ಭಾನುವಾರ, ಮೇ 9, 2021
19 °C
ಕೊರೊನಾ ಎರಡನೇ ಅಲೆ: ಟೋಕನ್‌ ವಿತರಣೆ ಸದ್ಯಕ್ಕಿಲ್ಲ

ಸಂಪೂರ್ಣ ಸಾಮರ್ಥ್ಯದ ಕಾರ್ಯಾಚರಣೆಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೋವಿಡ್‌ ಎರಡನೇ ಅಲೆ ಕಾಣಿಸಿಕೊಳ್ಳುತ್ತಿದ್ದು, ‘ನಮ್ಮ ಮೆಟ್ರೊ’ದಲ್ಲಿ ಸದ್ಯಕ್ಕೆ ಟೋಕನ್‌ ವಿತರಣೆ ಮಾಡುವ, ಪೂರ್ಣ ಸಾಮರ್ಥ್ಯದೊಂದಿಗೆ (ಎಲ್ಲ ಸೀಟುಗಳ ಭರ್ತಿ) ಸಂಚಾರ ಆರಂಭಿಸುವ ಸಾಧ್ಯತೆ ಮತ್ತೆ ಕ್ಷೀಣಿಸಿದೆ.

ಒಂದೆರಡು ತಿಂಗಳುಗಳ ಹಿಂದೆ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದಾಗ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ರೈಲಿನಲ್ಲಿ ಕೆಲವು ನಿರ್ಬಂಧ ತೆರವುಗೊಳಿಸಿ, ಸಂಪೂರ್ಣ ಆಸನಗಳ ಭರ್ತಿಯೊಂದಿಗೆ ಕಾರ್ಯಾಚರಣೆಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಕೇಂದ್ರದ ಆದೇಶ ಬರುವಷ್ಟರಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಿರ್ಬಂಧ ತೆರವು ಸದ್ಯಕ್ಕೆ ಆಗುವುದಿಲ್ಲ ಎಂದು ನಿಗಮದ ಮೂಲಗಳು ಹೇಳಿವೆ. 

‘ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿದೆ. ಕೆಲವು ಕಂಪನಿಗಳಲ್ಲಿ ಮತ್ತೆ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಪ್ರಾರಂಭವಾಗಿದೆ. ನಿರ್ಬಂಧ ತೆರವಿಗೆ ಪ್ರಸ್ತಾವ ಸಲ್ಲಿಸಿದ್ದು, ಮತ್ತೊಮ್ಮೆ ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದೆವು. ಆದರೆ, ಪರಿಸ್ಥಿತಿ ನೋಡಿದರೆ ಈಗಿರುವ ವ್ಯವಸ್ಥೆಯೇ ಮುಂದುವರಿಯುವುದು ಬಹುತೇಕ ನಿಶ್ಚಿತ’ ಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

ನಿತ್ಯ 1.70 ಲಕ್ಷ ಪ್ರಯಾಣಿಕರು:

ಈಗ ಮೆಟ್ರೊ ರೈಲಿನಲ್ಲಿ ಒಂದು ಆಸನ ಬಿಟ್ಟು ಕುಳಿತು ಪ್ರಯಾಣಿಸಲು ಮಾತ್ರ ಅವಕಾಶ ಇದೆ. ಇದರಿಂದ ನಿತ್ಯ ಸರಾಸರಿ 1.60 ಲಕ್ಷದಿಂದ 1.70 ಲಕ್ಷ ಜನ ಮಾತ್ರ ಪ್ರಯಾಣಿಸುತ್ತಿದ್ದು, ಸರಾಸರಿ ₹60 ಲಕ್ಷ ವರಮಾನ ಹರಿದು ಬರುತ್ತಿದೆ. ಕೊರೊನಾ ಪೂರ್ವದಲ್ಲಿ ಈ ಪ್ರಮಾಣ ದುಪ್ಪಟ್ಟು ಅಂದರೆ 4 ಲಕ್ಷದವರೆಗೆ ಜನ ಪ್ರಯಾಣಿಸುತ್ತಿದ್ದರು ಹಾಗೂ ₹1.30 ಕೋಟಿವರೆಗೂ ವರಮಾನ ಬರುತ್ತಿತ್ತು.

ಈಗ ನಿಗಮಕ್ಕೆ ನಿತ್ಯ ₹60 ಲಕ್ಷ ಆದಾಯದಲ್ಲಿ ಖೋತಾ ಆಗುತ್ತಿದೆ. ನಿರ್ಬಂಧ ತೆರವುಗೊಳಿಸಿದ್ದರೆ, ಕನಿಷ್ಠ ಶೇ 20ರಷ್ಟು ಆದಾಯ ಹೆಚ್ಚಾಗಬಹುದಿತ್ತು.

ನೆರೆ ರಾಜ್ಯಗಳಲ್ಲಿ ಟೋಕನ್:

ತಮಿಳುನಾಡಿನ ಚೆನ್ನೈನಲ್ಲಿ ಟೋಕನ್‌ ವಿತರಣೆ ವ್ಯವಸ್ಥೆ ಮರುಪ್ರಾರಂಭಿಸಲಾಗಿದೆ. ಹೈದರಾಬಾದ್‌ನಲ್ಲಿ ಕೂಡ ಕ್ಯೂಆರ್ ಕೋಡ್ ವ್ಯವಸ್ಥೆ ಇದ್ದು, ಮೊಬೈಲ್‌ನಲ್ಲೇ ಸ್ಕ್ಯಾನ್ ಮಾಡಿ, ಪ್ರಯಾಣಿಕರು ಸಂಚರಿಸುತ್ತಾರೆ. ನಮ್ಮ ಮೆಟ್ರೊದಲ್ಲಿಯೂ ಇಂತಹ ಪರ್ಯಾಯ ವ್ಯವಸ್ಥೆ ರೂಪಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸುತ್ತಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು