ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರ ವಾಸಿಗಳಿಗೆ ಕುಡಿಯಲು ’ಕಪ್ಪು ನೀರು’ ಸರಬರಾಜು!

ತಿಪ್ಪಗೊಂಡನಹಳ್ಳಿ ಜಲಾಶಯದ ಒಳಹರಿವಿನಲ್ಲಿ ಒಳಚರಂಡಿಗಿಂತ ಕೈಗಾರಿಕೆ ತ್ಯಾಜ್ಯವೇ ಹೆಚ್ಚು
Published 13 ಅಕ್ಟೋಬರ್ 2023, 22:23 IST
Last Updated 13 ಅಕ್ಟೋಬರ್ 2023, 22:23 IST
ಅಕ್ಷರ ಗಾತ್ರ

ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯದಿಂದ 11 ವರ್ಷಗಳ ನಂತರ ರಾಜಧಾನಿಗೆ ಪೂರೈಸಲು ಯೋಜಿಸಿರುವ ಕುಡಿಯುವ ನೀರು ಬಳಕೆಗೆ ಯೋಗ್ಯವಾಗಿಲ್ಲ. ಗಾಢ ಕಪ್ಪು ನೀರು ಜಲಾಶಯಕ್ಕೆ ಹರಿಯುತ್ತಿದ್ದು, ಎಂತಹದೇ ಸಂಸ್ಕರಣಾ ವಿಧಾನದಿಂದ ಅದನ್ನು ಶುದ್ಧಗೊಳಿಸಲು ಸಾಧ್ಯವಿಲ್ಲದಷ್ಟು ನೀರು ಕಲುಷಿತವಾಗಿದೆ.

ಟಿ.ಜಿ.ಹಳ್ಳಿ ಜಲಾನಯನ ಪ್ರದೇಶದಲ್ಲಿ ಬಫರ್‌ ವಲಯದ ಜೊತೆಗೆ ನದಿ ಕಾಲುವೆಯನ್ನೇ ಒತ್ತುವರಿ ಮಾಡಿಕೊಂಡಿರುವ ಕೈಗಾರಿಕೆಗಳು, ರಾಸಾಯನಿಕಯುಕ್ತ ತ್ಯಾಜ್ಯವನ್ನು ನದಿಗೆ ಹರಿಸುತ್ತಿವೆ. ಹೀಗಾಗಿ ಟಿ.ಜಿ.ಹಳ್ಳಿ ಜಲಾಶಯದ ನೀರು ಯಾವ ಬಳಕೆಗೂ ಯೋಗ್ಯವಲ್ಲ (ಇ– ವರ್ಗ) ಎಂದು ಪ್ರಯೋಗಾಲಯದ ಫಲಿತಾಂಶಗಳೊಂದಿಗೆ ಅರಣ್ಯ ಇಲಾಖೆಯ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ‍್ರಿ) 2015ರಲ್ಲಿ ವರದಿ ನೀಡಿದೆ.

ಈ ವರದಿಯ ನಂತರವೂ ಕೈಗಾರಿಕೆ ಹಾಗೂ ವಾಣಿಜ್ಯ– ವಸತಿ ಪ್ರದೇಶಗಳು ಬಫರ್‌ ವಲಯ ಹಾಗೂ ಅಕ್ಕಪಕ್ಕ ಅತಿಹೆಚ್ಚಾಗಿವೆ. ಇದರಿಂದ ‘ಗಾಢ ಕಪ್ಪು ನೀರಿನ ಹರಿವನ್ನು’ ಇಂದಿಗೂ ಹೆಸರಘಟ್ಟ– ತಿಪ್ಪಗೊಂಡನಹಳ್ಳಿ ಜಲಾಶಯದ ನಡುವೆ ಕಾಣಬಹುದು. ಇಂತಹ ನೀರನ್ನು ಹೈಟೆಕ್‌ ತಂತ್ರಜ್ಞಾನದಿಂದ ಸಂಸ್ಕರಿಸಿ, ₹300 ಕೋಟಿ ವೆಚ್ಚ ಮಾಡಿ ನಗರಕ್ಕೆ ಕುಡಿಯುವ ನೀರಾಗಿ ಸರಬರಾಜು ಮಾಡಲು ಬಿಡಬ್ಲ್ಯುಎಸ್‌ಎಸ್‌ಬಿ ಕಾಮಗಾರಿ ನಡೆಸುತ್ತಿದೆ.

ಪೀಣ್ಯದಿಂದ ದಾಸನಪುರ ಕೈಗಾರಿಕೆ ಮತ್ತು ನಗರೀಕರಣ ಪ್ರದೇಶಗಳಿಂದ ಒಳಚರಂಡಿ ನೀರು, ರಾಸಾಯನಿಕ ತ್ಯಾಜ್ಯ ನೇರವಾಗಿ ನದಿ ಹರಿವಿನಲ್ಲಿ ಸೇರಿಕೊಳ್ಳುತ್ತಿದೆ. ಈ ಭಾಗದಲ್ಲಿ ಅಂತರ್ಜಲ ಕೂಡ ಕಲುಷಿತಗೊಂಡಿದೆ. ಘನತ್ಯಾಜ್ಯದೊಂದಿಗೆ ಗ್ರಾನೈಟ್‌ ಸ್ಲರ‍್ರಿ, ಗಾರ್ಮೆಂಟ್‌ ಡೈ ಸೇರಿದಂತೆ ಅನಧಿಕೃತ ಡೈಯಿಂಗ್‌ ಮತ್ತು ಎಲೆಕ್ಟ್ರೋಪ್ಲೇಟಿಂಗ್‌ ಸಣ್ಣ ಕೈಗಾರಿಕೆಗಳ ತ್ಯಾಜ್ಯ ನದಿಪಾತ್ರಕ್ಕೆ ನೇರವಾಗಿ ಸೇರುತ್ತಿದೆ.

ಮಾನವನ ದೇಹಕ್ಕೆ ಅತಿಹೆಚ್ಚು ಹಾನಿಕಾರಕವಾದ ಕೋಲಿಫಾರ್ಮ್‌ ಬ್ಯಾಕ್ಟೀರಿಯಾ ಈ ಹರಿವಿನಲ್ಲಿ ಹೆಚ್ಚಿದೆ. 100 ಎಂ.ಎಲ್‌ಗೆ ಶೂನ್ಯವಿರಬೇಕಾದ ಕೋಲಿಫಾರ್ಮ್‌ ಅಂಶ, ಇಲ್ಲಿ 50 ಎಂಪಿಎನ್‌ ಇದೆ. ಹೀಗೆ ಎಲ್ಲ ರೀತಿಯಿಂದಲೂ ಕಲುಷಿತಗೊಂಡಿರುವ ನೀರನ್ನು ಅದೆಷ್ಟೇ ಸಂಸ್ಕರಿಸಿದರೂ, ಅದನ್ನು ಕುಡಿಯಲು ಯೋಗ್ಯವಾಗಿಸಲು ಸಾಧ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯ.

ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2023ರ ಆಗಸ್ಟ್‌ನಲ್ಲಿ ವರದಿ ಬಿಡುಗಡೆ ಮಾಡಿದ್ದು, ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ಬಹುತೇಕ ಕೆರೆಗಳಲ್ಲಿನ ನೀರು ಇ–ವರ್ಗ ಎಂದು ತಿಳಿಸಲಾಗಿದೆ. ಅಂದರೆ, ಈ ನೀರು ಯಾವ ಬಳಕೆಗೂ ಯೋಗ್ಯವಲ್ಲ. ಈ ನೀರು ಅರ್ಕಾವತಿ ನದಿ ಮೂಲಕ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಸೇರುತ್ತಿದೆ.

ಪೀಣ್ಯ ಸಮೀಪದ ಕರಿಹೋಬನಹಳ್ಳಿ ಕೆರೆಯಿಂದ ಹರಿಯುತ್ತಿರುವ ರಾಸಾಯನಿಕಯುಕ್ತ ನೀರು
ಪೀಣ್ಯ ಸಮೀಪದ ಕರಿಹೋಬನಹಳ್ಳಿ ಕೆರೆಯಿಂದ ಹರಿಯುತ್ತಿರುವ ರಾಸಾಯನಿಕಯುಕ್ತ ನೀರು

ನದಿಗೆ ಯಾವ ಗ್ರಾಮದಿಂದ ತ್ಯಾಜ್ಯ?

* ಆಲೂರು ಹೆಗ್ಗಡೆದೇವನಪುರ ಮಾಕಳಿ ಮಾದನಾಯಕನಹಳ್ಳಿ ಕದರನಹಳ್ಳಿ ಗೌಡಹಳ್ಳಿ ಕಮ್ಮಸಂದ್ರ ಬೆಟ್ಟಹಳ್ಳಿ ಕಿತ್ತನಹಳ್ಳಿ ಗಟ್ಟಿಸಿದ್ದನಹಳ್ಳಿ ಗಿಡ್ಡೇನಹಳ್ಳಿ; ಒಳಚರಂಡಿ ನೀರು

* ಹಾರೋಕ್ಯಾತನಹಳ್ಳಿ ರಾವೋತ್ತನಹಳ್ಳಿ ಗಂಗೇನಹಳ್ಳಿ; ನೊರೆಯುಕ್ತ ಒಳಚರಂಡಿ ನೀರು

* ವರ್ತೂರು; ತಾವರೆಕೆರೆ ಸೊಂಡೆಕೊಪ್ಪ ಗ್ರಾಮಗಳ ಮುಖ್ಯರಸ್ತೆ ಸುತ್ತಮುತ್ತಲಿನಿಂದ ಘನತ್ಯಾಜ್ಯ ಕೋಳಿ ತ್ಯಾಜ್ಯದ ಒಳಚರಂಡಿ ನೀರು

* ನಾಗಸಂದ್ರ; ಕೃಷಿ ಚಟುವಟಿಕೆಯ ತ್ಯಾಜ್ಯಯುಕ್ತ ಒಳಚರಂಡಿ ನೀರು ಜೋಗೇರಹಳ್ಳಿ; ಒತ್ತುವರಿಯಾಗಿರುವ ಭೂಮಿಯಲ್ಲಿನ ತೋಟಗಾರಿಕೆ ಬೆಳೆ ಕೃಷಿ ತ್ಯಾಜ್ಯದ ಒಳಚರಂಡಿ ನೀರು

* ದೊಡ್ಡಕರೇನಹಳ್ಳಿ; ಘನತ್ಯಾಜ್ಯ ಹತ್ತಿ ಇಂಜೆಕ್ಷನ್‌ ಬಾಟಲ್‌ ಸಿರಿಂಜ್‌ ಹಾಗೂ ಅದರ ಪ್ಯಾಕೇಜ್‌ಗಳು ಸೇರಿದಂತೆ ವೈದ್ಯ ತ್ಯಾಜ್ಯಗಳು ನದಿಗೆ ಸೇರುತ್ತಿವೆ

ನಿಗದಿಯಾಗಿರುವುದನ್ನು ಉಳಿಸುತ್ತಾರಾ?

ಟಿ.ಜಿ.ಹಳ್ಳಿ ಜಲಾನಯನ ಪ್ರದೇಶದಲ್ಲಿ ಬಫರ್‌ ವಲಯ 2003ರಲ್ಲಿ ನಿಗದಿಯಾಗಿದ್ದನ್ನು ಯಾರೂ ಪಾಲಿಸಲಿಲ್ಲ. ಅನಧಿಕೃತ ನಿರ್ಮಾಣಗಳೇ ಹೆಚ್ಚು. 2019ರಲ್ಲಿ ಬಫರ್‌ ವಲಯ ಕಡಿಮೆ ಮಾಡಿ ಆದೇಶಿಸಿದ್ದು ಅದನ್ನಾದರೂ ಉಳಿಸುತ್ತಾರಾ ಎಂಬುದೇ ಪ್ರಶ್ನೆ. ನಿಗದಿಯಾಗಿರುವ ಬಫರ್‌ ವಲಯದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳು ನಡೆಯಬಾರದು ಎಂಬ ಆದೇಶವಿದೆ. ಬಫರ್‌ ವಲಯ ಕಡಿಮೆ ಆದೇಶ ಅನುಷ್ಠಾನಗೊಳಿಸಿದರೆ ಕೈಗಾರಿಕೆ ವಾಣಿಜ್ಯ ಪ್ರದೇಶಗಳು ಅಧಿಕೃತವಾಗಿ ಇನ್ನಷ್ಟು ಹೆಚ್ಚಾಗುತ್ತವೆ. ಕಲ್ಮಶ ಇನ್ನಷ್ಟು ಅಧಿಕವಾಗಿ ಹರಿಯುತ್ತದೆ. ನಿರ್ಮಲ ಗೌಡ ಸಹ ಸಂಸ್ಥಾಪಕಿ paani.earth ಜನರಿಗೆ ‘ಸ್ಲೋ–ಪಾಯಿಸನ್‌’! ಕೈಗಾರಿಕೆ ತ್ಯಾಜ್ಯವನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಾಗುವುದಿಲ್ಲ. ಇಂಥ ನೀರೇ ಹರಿಯುತ್ತಿರುವ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಕುಡಿಯುವ ನೀರನ್ನು ಜನಕ್ಕೆ ನೀಡಿದರೆ ಅದು ‘ಸ್ಲೋ–ಪಾಯಿಸನ್‌’ ನಂತಾಗುತ್ತದೆ. ಪೀಣ್ಯ ಕೈಗಾರಿಕೆ ಪ್ರದೇಶಗಳಲ್ಲಿ ಎಲ್ಲ ರೀತಿಯ ‘ಅಪಾಯಕಾರಿ ಕೈಗಾರಿಕೆಗಳಿದ್ದು’ ಅವೆಲ್ಲವುದರ ರಾಸಾಯನಿಕ ತ್ಯಾಜ್ಯ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸೇರುತ್ತಿದೆ. ಕರಿಹೋಬನ ಹಳ್ಳಿ ಕೆರೆ ಹೆಸರಿಗೆ ತಕ್ಕಂತೆ ಕಪ್ಪು ನೀರಿನ ಗುಂಡಿಯಾಗಿದೆ. ಅದು ತುಂಬಿ ಅರ್ಕಾವತಿ ನದಿ ಸೇರುತ್ತಿದೆ. ಈ ಬಗ್ಗೆ ವರ್ಷಗಳಿಂದ ದೂರು ನೀಡಿದರೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಯಾರೂ ಕ್ರಮಕೈಗೊಂಡಿಲ್ಲ.
-ಗೌಡಯ್ಯ ಪರಿಸರ ಕಾರ್ಯಕರ್ತ

‘ಬಫರ್‌ ಕಡಿಮೆ: ನನ್ನ ಗಮನಕ್ಕೇ ಬಂದಿಲ್ಲ’

‘ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ಬಫರ್ ವಲಯವನ್ನು ಕಡಿಮೆ ಮಾಡಿರುವ ಆದೇಶ ನನ್ನ ಗಮನಕ್ಕೇ ಬಂದಿಲ್ಲ’ ಎಂದು 2019ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು ‘ಅಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದ ಜಿ. ಪರಮೇಶ್ವರ ಅರಣ್ಯ ಸಚಿವರಾಗಿದ್ದ ಸತೀಶ ಜಾರಕಿಹೊಳಿ ಅವರು ಬಫರ್‌ ವಲಯವನ್ನು ಕಡಿಮೆ ಮಾಡಿ ಆದೇಶ ಹೊರಡಿಸಲು ಕಾರಣರಾಗಿದ್ದಾರೆ. ಅಂತಹ ಎಷ್ಟೋ ಕಡತಗಳಿಗೆ ನನಗೆ ಗೊತ್ತಿಲ್ಲದೇ ಅನುಮೋದನೆ ನೀಡಿರಬಹುದು ಸಚಿವ ಸಂಪುಟ ಅಥವಾ ಬೇರೆ ಸಭೆಯಲ್ಲಿ ಅಂತಹ ಯಾವುದೇ ಟಿಪ್ಪಣಿಗೂ ನಾನು ಸಹಿ ಹಾಕಿಲ್ಲ. ಅದರಲ್ಲಿ ನನ್ನ ಪಾತ್ರವಿಲ್ಲ ’ ಎಂದು ಅವರು ಹೇಳಿದರು.

ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದಲ್ಲಿ ಬಫರ್‌ ವಲಯವನ್ನು 1 ಕಿ.ಮೀನಿಂದ 500 ಮೀಟರ್‌ಗೆ ಇಳಿಸಿ 2019ರ ಜುಲೈ 20ರಂದು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT