ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ತಿಂಗಳು ಅಲೆದರೂ ಸಿಕ್ಕಿಲ್ಲ ಕೋವಿಡ್‌ ಪರಿಹಾರ

ಕೊರೊನಾ ಸೋಂಕಿಗೆ 39 ಸಿಬ್ಬಂದಿಯನ್ನು ಕಳೆದುಕೊಂಡ ಬಿಬಿಎಂಪಿ l ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ ಕುಟುಂಬಗಳು
Last Updated 19 ಮೇ 2021, 19:43 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ನಿಂದ ಪತಿ ಕೊನೆಯುಸಿರೆಳೆದ ಬಳಿಕ ನಮ್ಮ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರದಿಂದ ಸಿಗಬೇಕಾದ ಪರಿಹಾರದ ಹಣಕ್ಕಾಗಿ 10 ತಿಂಗಳುಗಳಿಂದ ಓಡಾಡುತ್ತಿದ್ದೇನೆ. ಇನ್ನೂ ಕೈ ಸೇರಿಲ್ಲ. ಈಗ ನಗರದ ತುಂಬೆಲ್ಲ ಕೋವಿಡ್‌ ಹಬ್ಬಿರುವಾಗ ಬಿಬಿಎಂಪಿ ಕಚೇರಿಗೆ ಓಡಾಡುವುದಕ್ಕೂ ಭಯ ಆಗುತ್ತಿದೆ...’

ಚಂದ್ರಾ ಲೇಔಟ್‌ನ ಕಂದಾಯ ಅಧಿಕಾರಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿದ್ದ ಶೈಲೇಶ್‌ ಅವರ ಪತ್ನಿ ಸುಮಾ ಅವರ ನೋವಿನ ಮಾತುಗಳಿವು. ಕುಟುಂಬದ ಆಧಾರ ಸ್ತಂಭವಾಗಿದ್ದ ಶೈಲೇಶ್‌ ಅವರನ್ನು ಕಳೆದುಕೊಂಡ ಬಳಿಕ ಕುಟುಂಬ ನಿತ್ಯವೂ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.

‘ಅಧಿಕಾರಿಗಳು ಕೇಳಿದ ದಾಖಲೆಗಳೆಲ್ಲವನ್ನೂ ನೀಡಿದ್ದೇವೆ. ಆದರೂ ಪರಿಹಾರ ನೀಡಲು ಸತಾಯಿಸುತ್ತಿದ್ದಾರೆ. ಪತಿ ನರಳಿ ನರಳಿ ಸತ್ತಿದ್ದನ್ನು ಹತ್ತಿರದಿಂದ ನೋಡಿದವರು ನಾವು. ಪತಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಒದಗಿಸಲು ಎಷ್ಟು ಕಷ್ಟಪಟ್ಟಿದ್ದೇವೆ ಎಂಬುದು ನಮಗೆ
ಮಾತ್ರ ಗೊತ್ತು. ಈಗ ನಮಗೂ ಕೋವಿಡ್‌ ಬಂದರೆ ಏನು ಮಾಡುವುದು ಎಂಬ ಭಯವೂ ಕಾಡುತ್ತಿದೆ’ ಎಂದರು.

‘ನಾಗರಬಾವಿಯಲ್ಲಿ 20x30 ವಿಸ್ತೀರ್ಣದ ನಿವೇಶನದಲ್ಲಿ ಮನೆ ನಿರ್ಮಿಸಲು ಮಾಡಿದ್ದ ಸಾಲಕ್ಕೆ ತಿಂಗಳಿಗೆ ₹25 ಸಾವಿರ ಕಂತು ಕಟ್ಟಬೇಕಿದೆ. ಬ್ಯಾಂಕ್‌ ವ್ಯವಸ್ಥಾಪಕರನ್ನು ಮಾತನಾಡಿ ಪರಿಸ್ಥಿತಿ ವಿವರಿಸಿದ ಬಳಿಕ ಕಾಲಾವಕಾಶ ನೀಡುವುದಾಗಿ ಹೇಳಿದ್ದಾರೆ. ಪತಿಯ ಭವಿಷ್ಯ ನಿಧಿಯ ಸ್ವಲ್ಪ ಹಣ ಸಿಕ್ಕಿತು. ಅದು ಸಾಲ ತೀರಿಸಲು ಖರ್ಚಾಗಿದೆ. ತಂಗಿಯ ಕುಟುಂಬದವರು ಸ್ವಲ್ಪ ನೆರವಾ
ಗುತ್ತಿದ್ದಾರೆ. ಇಲ್ಲದಿದ್ದರೆ ಊಟಕ್ಕೂ ಸಮಸ್ಯೆ ಎದುರಿಸಬೇಕಾಗುತ್ತಿತ್ತು’ ಎಂದು ಅವರು ಅಳಲು ತೋಡಿಕೊಂಡರು.

ಶೈಲೇಶ್‌ ಅವರ ಮಗ ಬಿ.ಎಸ್‌.ವಿಖ್ಯಾತ್‌ ಪದವೀಧರ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಲಾಕ್‌ಡೌನ್‌ ವೇಳೆ ಉದ್ಯೋಗ ಕಳೆದುಕೊಂಡಿದ್ದಾರೆ. ಅನುಕಂಪದ ಆಧಾರದಲ್ಲಿ ಕೆಲಸ ಕೊಡುವುದಾಗಿ ಬಿಬಿಎಂಪಿ ಭರವಸೆ ನೀಡಿದೆ. ಅದರೆ, ಈ ಭರವಸೆಯೂ ಈಡೇರಿಲ್ಲ.

ಇದು ಶೈಲೇಶ್‌ ಅವರ ಕುಟುಂಬವೊಂದರ ಕತೆಯಲ್ಲ. ನಾಗಪುರ ವಾರ್ಡ್‌ನಲ್ಲಿ ಕಂದಾಯ ಪರಿವೀಕ್ಷಕರಾಗಿದ್ದ ರವಿ ಅವರ ಕುಟುಂಬದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

‘ತಂದೆ ತುಂಬಾ ಸಾಲ ಮಾಡಿಕೊಂಡಿದ್ದರು. ಅವರು ಕೊನೆಯುಸಿರೆಳೆದ ಬಳಿಕ ನಮಗೆ ₹8.5 ಲಕ್ಷ ಬಂದಿದೆ. ಆ ಹಣ ಸಾಲ ತೀರಿಸಲು ಸಾಕಾಗಿಲ್ಲ. ಈಗಲೂ ₹ 6 ಲಕ್ಷ ಸಾಲದ ಹೊರೆ ಇದೆ. ನಾವು ಈಗಲೂ ಬಾಡಿಗೆ ಮನೆಯಲ್ಲಿದ್ದೇವೆ. ಮನೆಯಲ್ಲಿ ದುಡಿಯುವವರೇ ಇಲ್ಲ. ಪಿಂಚಣಿ ಬರಲು ಶುರುವಾಗಿದ್ದು, ಸದ್ಯಕ್ಕೆ ಊಟಕ್ಕೆ ಸಮಸ್ಯೆ ಇಲ್ಲ. ಕೋವಿಡ್ ಪರಿಹಾರದ ಹಣ ಕೈ ಸೇರಿದರೆ ನಮ್ಮ ಪರಿಸ್ಥಿತಿ ಸುಧಾರಿಸುತ್ತದೆ’ ಎಂದು ರವಿ ಅವರ ಪುತ್ರಿ ಶೆರೀನಾ ‘ಪ್ರಜಾವಾಣಿ’ಗೆ ಪರಿಸ್ಥಿತಿ ವಿವರಿಸಿದರು.

ಯಲಹಂಕದ ಓಲ್ಡ್‌ಟೌನ್‌ನ ಬಿಬಿಎಂಪಿ ಕಚೇರಿಯಲ್ಲಿ ಮೌಲ್ಯಮಾಪಕರಾಗಿದ್ದ ನಟರಾಜ್‌ ಅವರೂ 2020ರ ಜುಲೈ 14 ರಂದು ಕೋವಿಡ್‌ನಿಂದ ಮರಣ ಹೊಂದಿದ್ದರು. ಅವರ ಕುಟುಂಬವೂ ಸಮಸ್ಯೆ ಎದುರಿಸುತ್ತಿದೆ.

‘ಪತಿಯ ಭವಿಷ್ಯನಿಧಿ ಹಾಗೂ ಗ್ರಾಚ್ಯುಟಿ ಹಣ ಕೈಸೇರಿದೆ. ಆದರೆ, ಮನೆ ನಿರ್ಮಿಸಲು ಮಾಡಿದ ₹ 10 ಲಕ್ಷ ಸಾಲವಿದೆ. ನನ್ನ ಮಗನಿಗೆ ಸದ್ಯ ಕೆಲಸವಿಲ್ಲ. ಅವನಿಗೆ ಕೆಲಸ ಕೊಡುವುದಾಗಿ ಬಿಬಿಎಂಪಿ ಹೇಳಿದೆ. ಅದು ಸಿಕ್ಕರೆ ಸ್ವಲ್ಪ ನಿಟ್ಟುಸಿರು ಬಿಡಬಹುದು. ನನ್ನ ಮಗಳು ವೈದ್ಯೆ. ಅವಳು ಈಗ ಇಂಟರ್ನ್‌ಶಿಪ್‌ ಮಾಡುತ್ತಿದ್ದಾಳೆ. ಕುಟುಂಬಕ್ಕೆ ಪಿಂಚಣಿ ಹೊರತಾಗಿ ಬೇರೆ ಆದಾಯದ ಮೂಲವಿಲ್ಲ. ಪಿಂಚಣಿ ಹಣ ಬರಲು ಆರಂಭವಾಗಿದೆ. ಆದರೆ, ಆ ದುಡ್ಡೆಲ್ಲ ಸಾಲ ಮರು ಪಾವತಿ ಹೋಗುತ್ತಿದೆ’ ಎಂದು ನಟರಾಜ್ ಅವರ ಪತ್ನಿ ಸರಸ್ವತಿ ಪರಿಸ್ಥಿತಿ ವಿವರಿಸಿದರು.

***

ವಿಮೆ ಮೊತ್ತವನ್ನು ಒದಗಿಸುವ ಹೊಣೆಯನ್ನು ಆಯಾ ವಲಯದ ಅಧಿಕಾರಿಗಳಿಗೆ ವಹಿಸಿದ್ದೇವೆ. ಪರಿಹಾರವನ್ನು ಶೀಘ್ರವೇ ತಲುಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ.

- ಗೌರವ್‌ ಗುಪ್ತ, ಬಿಬಿಎಂಪಿ ಮುಖ್ಯ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT