ಬುಧವಾರ, ಆಗಸ್ಟ್ 4, 2021
24 °C

ಕೆಂಗೇರಿ ಮಾರ್ಗ: 27ಕ್ಕೆ ಪರಿಶೀಲನೆಗೆ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ‘ ಎರಡನೇ ಹಂತದಲ್ಲಿ ಮೈಸೂರು ರಸ್ತೆಯ ವಿಸ್ತರಿತ ಮಾರ್ಗದಲ್ಲಿ ಜುಲೈ ಮೊದಲ ವಾರದಿಂದ ಮೆಟ್ರೊ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದ್ದು, ಮಾರ್ಗವನ್ನು ಇದೇ 27ಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್‌) ಪರಿಶೀಲನೆ ನಡೆಸಲಿದ್ದಾರೆ.

ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿ ನಿಲ್ದಾಣದವರೆಗಿನ 7.53 ಕಿ.ಮೀ. ಉದ್ದದ ಮಾರ್ಗದಲ್ಲಿ ಈಗಾಗಲೇ ಭೌತಿಕ ಕಾಮಗಾರಿ ಪೂರ್ಣಗೊಂಡಿದೆ. ಸಿಗ್ನಲಿಂಗ್, ದೂರಸಂವಹನ ಸಂಬಂಧಿತ ವ್ಯವಸ್ಥೆ ಅಳವಡಿಕೆಯೂ ಬಹುತೇಕ ಪೂರ್ಣಗೊಂಡಿದೆ.

‘ಸಿಆರ್‌ಎಸ್‌ಗೆ ಕಾಮಗಾರಿ ಪ್ರಗತಿಯ ಕುರಿತ ಎಲ್ಲ ದಾಖಲೆಗಳನ್ನು ಸಲ್ಲಿಸಲಾಗಿದೆ. ಕೆಲವು ಅಂಶಗಳ ಬಗ್ಗೆ ಸಿಆರ್‌ಎಸ್‌ ಸ್ಪಷನೆ ಕೇಳಿದೆ. ಅದಕ್ಕೆ ನಾವು ಪ್ರತಿಕ್ರಿಯೆ ನೀಡಬೇಕು. ಪ್ರತಿಕ್ರಿಯೆ ನೀಡಿದ ಕೆಲವೇ ದಿನಗಳಲ್ಲಿ ಸಿಆರ್‌ಎಸ್‌ ಪರಿಶೀಲನೆಯ ದಿನಾಂಕವನ್ನು ತಿಳಿಸಲಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಅಧಿಕಾರಿಯೊಬ್ಬರು ತಿಳಿಸಿದರು.

‘ಇಡೀ ಮಾರ್ಗ ಪರಿಶೀಲನೆಗೆ ಸಿದ್ಧವಾಗಿದೆ. ಉಳಿದ ಸಣ್ಣ–ಪುಟ್ಟ ಕೆಲಸಗಳನ್ನು ಯಾವುದೇ ಕ್ಷಣದಲ್ಲಿ ಬಗೆಹರಿಸಬಹುದಾಗಿದೆ. ಪರಿಶೀಲನೆ ಸಂದರ್ಭದಲ್ಲಿ ಯಾವುದಾದರೂ ಸಲಹೆ ನೀಡಿದರೆ, ಪ್ರಶ್ನೆ ಕೇಳಿದರೆ ಪರಿಹರಿಸಲು ಅಥವಾ ಸಲಹೆ ಪರಿಗಣಿಸುವ ಕೆಲಸ ನಿಗಮ ಮಾಡಲಿದೆ. ಜುಲೈನಲ್ಲಿ ಹಸಿರು ನಿಶಾನೆ ದೊರೆಯುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

ಈ ಮಾರ್ಗವು ಸಾರ್ವಜನಿಕ ಸೇವೆಗೆ ಮುಕ್ತವಾದರೆ ನಿತ್ಯ 75 ಸಾವಿರ ಜನ ಪ್ರಯಾಣಿಸುವ ಸಾಧ್ಯತೆ ಇದೆ. ಈ ವಿಸ್ತರಿತ ಮಾರ್ಗದಲ್ಲಿ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್‌ ನಿಲ್ದಾಣ ಹಾಗೂ ಕೆಂಗೇರಿ ಮೆಟ್ರೊ ನಿಲ್ದಾಣ ಬರಲಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು