ, ಮಾಜಿ ಪ್ರಧಾನಿ ಇಂದಿರಾಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರು ಗೋಡ್ಸೆಯನ್ನು ಆರಾಧಿಸುತ್ತಾರೆ. ಮತ್ತೊಂದು ಕಡೆ ದೇಶಪ್ರೇಮಿಗಳು ಎಂದು ಹೇಳಿಕೊಳ್ಳುತ್ತಾರೆ. ಇದು ಇಮಾಂ ಸಾಬಿಗೂ ಮತ್ತು ಗೋಕುಲಾಷ್ಟಮಿಗೆ ಇರುವಂಥ ಸಂಬಂಧ’ ಎಂದು ಲೇವಡಿ ಮಾಡಿದರು.

‘ದೇಶಕ್ಕಾಗಿ ಬಿಜೆಪಿಯ ಒಬ್ಬರೂ ಸತ್ತಿಲ್ಲ. ಕಾಂಗ್ರೆಸಿಗರು ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ.‌ ಖಾಲಿಸ್ತಾನ್ ಹೋರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇದ್ದಿದ್ದರೆ ಇಂದಿರಾಗಾಂಧಿ ಹತ್ಯೆ ಆಗುತ್ತಿರಲಿಲ್ಲ’ ಎಂದರು.

‘ಪ್ರಧಾನಿಯಾಗಿದ್ದ ನೆಹರೂ ಮತ್ತು ಆಗಿನ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನಡುವೆ ಉತ್ತಮ ಹೊಂದಾಣಿಕೆಯಿತ್ತು. ಆದರೆ, ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸಿ ಇತಿಹಾಸ ತಿರುಚುವ ಯತ್ನ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದ ಸಿದ್ದರಾಮಯ್ಯ, ‘ರಾಮಾಯಣ, ಮಹಾಭಾರತ, ಶಾಕುಂತಲೆಯಂಥ ಮಹಾ ಕಾವ್ಯಗಳನ್ನು ಬರೆದವರು ಹಿಂದುಳಿದ ಸಮುದಾಯಗಳಿಗೆ ಸೇರಿದ ದಾರ್ಶನಿಕರು. ಮೇಲ್ಜಾತಿಯವರು ಯಾರೂ ಬರೆದಿಲ್ಲ’ ಎಂದರು.

ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಇಂದಿರಾಗಾಂಧಿ ಅವರು ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದರು, ಗರೀಬಿ ಹಠಾವೋ ಜಾರಿಗೆ ತಂದರು, ಬಡವರ ಪರವಾಗಿ 20 ಅಂಶಗಳ ಕಾರ್ಯಕ್ರಮ ಘೋಷಿಸಿದಾಗ ಕೆಲವರು ವಿರೋಧ ಮಾಡಿದರು. ಆ ಕಾರಣಕ್ಕಾಗಿ ಕಾಂಗ್ರೆಸ್ ವಿಭಜನೆಯಾಯಿತು’ ಎಂದರು.

‘ಭೂ ಸುಧಾರಣೆಯಂಥ ಅನೇಕ ದಿಟ್ಟ ನಿರ್ಧಾರಗಳನ್ನು ಇಂದಿರಾಗಾಂಧಿ ಕೈಗೊಂಡರು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು